ಹರಿಹರ, ನ.20- ಕ್ಷೇತ್ರದ ಅಭಿವೃದ್ಧಿ ಪರ ನಾನು ಯಾವತ್ತೂ ಟೀಕೆ ಮಾಡಿಲ್ಲ. ಜನರಿಗೆ ಅನುಕೂಲವಾಗುವಂತಹ ವಿಚಾರಕ್ಕೆ ನಾನು ಎಂದೂ ಅಡ್ಡಿ ಪಡಿಸುವುದಿಲ್ಲ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಶಾಸಕರು ಅಭಿವೃದ್ಧಿಗೆ ಸಹಕಾರ ಕೊಡುತ್ತಿಲ್ಲ ಎಂದು ಸಂಸದರಾದ ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ ಎಂಬ ವಿಷಯವನ್ನು ಪತ್ರಿಕೆಯಲ್ಲಿ ನೋಡಿದ್ದೆ. ಹೀಗಾಗಿ ಅವರ ಹೇಳಿಕೆಯನ್ನು ಟೀಕಿಸಿದ್ದೆ.
ಆದರೆ ಸಂಸದರು, ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ. ಹಾಗಿದ್ದ ಮೇಲೆ ನಾನು ಅವರನ್ನು ಟೀಕಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಸದರು ಹರಿಹರ ತಾಲ್ಲೂಕಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸಬೇಕು. ನಾವು ಸದಾ ಅಭಿವೃದ್ಧಿ ಪರ ಇರುತ್ತೇವೆ ಎಂದು ಹರೀಶ್ ಹೇಳಿದರು.