ಮಹಿಳೆಯರೇ ಮಹಿಳಾ ಮೀಸಲಾತಿ ವಿರೋಧಿಸಿದ್ದರು

ಮಹಿಳೆಯರೇ ಮಹಿಳಾ ಮೀಸಲಾತಿ ವಿರೋಧಿಸಿದ್ದರು

ತುಮಕೂರು ವಿ.ವಿ. ಸಹ ಪ್ರಾಧ್ಯಾಪಕ ಕೆ.ಸಿ. ಸುರೇಶ್‌

ದಾವಣಗೆರೆ, ನ. 21 – ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಮೊದಲೇ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಪ್ರಸ್ತಾಪಿಸಲಾಗಿತ್ತು.  ಆದರೆ,  ಮಹಿಳೆಯರೇ ಮೀಸಲಾತಿಯನ್ನು ವಿರೋಧಿಸಿದರು ಎಂದು ತುಮಕೂರು ವಿಶ್ವವಿದ್ಯಾಲಯದ ಸಂಯೋಜಕ ಹಾಗೂ ಸಹ ಪ್ರಾಧ್ಯಾಪಕ ಕೆ.ಸಿ. ಸುರೇಶ್ ಹೇಳಿದರು.

ಎ.ವಿ.ಕೆ. ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ §ಮಹಿಳೆಯರ ರಾಜಕೀಯ ಸಬಲೀಕರಣ : ಮಹಿಳಾ ಮಸೂದೆ ವಿಶ್ಲೇಷಣೆ’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

1946ರಲ್ಲಿ ಸಂವಿಧಾನ ರಚನಾ ಸಮಿತಿ ರೂಪಿಸಿದಾಗ ಅದರಲ್ಲಿ 15 ಮಹಿಳೆಯರಿದ್ದರು. ಆ ಸಂದರ್ಭದಲ್ಲಿ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲು ಪ್ರಸ್ತಾಪಿಸಲಾಗಿತ್ತು. ಆದರೆ, 15 ಮಹಿಳೆಯರೂ ಮೀಸಲಾತಿ ಪ್ರಸ್ತಾಪ ವಿರೋಧಿಸಿದರು ಎಂದು ಸುರೇಶ್ ತಿಳಿಸಿದರು.

ಮಹಿಳೆಯರನ್ನು ಅಬಲೆಯರಾಗಿ ನೋಡಬಾರದು. ಮಹಿಳೆಯರು ಹಾಗೂ ಪುರುಷರನ್ನು ಸಮಾನವಾಗಿ ಕಾಣಬೇಕಿದೆ. ಹೀಗಾಗಿ ಮೀಸಲಾತಿ ವಿರೋಧಿಸುವುದಾಗಿ ಮಹಿಳೆಯರು ವಾದ ಮಂಡಿಸಿದ್ದರು. ಇದರಿಂದಾಗಿ ಮಹಿಳಾ ಮೀಸಲಾತಿ ಪ್ರಸ್ತಾಪ ಕೈ ಬಿಡಲಾಯಿತು ಎಂದವರು ಹೇಳಿದರು.

ಆದರೆ, ಸ್ವಾತಂತ್ರ್ಯ ಸಿಕ್ಕ ನಂತರ ಮಹಿಳೆಯರಿಗೆ ಶಾಸನಸಭೆಗಳಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಗಲೇ ಇಲ್ಲ. 1971ರಲ್ಲಿ ಪಂಚಾಯ್ತಿಗಳಿಂದ ಹಿಡಿದು ಪಾರ್ಲಿಮೆಂಟಿನವರೆಗೂ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ.10ರಷ್ಟಿತ್ತು. ಹೀಗಾಗಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಮುನ್ನೆಲೆಗೆ ಬಂದಿತು ಎಂದವರು ತಿಳಿಸಿದರು.

1987ರಲ್ಲಿ ಕರ್ನಾಟಕದವರೇ ಆದ ಮಾರ್ಗರೇಟ್ ಆಳ್ವ ನೇತೃತ್ವದ ಸಮಿತಿಯು ಮಹಿಳೆಯರಿಗೆ ಪಂಚಾಯ್ತಿ, ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮೀಸಲಾತಿ ಕಲ್ಪಿಸಲು ಶಿಫಾರಸ್ಸು ಮಾಡಿತು. ಆದರೆ, 1993-94ರಲ್ಲಿ ಪಂಚಾಯ್ತಿಗಳಲ್ಲಿ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಮಾತ್ರ ಜಾರಿಗೆ ತರಲು ಸಾಧ್ಯವಾಯಿತು ಎಂದು ಸುರೇಶ್ ಹೇಳಿದರು.

1996ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಹೆಚ್.ಡಿ. ದೇವೇಗೌಡರು ಮಹಿಳಾ ಮೀಸಲಾತಿ ಪರ ಮಸೂದೆಯನ್ನು ಮಂಡಿಸಿದರು. ಆದರೆ, ಒ.ಬಿ.ಸಿ. ವರ್ಗಕ್ಕೆ ಒಳಮೀಸಲಾತಿ ಕಲ್ಪಿಸಬೇಕು ಎಂದು ಕೆಲ ಪಕ್ಷಗಳು ಪ್ರತಿಪಾದಿಸಿದವು. ಇದರಿಂದಾಗಿ ಮಸೂದೆ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದರು.

ನಂತರದಲ್ಲಿ ಅಧಿಕಾರಕ್ಕೆ ಬಂದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲಿ ಮೀಸಲಾತಿ ಜಾರಿಗೆ ಪ್ರಯತ್ನಗಳು ನಡೆದವಾದರೂ ಮಸೂದೆಗಳು ಅಂಗೀಕಾರಗೊಳ್ಳಲಿಲ್ಲ ಎಂದು ಹೇಳಿದರು.

2023ರಲ್ಲಿ ಮತ್ತೆ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ಸಾಧ್ಯವಾಯಿತು. ಮುಂದಿನ ಕ್ಷೇತ್ರ ಪುನರ್ವಿಂಗಡಣೆ ನಂತರ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಮಹಿಳೆಯರು ಶೇ.33ರಷ್ಟು ಮೀಸಲಾತಿ ಪಡೆಯಲು ಸಾಧ್ಯವಾಗಲಿದೆ ಎಂದವರು ತಿಳಿಸಿದರು.

ಎ.ವಿ.ಕೆ. ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕ ಆರ್.ಆರ್. ಶಿವಕುಮಾರ್ ಮಾತನಾಡಿ, ಮಹಿಳೆಯರು ಈಗ ಎಲ್ಲ ವಲಯಗಳಲ್ಲಿ ಮುಂದೆ ಬರುತ್ತಿದ್ದಾರೆ. ಈಗ ಮಹಿಳೆಯರು ಹಾಗೂ ಸಮಾಜದ ಮನೋಭಾವ ಬದಲಾಗುವ ಅಗತ್ಯವಿದೆ ಎಂದು ಹೇಳಿದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಆರ್. ಉಷಾ ಮಾತನಾಡಿ, ಮಹಿಳಾ ಮೀಸಲಾತಿ ಮಸೂದೆಯನ್ನು ಬಹುತೇಕ ಸರ್ವಸಮ್ಮತಿಯಿಂದ ಸಂಸತ್ತಿನಲ್ಲಿ ಅಂಗೀಕರಿಸಲಾಗಿದೆ. ಮಹಿಳೆಯರು ರಾಜಕೀಯ ನಾಯಕತ್ವ ಬೆಳೆಸಿಕೊಳ್ಳಲು ಈ ಮೀಸಲಾತಿ ಉಪಯುಕ್ತವಾಗಿದೆ ಎಂದರು.

ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲೆ ಕಮಲಾ ಸೊಪ್ಪಿನ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

error: Content is protected !!