ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

ಜಿಲ್ಲಾಸ್ಪತ್ರೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್

ಸಮಗ್ರ ಅಭಿವೃದ್ಧಿಗೆ 100-150 ಕೋಟಿ ರೂ. ಅಗತ್ಯವಾಗಲಿದ್ದು, ಪ್ರಸಕ್ತ ಸರ್ಕಾರದ ಅವಧಿಯಲ್ಲೇ ಕ್ರಮ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ದಾವಣಗೆರೆ, ನ. 20 – ಜಿಲ್ಲಾ ಸಿ.ಜಿ. ಆಸ್ಪತ್ರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಮಾಸ್ಟರ್ ಪ್ಲಾನ್ ರೂಪಿಸಬೇಕು. ಇದಕ್ಕಾಗಿ 100-150 ಕೋಟಿ ರೂ. ಅಗತ್ಯವಾಗಲಿದ್ದು, ತಮ್ಮ ಈ ಸರ್ಕಾರದ ಅವಧಿಯಲ್ಲೇ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಜಿನಿಯರಿಂಗ್ ಘಟಕ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಟ್ರಾಮಾ ಕೇರ್ ವಿಭಾಗಗಳ ನೂತನ ಕಟ್ಟಡಗಳ ಉದ್ಘಾಟನೆ ನೆರವೇರಿಸಿ, ಅವರು ಮಾತನಾಡಿದರು.

ಸಿ.ಜಿ. ಆಸ್ಪತ್ರೆ ಕಟ್ಟಡ ಒಂದು ಭಾಗದ ನಿರ್ಮಾಣಕ್ಕೆ 17 ಕೋಟಿ ರೂ. ಹಾಗೂ ಮೂಲಭೂತ ಸೌಲಭ್ಯಕ್ಕೆ 6 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆದರೆ, ಇದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಿ.ಜಿ. ಆಸ್ಪತ್ರೆ ಶಿಥಿಲವಾಗಿದ್ದು, ಸಮಗ್ರ ಕಾಮಗಾರಿಯ ಅಗತ್ಯವಿದೆ ಎಂದು ಸಚಿವರು ಹೇಳಿದರು.

ಹಳೆಯ ಕಟ್ಟಡವನ್ನು ಎಷ್ಟೇ ದುರಸ್ತಿ ಮಾಡಿದರೂ ಸಮಸ್ಯೆ ಬಗೆಹರಿಯುವುದಿಲ್ಲ. ಅಧಿಕಾರಿಗಳು ಶೀಘ್ರದಲ್ಲೇ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸಿ.ಜಿ. ಆಸ್ಪತ್ರೆ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ನೆರವು ನೀಡಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಸಿ.ಜಿ. ಆಸ್ಪತ್ರೆಯಲ್ಲಿ ತಾಯಿ ಹಾಲಿನ ಕೇಂದ್ರ ಸ್ಥಾಪಿಸಲಾಗುವುದು. ಸಿ.ಜಿ. ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ನಗರದ ಹಳೆ ಆಸ್ಪತ್ರೆಗೆ ಈಗಾಗಲೇ ರಾಂಪ್ ಮಂಜೂರು ಮಾಡಲಾಗಿದೆ. ಜನವರಿಯಲ್ಲಿ ಸಿ.ಜಿ. ಆಸ್ಪತ್ರೆಗೆ ಎಂ.ಆರ್.ಐ. ಉಪಕರಣ ಪೂರೈಸಲಾಗುವುದು ಎಂದವರು ಹೇಳಿದರು.

ಮಾಯಕೊಂಡದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಹೊರಗುತ್ತಿಗೆಯಲ್ಲಿರುವ ಡಿ ದರ್ಜೆ ಸಿಬ್ಬಂದಿಗೆ ನೇರ ವೇತನ ಪಾವತಿ ವ್ಯವಸ್ಥೆ ಕಲ್ಪಿಸುವ ವಿಷಯವನ್ನು ಕಾನೂನು ಇಲಾಖೆ ಪರಿಶೀಲನೆಗೆ ಕಳಿಸಲಾಗಿದೆ. ಇಲಾಖೆ ಒಪ್ಪಿಗೆ ನೀಡಿದ ನಂತರ ರಾಜ್ಯಾದ್ಯಂತದ ಆಸ್ಪತ್ರೆಗಳ ಹೊರಗುತ್ತಿಗೆ ನೌಕರರನ್ನು ನೇರ ವೇತನ ಪಾವತಿಗೆ ಒಳಪಡಿಸಲಾಗುವುದು ಎಂದು ಗುಂಡೂರಾವ್ ತಿಳಿಸಿದರು.

ಆರೋಗ್ಯ ಹಾಗೂ ಶಿಕ್ಷಣದಿಂದ ಜನರಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆ ಸಿಗುತ್ತದೆ. ಇದರಿಂದ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಹೀಗಾಗಿ ಆರೋಗ್ಯವು ಸರ್ಕಾರದ ಆರನೇ ಗ್ಯಾರಂಟಿ ಆಗಬೇಕಿದೆ ಎಂದವರು ಅಭಿಪ್ರಾಯ ಪಟ್ಟರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಸುಸಜ್ಜಿತ ಕಟ್ಟಡ ಈಗ ನಿರ್ಮಾಣಗೊಂಡಿದೆ. ಇದರ ಜೊತೆಗೆ ಸುಸಜ್ಜಿತ ಸೇವಾ ವ್ಯವಸ್ಥೆಯೂ ಬೇಕಿದೆ. ವೈದ್ಯರು ತಮ್ಮ ಅವಧಿಯಲ್ಲಿ ಆಸ್ಪತ್ರೆಯಲ್ಲಿರಬೇಕು. ಎರಡು ತಿಂಗಳಿಗೊಮ್ಮೆ ಆಸ್ಪತ್ರೆಯ ಸ್ಥಿತಿಗತಿಯ ಕುರಿತು ಪರಿಶೀಲನಾ ಸಭೆ ನಡೆಸಲಾಗುವುದು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವುದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗುತ್ತದೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗಳನ್ನು ಉತ್ತಮ ಪಡಿಸಬೇಕು. ಇಲ್ಲಿ ಬಂದವರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳು ಸಿಗುವಂತಾಗಬೇಕು ಎಂದರು.

ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಸರ್ಕಾರದಿಂದ ಅತ್ಯುತ್ತಮ ಉಪಕರಣಗಳನ್ನು ಪೂರೈಸಲಾಗುತ್ತದೆ. ಆದರೆ, ಕೆಲ ಸಿಬ್ಬಂದಿ ಉಪಕರಣಗಳನ್ನು ನಿಷ್ಕ್ರಿಯಗೊಳಿಸುತ್ತಾರೆ. ಇಲ್ಲಿ ಆ ರೀತಿ ಆಗದೇ ಜನರಿಗೆ ಸೇವೆ ದೊರೆಯಬೇಕು ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.

ವೇದಿಕೆ ಮೇಲೆ ಪಾಲಿಕೆ ಮೇಯರ್ ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಪಾಲಿಕೆ ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್, ಎನ್.ಹೆಚ್.ಎಂ. ಅಭಿಯಾನ ನಿರ್ದೇಶಕ ನವೀನ್, ಡಿ.ಹೆಚ್.ಒ. ಡಾ. ಷಣ್ಮುಖಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!