ತಕ್ಷಣವೇ ಗುಂಡಿ ಮುಚ್ಚಿಸಲು ಮೇಯರ್ ತಾಕೀತು

ತಕ್ಷಣವೇ ಗುಂಡಿ ಮುಚ್ಚಿಸಲು ಮೇಯರ್ ತಾಕೀತು

ಪಾಲಿಕೆ ಸಾಮಾನ್ಯ ಸಭೆಯಲ್ಲಿ `ಗುಂಡಿ’ ವಾಕ್ಸಮರ, ಹಂದಿ-ನಾಯಿ ಹಾವಳಿ ಪ್ರಸ್ತಾಪ

ದಾವಣಗೆರೆ, ನ.21- ನಗರದ ರಸ್ತೆಗಳಲ್ಲಿರುವ ಗುಂಡಿಗಳ ಬಗ್ಗೆ ಗುರುವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ಚರ್ಚೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರಕ್ಕೂ ಕಾರಣವಾಯಿತು.

ಸಭೆಯ ಆರಂಭದಲ್ಲಿಯೇ ವಿಪಕ್ಷ ನಾಯಕ ಕೆ.ಪ್ರಸನ್ನ ಕುಮಾರ್ ಶೂನ್ಯ ಅವಧಿಯಲ್ಲಿ ಸಮಸ್ಯೆಗಳ ಕುರಿತು ಪ್ರಸ್ತಾಪಿಸಲು ಅನುಮತಿ ಕೇಳಿದರು. ಮೇಯರ್ ಒಪ್ಪಿಗೆ ನೀಡುತ್ತಿದ್ದಂತೆ, ರಸ್ತೆಯಲ್ಲಿ ಗುಂಡಿ ಕುರಿತು `ಜನತಾವಾಣಿ’ಯಲ್ಲಿ ಪ್ರಕಟವಾಗಿದ್ದ ಸುದ್ದಿ ಪ್ರದರ್ಶಿಸುತ್ತಾ, ಮಾಧ್ಯಮಗಳಲ್ಲಿ ಗುಂಡಿಗಳ ಬಗ್ಗೆ ವರದಿಯಾಗಿ ತಿಂಗಳಾದರೂ ಗುಂಡಿ ಮುಚ್ಚಿಸಿಲ್ಲ ಎಂದು ಆರೋಪಿಸಿದರು.

ಕಳೆದ ಸಾಮಾನ್ಯ ಸಭೆಯಲ್ಲಿಯೇ 20 ದಿನಗಳಲ್ಲಿ ಗುಂಡಿಗಳನ್ನು ಮುಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು.  ಆದರೆ ತಿಂಗಳಾದರೂ ಗುಂಡಿಗಳು ಹಾಗೆಯೇ ಇವೆ ಎಂದಾಗ, ಇದಕ್ಕೆ ಸದಸ್ಯರಾದ ಕೆ.ಎಂ. ವೀರೇಶ್, ಶಿವಾನಂದ ಪಾಟೀಲ್ ದನಿಗೂಡಿಸಿದರು. 

ಪಾಲಿಕೆ ಸದಸ್ಯ ಎ.ನಾಗರಾಜ್, ಪಾಲಿಕೆ ವ್ಯಾಪ್ತಿಯಲ್ಲಿನ ಬಹುತೇಕ ಗುಂಡಿಗಳನ್ನು ಮುಚ್ಚಿಸಲಾಗಿದೆ. ಕೆಲವು ರಸ್ತೆಗಳು ಪಿಡಬ್ಲ್ಯೂಡಿ ವ್ಯಾಪ್ತಿಯಲ್ಲಿವೆ. ಪ್ರಚಾರ ಪಡೆಯಲು ಪತ್ರಿಕೆ ಹಿಡಿದು ಆರೋಪಿಸುವುದು ಸರಿಯಲ್ಲ ಎಂದರು. ಗಡಿಗುಡಾಳ್ ಮಂಜುನಾಥ್, ಜಲಸಿರಿ ಕಾಮಗಾರಿ ನಡೆಯುತ್ತಿರುವುದರಿಂದ ಹಲವು ರಸ್ತೆಗಳಲ್ಲಿ ಗುಂಡಿಗಳಾಗುತ್ತಿವೆ ಎಂದಾಗ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. 

ಪಾಲಿಕೆ ಅಭಿಯಂತರರು ಮಾತನಾಡಿ, ಪತ್ರಿಕೆಯಲ್ಲಿ ಬಂದ ಗುಂಡಿ ರಸ್ತೆಗಳಲ್ಲಿ ಅನೇಕ ರಸ್ತೆಗಳು ಬೇರೆ ಬೇರೆ ಇಲಾಖೆಗಳಿಗೆ ಸಂಬಂಧಿಸಿದ್ದು ಅವರಿಗೆ ಲಿಖಿತವಾಗಿ ತಿಳಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಟೆಂಡರ್ ಕರೆದು ಗುಂಡಿ ಮುಚ್ಚಿಸಲು ಆರಂಭಿಸಿದಾಗ ಮತ್ತೆ ಮಳೆ ಬಂತು. ನಂತರ ಗುತ್ತಿಗೆದಾರ ಅಕಾಲಿಕ ಮರಣ ಹೊಂದಿದ. ಈಗ ಮತ್ತೆ ಟೆಂಡರ್ ಕರೆಯಲಾಗಿದೆ ಎಂದರು. ಮೇಯರ್ ಚಮನ್ ಸಾಬ್ ಮಾತನಾಡಿ, ವಾರದೊಳಗೆ ಗುಂಡಿ ಮುಚ್ಚಿಸಲು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ನಗರದಲ್ಲಿ  ನಾಯಿ, ಹಂದಿ ಕಾಟ ಹೆಚ್ಚಾಗಿದೆ. ಅದನ್ನು ನಿಯಂತ್ರಿಸಬೇಕು. ಒಂದಿಷ್ಟು ದಿನ ನಗರದಲ್ಲಿ ಹಂದಿ ಕಾಟ ಕಡಿಮೆಯಾಗಿತ್ತು. ಈಗ ಮತ್ತೆ ಹಂದಿಗಳು ಕಾಣುತ್ತಿವೆ ಎಂದು ಸದಸ್ಯ ಶಿವಾನಂದ್ ಆರೋಪಿಸಿದರು.

ಕಾಂಗ್ರೆಸ್ ಸದಸ್ಯ ಎ. ನಾಗರಾಜ್ ಮಾತನಾಡಿ, ವಿವಿಧ ಕಾರಣಗಳಿಂದಾಗಿ ನಗರದಲ್ಲಿ ಹಂದಿ ಕಾಟ ಕಡಿಮೆ ಯಾಗಿತ್ತು. ಈಗ ಮತ್ತೆ ಶುರುವಾಗಿದೆ. ನಾಯಿ ಕಾಟವೂ ಅತಿಯಾಗಿದೆ. ಈ ಕುರಿತು ತಕ್ಷಣ ಕ್ರಮವಹಿಸಬೇಕಾಗಿದೆ. ನಾಯಿಗಳನ್ನು ಹಿಡಿಯವ ಮೊದಲು ಸಾರ್ವಜನಿಕರಿಗೆ ಸಾಕು ನಾಯಿಗಳನ್ನು ಮನೆ ಕಾಂಪೌಂಡ್ ಒಳಗೆ ಇಟ್ಟು ಕೊಳ್ಳುವಂತೆಯೂ ಸೂಚನೆ ನೀಡಬೇಕು ಎಂದರು. ಪ್ರತಿಪಕ್ಷದ ನಾಯಕ ಪ್ರಸನ್ನಕುಮಾರ್ ಮಾತನಾಡಿ, ಬೀದಿ ನಾಯಿಗಳಿಗೆ ಆಹಾರ ಹಾಕುವವರಿಗೂ ತಿಳಿ ಹೇಳಬೇಕಿದೆ ಎಂದರು.

ಆರೋಗ್ಯ ನಿರೀಕ್ಷಕರು ಮಾತನಾಡಿ, ನಾಯಿಗಳ ಹಾವಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಬಿಟ್ಟರೆ, ಬೇರೆ ಏನೂ ಕ್ರಮ ಕೈಗೊಳ್ಳುವಂತಿಲ್ಲ ಎಂದಾಗ, ಏನಾದರೊಂದು ಪರಿಹಾರ ಹುಡುಕಲೇ ಬೇಕಿದೆ ಎಂದು ನಾಗರಾಜ್ ಹೇಳಿದರು.

ಹಂದಿಗಳ ಸ್ಥಳಾಂತರಕ್ಕೆ ಹಾಗೂ ಸಾಕು ನಾಯಿಗಳನ್ನು ಮನೆಯೊಳಗೆ ಕಟ್ಟಿಕೊಳ್ಳುವಂತೆ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸುವಂತೆಯೂ, ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಕೂಡಲೇ ಆರಂಭಿಸುವಂತೆಯೂ ಮೇಯರ್ ಚಮನ್ ಸಾಬ್ ಅಧಿಕಾರಿಗಳಿಗೆ ಸೂಚಿಸಿದರು.

ನಾಮನಿರ್ದೇಶಿತ ಸದಸ್ಯ ಸಾಗರ್ ಮಾತನಾಡಿ, ಇದ್ದಾಗ ಸಿಬ್ಬಂದಿಯಿಂದ ಕೆಲಸ ಮಾಡಿಸಿಕೊಳ್ಳುವ ಪಾಲಿಕೆ ಅಧಿಕಾರಿಗಳು, ಅವರು ಮೃತಪಟ್ಟಾಗ ಸಾಂತ್ವನ ಹೇಳಿ ಮಾನವೀಯತೆ ಮೆರೆಯಬೇಕು. ಮೊನ್ನೆ ನೌಕರ ಲಕ್ಷ್ಮಣ್ ಆತ್ಮಹತ್ಯೆ ಮಾಡಿಕೊಂಡಾಗ ಸಹಾಯಕ ಅಭಿಯಂತರರು ಯಾರೂ ಮನೆಗೆ ತೆರಳಿ ಸಾಂತ್ವನ ಹೇಳಲಿಲ್ಲ. ಪೌರ ಕಾರ್ಮಿಕರು ಮೃತಪಟ್ಟಾಗ ಅಂತ್ಯಕ್ರಿಯೆಗೆ ನೀಡುವ ಹಣವನ್ನೂ ತಡವಾಗಿ ಕೊಡಲಾಗುತ್ತದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ನಾನಾ ಕೌಟುಂಬಿಕ ಕಾರಣಗಳಿಂದ ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡಿದ್ದು,  ಅವರ ಅವಲಂಬಿತರಿಗೆ ಅಂತ್ಯಕ್ರಿಯೆಗಾಗಿ 15 ಸಾವಿರ ರೂ. ಕೊಡಲಾಗಿದೆ ಎಂದರು. ಜತೆಗೆ ಪಾಲಿಕೆ ನೌಕರರಿಗಾಗಿ ಆರೋಗ್ಯ ವಿಮೆ ಮಾಡಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದರು.

ಸದಸ್ಯ ಕೆ.ಎಂ. ವೀರೇಶ್ ಮಾತನಾಡಿ, ಟಿವಿ ಸ್ಟೇಷನ್‌ ಕರೆ ಏರಿಯ ದುರಸ್ತಿ ಕಾಮಗಾರಿ ಬಗ್ಗೆ ಆಕ್ಷೇಪಿಸಿ, ವಾಯುವಿಹಾರಿಗಳು  ಗುಂಡಿಗೆ ಬೀಳುವಂತಾಗಿದೆ. ಅಲ್ಲದೇ ಬೀದಿ ದೀಪಗಳೂ ಇಲ್ಲದಂತಾಗಿವೆ ಎಂದರು.

ಉಪ ಮೇಯರ್ ಸೋಗಿ ಶಾಂತಕುಮಾರ್ ವೇದಿಕೆಯಲ್ಲಿದ್ದರು. ಇತ್ತೀಚೆಗೆ ನಿಧನರಾದ ನಗರಸಭೆ ಮಾಜಿ ಸದಸ್ಯ ಹೇಮಂತರಾಜ್, ಪಾಲಿಕೆ ನೌಕರ ಲಕ್ಷ್ಮಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.

error: Content is protected !!