ಇದುವರೆಗೂ 1672 ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆ
ದಾವಣಗೆರೆ, ನ. 20 – ಜಿಲ್ಲೆಯಲ್ಲಿ 3.67 ಲಕ್ಷ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿಗಳಿದ್ದು, ಇವುಗಳ ಪೈಕಿ 49 ಸಾವಿರದಷ್ಟು ಕುಟುಂಬಗಳು ಅನರ್ಹವಾಗಿವೆ. ಇವುಗಳನ್ನು ಎ.ಪಿ.ಎಲ್.ಗೆ ಬದಲಿಸಬೇಕು ಎಂದು ರಾಜ್ಯದ ಇ- ಆಡಳಿತ ಇಲಾಖೆ ರೂಪಿಸಿರುವ ವರದಿ ತಿಳಿಸಿದೆ.
ಜಿಲ್ಲೆಯಲ್ಲಿ 44,960 ಅಂತ್ಯೋದಯ ಹಾಗೂ 3,23,996 ಬಿಪಿಎಲ್ ಕಾರ್ಡುಗಳಿವೆ. ಈ ಪೈಕಿ 48,925 ಪಡಿತರ ಚೀಟಿದಾರರು ಅನರ್ಹರಿದ್ದಾರೆ ಎಂದು ಇ-ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ಮೂಲಕ ರೂಪಿಸಲಾದ ಮಾಹಿತಿಯಲ್ಲಿ ತಿಳಿಸಲಾಗಿದೆ.
ಈ ಮಾಹಿತಿಯ ಪ್ರಕಾರ, 2,658 ಕುಟುಂಬ ಗಳವರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. 78 ಕುಟುಂಬದವರು ಸರ್ಕಾರಿ ನೌಕರರಾಗಿದ್ದಾರೆ ಹಾಗೂ 44,615 ಕುಟುಂಬದವರ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಹೆಚ್ಚಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲಿಯೇ ಈ ಕುರಿತು ಮಾಹಿತಿ ರೂಪಿಸಲಾಗಿತ್ತು, ಹಾಗೂ ಅಕ್ರಮ ಪಡಿತರದಾರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಜಿಲ್ಲೆಯಲ್ಲಿ ಇದುವರೆಗೂ 1,672 ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಸರ್ಕಾರ ಯಾರ ಪಡಿತರ ಕಾರ್ಡುಗಳನ್ನೂ ರದ್ದುಗೊಳಿಸುತ್ತಿಲ್ಲ, ಕೇವಲ ಎಪಿಎಲ್ ಆಗಿ ಪರಿವರ್ತಿಸುತ್ತಿದೆ.
ಅನರ್ಹಗೊಂಡವರ ಪೈಕಿ 1,073 ಆದಾಯ ತೆರಿಗೆ ಪಾವತಿ ಕುಟುಂಬದವರಾಗಿದ್ದಾರೆ. 34 ಸರ್ಕಾರಿ ನೌಕರರ ಕುಟುಂಬಗಳ ಪಡಿತರ ಚೀಟಿ ರದ್ದುಗೊಳಿಸುವ ಜೊತೆಗೆ 78,320 ರೂ.ಗಳ ದಂಡವನ್ನೂ ವಿಧಿಸ ಲಾಗಿದೆ. 565 ಕುಟುಂಬಗಳ ಆದಾಯ 1.20 ಲಕ್ಷ ರೂ.ಗಳಿಗಿಂತ ಹೆಚ್ಚಿರುವ ಕಾರಣ, ಬಿಪಿಎಲ್ ಕಾರ್ಡ್ ಅನರ್ಹಗೊಳಿಸಲಾಗಿದೆ.
ಯಾರು ಅರ್ಹರಲ್ಲ ?
ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಹೆಚ್ಚಿರುವ ಕುಟುಂಬಗಳು
ಸರ್ಕಾರ ಇಲ್ಲವೇ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳ ಎಲ್ಲಾ ಖಾಯಂ ನೌಕರರು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು ಇತರೆ ಸಂಸ್ಥೆಗಳ ನೌಕರರು. ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್, ವೃತ್ತಿ ತೆರಿಗೆ ಪಾವತಿಸುವ ಕುಟುಂಬಗಳು.
ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿರುವ ಕುಟುಂಬಗಳು.
ಗ್ರಾಮೀಣ ಪ್ರದೇಶವನ್ನು ಹೊರತು ಪಡಿಸಿ ನಗರ ಪ್ರದೇಶಗಳಲ್ಲಿ 1,000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆ ಸ್ವಂತಕ್ಕಾಗಿ ಹೊಂದಿರುವ ಕುಟುಂಬಗಳು.
ಜೀವನೋಪಾಯಕ್ಕಾಗಿ ಓಡಿಸುವ ಒಂದು ವಾಣಿಜ್ಯ ವಾಹನ ಹೊರತು ಪಡಿಸಿ, ನಾಲ್ಕು ಚಕ್ರದ ವಾಹನಗಳನ್ನು ಹೊಂದಿರುವ ಕುಟುಂಬಗಳು.
1.20 ಲಕ್ಷ ರೂ. ಮಿತಿಯೇ ಅನರ್ಹತೆಗೆ ಪ್ರಮುಖ ಕಾರಣ
ಇ-ಆಡಳಿತ ಇಲಾಖೆಯು ಇದುವರೆಗೂ ಕುಟುಂಬಗಳ ವಾರ್ಷಿಕ ಆದಾಯ, ಆದಾಯ ತೆರಿಗೆ ಪಾವತಿ ಹಾಗೂ ಸರ್ಕಾರಿ ನೌಕರಿಯಲ್ಲಿರುವವರನ್ನು ಪರಿಗಣಿಸಿ ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿದೆ. ಈ ಪೈಕಿ ವಾರ್ಷಿಕ 1.20 ಲಕ್ಷ ರೂ.ಗಳ ಆದಾಯ ಹೊಂದಿರುವವರೇ ಅನರ್ಹತೆಯಲ್ಲಿ ಮುಂದಿದ್ದಾರೆ.
ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ತಮ್ಮ ಕುಟುಂಬದ ಆದಾಯ 1.20 ಲಕ್ಷ ರೂ.ಗಳಿಗಿಂತ ಕಡಿಮೆ ಇದೆ ಎಂದು ಅರ್ಜಿದಾರರು ತಿಳಿಸಿರುತ್ತಾರೆ. ಆದರೆ, ಬ್ಯಾಂಕ್ ಸಾಲಕ್ಕಾಗಿ ಅರ್ಜಿ, ಐ.ಟಿ. ರಿಟರ್ನ್ ಸಲ್ಲಿಕೆ ಮತ್ತಿತರೆ ಸಂದರ್ಭಗಳಲ್ಲಿ ಆದಾಯದ ಬಗ್ಗೆ ಬೇರೆ ಮಾಹಿತಿಯನ್ನೇ ನೀಡಿರುತ್ತಾರೆ. ಹೀಗೆ ಬೇರೆ ಬೇರೆ ಮಾಹಿತಿ ನೀಡಿರುವುದು ಬಿಪಿಎಲ್ ಅನರ್ಹ ತೆಗೆ ಕಾರಣವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯ 1,672 ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್ ಆಗಿ ಪರಿವರ್ತನೆಯಾಗಿವೆ. ಆದರೆ, ಇ-ಆಡಳಿತ ಇಲಾಖೆ ರೂಪಿಸಿರುವ ಮಾಹಿತಿಯ ಪ್ರಕಾರ 44,615 ಕುಟುಂಬಗಳ ವಾರ್ಷಿಕ ಆದಾಯ 1.20 ಲಕ್ಷ ರೂ.ಗಳಿಗಿಂತ ಹೆಚ್ಚಾಗಿದೆ. ಹೀಗಾಗಿ ಈ ಕುಟುಂಬಗಳ ಪಡಿತರ ಕಾರ್ಡ್ ಭವಿಷ್ಯ ಏನಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪಡಿತರ ಚೀಟಿ ಕೇವಲ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಪಡೆಯಲು ಸೀಮಿತವಾಗಿಲ್ಲ. ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ, ಆಶ್ರಯ ಮನೆ ಸೇರಿದಂತೆ ಹಲವಾರು ಸರ್ಕಾರಿ ಸೌಲಭ್ಯಗಳಿಗೆ ಬಿಪಿಎಲ್ ಬಳಕೆಯಾಗುತ್ತಿದೆ. ಎಪಿಎಲ್ ಆಗಿ ಪರಿವರ್ತನೆಯಾದರೆ, ವಾರ್ಷಿಕ 5 ಲಕ್ಷ ರೂ.ಗಳವರೆಗೆ ಆರೋಗ್ಯ ವಿಮೆ ನೀಡುವ ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ ಕೈ ತಪ್ಪಲಿದೆ. ಅದರಲ್ಲೂ ತೀವ್ರ ಅನಾ ರೋಗ್ಯದಿಂದ ಬಳಲುತ್ತಿರುವವರು, ಚಿಕಿತ್ಸೆಗಾದರೂ ನಮಗೆ ಬಿಪಿಎಲ್ ಕಾರ್ಡ್ ಬೇಕು ಎಂದು ಆಹಾರ ಇಲಾಖೆ ಬಳಿ ಮೊರೆ ಹೋಗುತ್ತಿದ್ದಾರೆ. ಪ್ರತಿ ತಿಂಗಳು ಈ ರೀತಿ 3-4 ಜನರಾದರೂ ಕಾರ್ಡುಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಆಹಾರ ಇಲಾಖೆ ಮೂಲಗಳು ತಿಳಿಸಿವೆ.
ಇ-ಆಡಳಿತ ಇಲಾಖೆಯ ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಂಡಿದ್ದೇ ಆದರೆ, ಸುಮಾರು 49 ಸಾವಿರ ಕುಟುಂಬಗಳು ಆಯುಷ್ಮಾನ್ ಭಾರತ್ ಆರೋಗ್ಯ ಮೂಲಕ ಸಂಪೂರ್ಣ ಉಚಿತ ಆರೋಗ್ಯ ಸೇವೆ ಪಡೆಯುವ ಅವಕಾಶದಿಂದ ವಂಚಿತವಾಗಲಿವೆ.
ಪ್ರಸಕ್ತ ಯಾವುದೇ ಪಡಿತರ ಚೀಟಿಯನ್ನು ರದ್ದುಗೊಳಿಸುತ್ತಿಲ್ಲ. ಕೇವಲ ಬಿಪಿಎಲ್˝ನಿಂದ ಎಪಿಎಲ್˝ಗೆ ಮಾತ್ರ ಪರಿವರ್ತಿಸಲಾಗುತ್ತಿದೆ. ಆದರೆ, ಯಾವುದೋ ತಾಂತ್ರಿಕ ದೋಷದಿಂದಾಗಿ ಎಪಿಎಲ್ ಆಗಿ ಪರಿವರ್ತನೆಯಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳಲು ತಾಲ್ಲೂಕು ಇಲ್ಲವೇ ಜಿಲ್ಲಾ ಮಟ್ಟದಲ್ಲಿ ಅವಕಾಶವಿಲ್ಲ. ಇಲಾಖೆಯ ಹಂತದಲ್ಲೇ ಈ ವಿಷಯ ಬಗೆಹರಿಯಬೇಕಿದೆ ಎಂದು ಆಹಾರ ಇಲಾಖೆಯ ಮೂಲಗಳು ತಿಳಿಸಿವೆ.