`ಸೋಮೇಶ್ವರ ಶತಕ’ ಕೃತಿ ಲೋಕಾರ್ಪಣೆ
ದಾವಣಗೆರೆ, ನ.24- ಕಾವ್ಯವಾಚನವು ಪ್ರತಿಭೆ ಮತ್ತು ಪಾಂಡಿತ್ಯದ ಸಮ್ಮಿಲನವಾಗಿದ್ದು, ಕಾವ್ಯದ ರಚನೆ ಶಬ್ದಾರ್ಥ ಸಹಿತಂ ಆಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ಕುಮಾರ ಚಲ್ಯ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು, ಸಂವಹನ ಪ್ರಕಾಶನ ಹಾಗೂ ಮಳಲ್ಕೆರೆ ಗುರುಮೂರ್ತಿ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ `ಸೋಮೇಶ್ವರ ಶತಕ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹಳಗನ್ನಡ ಕಾವ್ಯವು ಗಂಭೀರವಾದದ್ದು, ಇದು ಕಷ್ಟಕರ ವ್ಯಾಕರಣವನ್ನು ಹೊಂದಿದ್ದರಿಂದ ಕಾವ್ಯದಲ್ಲಿ ದೋಷವಿಲ್ಲ, ಅದನ್ನು ಅರ್ಥೈಸಿಕೊಳ್ಳುವ ಓದುಗ ವಲಯದಲ್ಲಿ ದೌರ್ಬಲ್ಯವಿದೆ ಎಂದು ಹೇಳಿದರು.
ವಿದ್ವಾಂಸರು, ಕೃತಿಗಳನ್ನು ಓದುವ ಮುನ್ನ ಅದನ್ನು ಅವತರಿಸಿ, ಪುರಸ್ಕರಿಸುವ ಜತೆಗೆ ಗಮನಿಸಿ, ಅರ್ಥೈಸಿಕೊಂಡಾಗ ಮಾತ್ರ ಅದರಲ್ಲಿನ ಲೋಪ-ದೋಷ ಹಾಗೂ ಕೃತಿಯ ಗುಣ ಕಂಡು ಹಿಡಿಯಲು ಸಾಧ್ಯವಾಗಲಿದೆ ಎಂದರು.
ಓದಲು ಕ್ಲಿಷ್ಟಕರವಾದ ಹಳಗನ್ನಡ ವನ್ನು ನಾವು ಇಂದಿನ ದಿನಮಾನಗಳಲ್ಲಿ ದೂರ ತಳ್ಳುತ್ತಿರುವುದರಿಂದ ಸಮಾಜದಲ್ಲಿ ವೃದ್ಧರು ವೃದ್ಧಾಶ್ರಮ ಸೇರಿದಂತೆ, ಅರ್ವಾಚೀನರಿಂದ ಹಳೆಗನ್ನಡ ಕೃತಿಗಳು ಮೂಲೆಗುಂಪಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ವ್ಯಾಕರಣ, ಛಂದಸ್ಸು, ಅಲಂಕಾರ ಶಾಸ್ತ್ರ ಮತ್ತು ಹಳಗನ್ನಡವನ್ನು ಸರಿಯಾದ ಕ್ರಮ ಹಾಗೂ ಶಿಸ್ತು ಬದ್ಧವಾಗಿ ಓದಿಕೊಂಡು ಪಾಠ ಮಾಡುವವರ ಸಂಖ್ಯೆ ಪ್ರಸಕ್ತ ದಿನಗಳಲ್ಲಿ ಕಡಿಮೆ ಆಗುತ್ತಿದೆ ಎಂದು ವಿಷಾಧಿಸಿದರು.
ಹಳಗನ್ನಡ ಕಾವ್ಯ ಮತ್ತು ಮಧ್ಯಕಾಲಿನ ಕನ್ನಡ ಸಾಹಿತ್ಯವನ್ನು ನಾವು ಅರ್ಥೈಸಿಕೊಳ್ಳಲು ಏಕಾಗ್ರತೆವುಳ್ಳ ನೈಜ ಸಾಹಿತ್ಯ ಅಭಿರುಚಿ ಇರುವ ಸಾಹಿತ್ಯ ಪರಿಷತ್ತಿನಂತಹ ಗುಂಪುಗಳು ಬೇಕಾಗಿದ್ದು, ಕಿರುಚುವರು ಮತ್ತು ಅರಚುವವರ ಮಧ್ಯೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳು ಉಳಿಯುವುದಿಲ್ಲ.
– ಡಾ. ಕುಮಾರ ಚಲ್ಯ, ವಿಶ್ರಾಂತ ಪ್ರಾಚಾರ್ಯ.
103 ವರ್ಷದ ಕನ್ನಡ ಸಾಹಿತ್ಯವನ್ನು ನಾವು ನವೋದಯ, ಪ್ರಗತಿಶೀಲ, ನವ್ಯ, ನವ್ಯೋತ್ತರ, ದಲಿತ ಹಾಗೂ ಬಂಡಾಯ ಎಂಬುದಾಗಿ ಸರಳೀಕೃ ತಗೊಳಿಸಿದ್ದೇವೆ. ಆದರೆ ಹಲ್ಮಿಡಿ ಶಾಸನದಿಂದ ಆರಂಭವಾದ ಕನ್ನಡ ಸಾಹಿತ್ಯ ರಚನೆಯನ್ನು ಚಾರಿ ತ್ರಿಕ ಪ್ರಜ್ಞೆಯಿಂದ ಓದದೇ ಇದ್ದರೆ. ಮುಂದಿನ ತಲೆಮಾರಿಗೆ ಈ ಸಾಹಿತ್ಯ ತಲುಪಿಸುವುದು ಕಷ್ಟವಾಗಲಿದೆ ಎಂದು ಆತಂಕ ಪಟ್ಟರು.
ಪ್ರಸ್ತುತ ದಿನಗಳಲ್ಲಿ ಒಳರಾಜಕೀಯ, ಜಾತೀ ಯತೆ, ಗುಂಪುಗಾರಿಕೆ ಹಾಗೂ ಭ್ರಷ್ಟಾಚಾರದಿಂ ದಾಗಿ ಅಧ್ಯಯನಶೀಲತೆ ಮರೀಚಿಕೆಯಾಗಿದ್ದು, ಯುವ ವಿದ್ವಾಂಸರು ಮತ್ತು ಅಧ್ಯಯನ ಸಂಸ್ಥೆಗಳು ಕಾಣಿಸುತ್ತಿಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರವೂ ಭ್ರಷ್ಟಾಚಾರದಿಂದ ಕೂಡಿದೆ ಎಂದು ದೂರಿದರು.
ಸಿರಿಗೆರೆ ನಾಗರಾಜ ಪ್ರಾಸ್ತಾವಿಕ ಮಾತನಾಡಿ, 4 ಸಾವಿರಕ್ಕೂ ಅಧಿಕ ತ್ರಿಪದಿಗಳನ್ನು ಬರೆದ ಮಳಲ್ಕೆರೆ ಗುರುಮೂರ್ತಿಯವರು `ತ್ರಿಪದಿ ಭೂಷಣ’ ಬಿರುದಿಗೆ ಸೂಕ್ತ ಹಾಗೂ ಅರ್ಥ ಪೂರ್ಣ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.
16ನೇ ಶತಮಾನದ ಮಹಲಿಂಗರಂಗರು ಮತ್ತು ಮಳಲ್ಕೆರೆ ಗುರುಮೂರ್ತಿಯವರು ಜಿಲ್ಲೆಯ ಹೆಮ್ಮೆಯ ಕವಿಗಳಾಗಿದ್ದಾರೆ. ಮಹಲಿಂಗರಂಗರು ಷಟ್ಪದಿಗಳಲ್ಲಿ ಕಾವ್ಯ ರಚಿಸಿದಂತೆ. ಗುರು -ಮೂರ್ತಿಯವರು ಷಟ್ಪದಿ ಹಾಗೂ ತ್ರಿಪದಿಗಳಲ್ಲೂ ಕಾವ್ಯ ಬರೆದಿದ್ದಾರೆ ಎಂದು ಹೆಮ್ಮೆ ಪಟ್ಟರು.
ಈ ವೇಳೆ ವಿಶ್ರಾಂತ ಪ್ರಾಧ್ಯಾಪಕ ಸಿ.ವಿ. ಪಾಟೀಲ್, ಡಾ.ಹಾ.ಮ. ನಾಗರಾಜ್, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ, ಸುಮತಿ ಜಯ್ಯಪ್ಪ, ಅಮೂಲ್ಯ ಎಸ್. ಕಟ್ಟಿ, ಶಿಕ್ಷಕ ಜಗನ್ನಾಥರಾವ್ ಇದ್ದರು.