ಕುಟುಂಬ ರಾಜಕಾರಣದ ಹೇಳಿಕೆಗೆ ಎಸ್ಸೆಸ್ ಗರಂ
ದಾವಣಗೆರೆ, ನ. 20 – ಕುಟುಂಬ ರಾಜಕಾರಣದ ಕುರಿತು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ನೀಡಿದ ಹೇಳಿಕೆಗೆ ಶಾಸಕ ಶಾಮನೂರು ಶಿವಶಂಕ ರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿ.ಜಿ. ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದೆರಡು ಶಾಲೆಗಳನ್ನು ನಡೆಸುವ ವ್ಯಕ್ತಿ ಇಲ್ಲಿ ಬಂದು ಕುಟುಂಬ ರಾಜಕಾರಣ ಎಂದು ಮಾತನಾಡುತ್ತಾರೆ. ಅದಕ್ಕೆ ಸ್ವಾಮೀಜಿ ಒಬ್ಬರು ದನಿಗೂಡಿಸುತ್ತಾರೆ ಎಂದು ಶಾಸಕರು ಸ್ವಾಮೀಜಿ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದರು. ಚುನಾವಣೆಗೆ ಸ್ಪರ್ಧಿಸಿ ಗೆದ್ದ ನಂತರವೇ ಅಧಿಕಾರಕ್ಕೆ ಬಂದಿರುತ್ತೇವೆ. ಹೀಗಾಗಿ ಕುಟುಂಬ ರಾಜಕಾರಣದ ಆರೋಪ ಸಲ್ಲದು. ಬೇರೆಯವರೂ ಚುನಾವಣೆಗೆ ನಿಂತು ಗೆಲ್ಲಲಿ, ಯಾರು ಬೇಡ ಎನ್ನುತ್ತಾರೆ ಎಂದು ಶಿವಶಂಕರಪ್ಪ ಹೇಳಿದರು.
ಇಂತಹ ಹೇಳಿಕೆ ನೀಡುವ ಬದಲು ಸ್ವಾಮೀಜಿ ಕಾವಿ ಬಿಟ್ಟು ಖಾದಿ ತೊಡುವುದೇ ಒಳ್ಳೆಯದು. ಮೊದಲು ಸ್ವಾಮೀಜಿಗಳನ್ನು ನೋಡಿದರೆ ನಮಸ್ಕರಿಸುವ ಭಾವನೆ ಬರುತ್ತಿತ್ತು. ಈಗ ಕೆಲ ಸ್ವಾಮೀಜಿಗಳನ್ನು ನೋಡಿದರೆ ಹೆದರಿಕೆಯೇ ಆಗುತ್ತದೆ. ಅಂತಹ ಪರಿಸ್ಥಿತಿ ಬಂದಿದೆ ಎಂದು ಕಿಡಿ ಕಾರಿದರು.