ಗಣಿತಶಾಸ್ತ್ರ ಎಲ್ಲಾ ವಿಷಯಗಳ ತಾಯಿ: ಪ್ರೊ.ಕುಂಬಾರ

ಗಣಿತಶಾಸ್ತ್ರ ಎಲ್ಲಾ ವಿಷಯಗಳ ತಾಯಿ: ಪ್ರೊ.ಕುಂಬಾರ

ಡಿಆರ್‌ಎಂ ಕಾಲೇಜಿನಿಂದ `ಆಧುನಿಕ ಗಣಿತ ಅಧ್ಯಯನ’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ

ದಾವಣಗೆರೆ, ನ.22- ಗಣಿತಶಾಸ್ತ್ರ ಎಲ್ಲಾ ವಿಷಯಗಳ ತಾಯಿ ಇದ್ದಂತೆ. ಗಣಿತದಲ್ಲಿ ಪರಿಣಿತಿ ಹೊಂದಿದರೆ ಉಳಿದ ವಿಷಯಗಳೂ  ಸುಲಭವಾಗುತ್ತವೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.

ಧ.ರಾ.ಮ. ವಿಜ್ಞಾನ ಕಾಲೇಜು ಗಣಿತ ವಿಭಾಗದ ವತಿಯಿಂದ ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ `ಆಧುನಿಕ ಗಣಿತ ಅಧ್ಯಯನ’ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಗಣಿತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು. 20ನೇ ಶತಮಾನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನದಾಗಿ ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ನಂತರ ದಿನಗಳಲ್ಲಿ ಗಣಿತದ ಬಗ್ಗೆ ಆಸಕ್ತಿ ಕಡಿಮೆಯಾಯಿತು. ಆದರೆ ಈಗ ಮತ್ತೆ ಗಣಿತಶಾಸ್ತ್ರದತ್ತ ಒಲವು ತೋರುತ್ತಿದ್ದಾರೆ. ಉಪನ್ಯಾಸಕರೂ ಸಹ ಗಣಿತ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ತೀವ್ರಗತಿಯ ಅಭಿವೃದ್ಧಿಯಲ್ಲಿರುವ ತಂತ್ರಜ್ಞಾನ ಕ್ಷೇತ್ರವು ಗಣಿತ ಶಾಸ್ತ್ರವನ್ನು ಅವಲಂಬಿಸಿಯೇ ಸಾಗುತ್ತಿದೆ. ಸಾಫ್ಟ್‌ವೇರ್ ತಂತ್ರಾಂಶ ಕ್ಷೇತ್ರದಲ್ಲಿರುವವರಿಗೂ ಗಣಿತ ಶಾಸ್ತ್ರ ಜ್ಞಾನವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ವಿಜ್ಞಾನ ಪದವೀಧರರು ಗಣಿತಶಾಸ್ತ್ರವನ್ನು ಅಲಕ್ಷಿ ಸುವಂತೆಯೇ ಇಲ್ಲ. ಬಹುಮುಖ್ಯವಾಗಿ ಇದರಲ್ಲಿರುವ ಹೊಸಹೊಸ ಚಿಂತನೆ, ಆವಿಷ್ಠಾರಗಳ ಅಧ್ಯಯನ ಅವರ ಭವಿಷ್ಯಕ್ಕೆ ಅತ್ಯಂತ ಅವಶ್ಯಕವಾಗಿರುತ್ತದೆ. ಗಣಿತದಲ್ಲಿ ಪರಿಣಿತರಾಗಿದ್ದವರಿಗೆ ಹಲವಾರು ಕ್ಷೇತ್ರಗಳಲ್ಲಿ ಅವಕಾಶ ಸಿಗುತ್ತವೆ ಎಂದು ಹೇಳಿದರು.

ಡಿಆರ್‌ಎಂ ಕಾಲೇಜು ಪ್ರಾಂಶುಪಾಲರಾದ ಪ್ರೊ.ಎಂ.ಬಿ. ರೂಪಶ್ರೀ, ದಾವಿವಿ ರಿಜಿಸ್ಟ್ರಾರ್‌ನ ಪ್ರೊ. ಮಹಾಭಲೇಶ್ವರ ಯು.ಎಸ್. ಕುವೆಂಪು ವಿವಿ ಛೇರ್ಮನ್ ಪ್ರೊ.ಎಸ್.ಕೆ. ನರಸಿಂಹಮೂರ್ತಿ, ದಾವಣಗೆರೆ ವಿವಿ ಛೇರ್ಮನ್ ಪ್ರೊ.ಬಿ.ಸಿ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

ಸಹಾಯಕ ಪ್ರಾಧ್ಯಾಪಕಿ ಡಾ.ಚೇತನ ಬಿ.ಸಿ. ಅತಿಥಿಗಳನ್ನು ಪರಿಚಯಿಸಿದರು. ಪುಷ್ಪ ಪ್ರಾರ್ಥಿಸಿದರು.  ಡಿಆರ್‌ಎಂ ಕಾಲೇಜು ಐಕ್ಯೂಎಸಿ ಸಂಚಾಲಕ ಡಾ.ಮಂಜುನಾಥ್ ಟಿ. ವಂದಿಸಿದರು.

error: Content is protected !!