ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಶಿವಶಂಕರ್‌ ಪುನರಾಯ್ಕೆ

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ  ಅಧ್ಯಕ್ಷರಾಗಿ ಶಿವಶಂಕರ್‌ ಪುನರಾಯ್ಕೆ

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಶಿವಶಂಕರ್‌ ಪುನರಾಯ್ಕೆ - Janathavaniದಾವಣಗೆರೆ, ನ. 19- ತಾಲ್ಲೂಕಿನ ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕಾರ್ಖಾನೆಯ ಹಾಲಿ ಅಧ್ಯಕ್ಷರೂ, ಮಾಜಿ ಶಾಸಕರೂ ಆಗಿರುವ ಹೆಚ್.ಎಸ್. ಶಿವಶಂಕರ್ ಅವರು ಮತ್ತೊಂದು ಅವಧಿಗೆ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.

ಕಾರ್ಖಾನೆಯ ಆಡಳಿತ ಮಂಡಳಿಗೆ ಇದೇ ದಿನಾಂಕ 4ರಂದು ನಡೆದ 2024-2029 ರ ಅವಧಿಯ ನಿರ್ದೇಶಕ ಮಂಡಳಿ ಚುನಾವಣೆ ನಂತರ ಕಾರ್ಖಾನೆಯ ಸಭಾಂಗಣದಲ್ಲಿ ನಿನ್ನೆ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ಒಮ್ಮತದಿಂದ ನಡೆಯಿತು.

ಕಾರ್ಖಾನೆಯ ಆಡಳಿತ ಮಂಡಳಿಗೆ 32 ವರ್ಷಗಳ ನಂತರ ನಡೆದಿದ್ದ ಈ ಚುನಾವಣೆಯಲ್ಲಿ ಸತತ 5 ಬಾರಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದ ಹೆಚ್.ಎಸ್. ಶಿವಶಂಕರ್ ಅವರೂ ಸೇರಿದಂತೆ, ಅವರ ನೇತೃತ್ವದಲ್ಲಿ ಸ್ಪರ್ಧಿಸಿದ್ದ ಎಲ್ಲಾ 14 ಜನರೂ ಭರ್ಜರಿ ಜಯ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಾರ್ಖಾನೆಯ ಆಡಳಿತ ಮಂಡಳಿಗೆ ಸತತ 4 ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಹೆಚ್.ಎಸ್. ಶಿವಶಂಕರ್ ಅವರು, ಈಗ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದರ ಮೂಲಕ ತಮ್ಮ ಪ್ರತಿಸ್ಪರ್ಧಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

ನೂತನ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗಾಗಿ ನಿನ್ನೆ ಏರ್ಪಾಡಾಗಿದ್ದ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಎಸ್. ಶಿವಶಂಕರ್ ಅವರ ಹೆಸರನ್ನು ನಿರ್ದೇಶಕ ಮಲೇಬೆನ್ನೂರಿನ ಬಿ. ಚಿದಾನಂದಪ್ಪ ಸೂಚಿಸಿದಾಗ, ಅದನ್ನು ದೀಟೂರಿನ ಡಿ.ವಿ. ಚಂದ್ರಶೇಖರಪ್ಪ ಅನುಮೋದಿಸಿದರು.

ಅದೇ ರೀತಿ ಉಪಾಧ್ಯಕ್ಷರಾಗಿ ಬಿಳಸನೂರಿನ ಬಿ.ಆರ್. ರುದ್ರೇಶ್ ಅವರೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ರುದ್ರೇಶ್ ಅವರ ಹೆಸರನ್ನು ನಂದಿತಾವರೆಯ ಎಂ. ಚಂದ್ರಶೇಖರಯ್ಯ ಸೂಚಿಸಿದಾಗ, ವಾಸನದ ಜಿ. ಬಸವರಾಜಪ್ಪ ಅನುಮೋದಿಸಿದರು.

ನಿರ್ದೇಶಕರುಗಳಾದ ಹುಲಿಕಟ್ಟೆಯ ಎ.ಆರ್. ಆನಂದ ಪಾಟೀಲ್, ಸಿರಿಗೆರೆ (ಹರಿಹರ) ಯ ಎಂ.ಜಿ. ಪರಮೇಶ್ವರಗೌಡ, ಯಲವಟ್ಟಿಯ ದೊಡ್ಡಗೌಡ್ರ ಮುರಿಗೆಪ್ಪ, ಸಿರಿಗೆರೆ (ಹರಿಹರ) ಯ ಎನ್.ಜಿ. ರಾಮನಗೌಡ, ದೊಡ್ಡಬಾತಿಯ ಬಿ.ಜಿ. ವಿಶ್ವಂಬರ, ರಾಣೇಬೆನ್ನೂರಿನ ಶ್ರೀಮತಿ ರಾಜೇಶ್ವರಿ ಪಾಟೀಲ್, ದಾವಣಗೆರೆಯ ಶ್ರೀಮತಿ ಕೆ.ಸಿ. ಮಮತಾ, ಬನ್ನಿಕೋಡು ಟಿ. ಹಾಲಪ್ಪ ಕೋಸಿ, ಮಲೇಬೆನ್ನೂರಿನ ಬಸಪ್ಪ ಪೂಜಾರ್, ಧೂಳೆಹೊಳೆಯ ಕೆ.ಜಿ. ರಾಮನಗೌಡ, ಬನ್ನಿಕೋಡು ಗ್ರಾಮದ ಜೆ.ಕೆ. ರಾಮಚಂದ್ರಪ್ಪ, ಕೆ.ಆರ್. ಪ್ರಕಾಶ್, ಹೊಳೆಸಿರಿಗೆರೆಯ ಈಶ್ವರಪ್ಪ ಅವರುಗಳು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 

ದಾವಣಗೆರೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಶ್ರೀಮತಿ ಎಸ್. ಮಂಜುಳಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ನೂತನ ಆಡಳಿತ ಮಂಡಳಿ ಚುನಾವಣೆ ಸಂದರ್ಭದಲ್ಲಿ ಉಂಟಾದ ಗೊಂದಲದ ಹಿನ್ನೆಲೆಯಲ್ಲಿ ಕಾರ್ಖಾನೆಯ ಆಡಳಿತಾಧಿಕಾರಿಯಾಗಿದ್ದ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಚ್.ಎಸ್. ಶಿವಶಂಕರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

error: Content is protected !!