ಮಲೇಬೆನ್ನೂರಿನಲ್ಲಿನ ಸಹಕಾರ ಸಪ್ತಾಹದಲ್ಲಿ ಶಾಸಕ ಹರೀಶ್ ಭರವಸೆ
ಮಲೇಬೆನ್ನೂರು, ನ.18- ಸ್ವಂತ ಕಛೇರಿ ಹೊಂದಿಲ್ಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಕಟ್ಟಡ ನಿರ್ಮಿಸಲು ಅನುದಾನ ನೀಡುವುದಾಗಿ ಶಾಸಕ ಬಿ.ಪಿ. ಹರೀಶ್ ಭರವಸೆ ನೀಡಿದರು.
ಪಟ್ಟಣದ ನಿಟ್ಟೂರು ರಸ್ತೆಯಲ್ಲಿರುವ ವೀರಶೈವ ಸಮುದಾಯ ಭವನದಲ್ಲಿ ಹರಿಹರ ತಾಲ್ಲೂಕಿನ ವಿವಿಧ ರೀತಿಯ ಎಲ್ಲಾ ಸಹಕಾರ ಸಂಘಗಳ ಮತ್ತು ಬ್ಯಾಂಕುಗಳ ವತಿಯಿಂದ ಇಂದು ಹಮ್ಮಿಕೊಂಡಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ -2024ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರ ಸೇವೆ ಮಾಡುತ್ತಿರುವ ಕೃಷಿ ಸಹಕಾರ ಸಂಘಗಳ ಕಛೇರಿಯ ಪೀಠೋಪಕರಣಕ್ಕೂ ಅನುದಾನದಡಿ ಧನ ಸಹಾಯ ಮಾಡುವುದಾಗಿ ಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ಹನಗವಾಡಿ ಕುಮಾರ್ ಅವರ ಮನವಿಗೆ ಸ್ಪಂದಿಸಿ ಭರವಸೆ ನೀಡಿದರು.
ಸಹಕಾರ ಸಂಘಗಳ ಏಳಿಗೆಗೆ ಸರ್ಕಾರ ಧನ ಸಹಾಯ ನೀಡಿ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದ ಶಾಸಕ ಹರೀಶ್, ಸಂಘಗಳ ಸದಸ್ಯರು ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಕೆಲಸ-ಕಾರ್ಯ ಪರಿಶೀಲಿಸಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹನಗವಾಡಿ ಕುಮಾರ್ ಮಾತನಾಡಿ, ನಷ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕು ಗಳನ್ನು ಒಂದೊಂದಾಗಿ ವಿಲೀನಗೊಳಿಸಲಾಗುತ್ತಿದ್ದು ಸಹಕಾರ ಬ್ಯಾಂಕುಗಳು ವ್ಯವಹಾರ ಹೆಚ್ಚಿಸಿಕೊಳ್ಳಲು ಸುಸಮಯ ಎಂದು ಅಭಿಪ್ರಾಯಪಟ್ಟರು.
ಭಾಷಾ ಸಮಸ್ಯೆ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೆಚ್ಚಾಗಿದ್ದು, ಗ್ರಾಹಕರು ಸಂವಹನ ನಡೆಸುವುದು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ
ಸಹಕಾರ ಸಂಘಗಳು ರೈತರಿಗೆ ಉತ್ತಮ
ಸೇವೆ ನೀಡಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಸೆಳೆಯಿರಿ ಎಂದ ಕುಮಾರ್ ಅವರು, ಡಿಸಿಸಿ ಬ್ಯಾಂಕಿನಿಂದ ಹರಿಹರ ತಾಲ್ಲೂಕಿನ 14230 ರೈತರಿಗೆ ಬಡ್ಡಿ ರಹಿತವಾಗಿ 147 ಕೋಟಿ ರೂ. ಗಳನ್ನು ಮತ್ತು ಮಧ್ಯಮ ಅವಧಿ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ 418 ರೈತರಿಗೆ ಸುಮಾರು 26 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದ್ದೇವೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಸಿರಿಗೆರೆ ರಾಜಣ್ಣ, ಶಿಮುಲ್ ನಿರ್ದೇಶಕರಾದ ಜಗದೀಶಪ್ಪ ಬಣಕಾರ್, ಹನುಮನಹಳ್ಳಿ ಬಸವರಾಜಪ್ಪ, ಹೆಚ್.ಕೆ. ಬಸಪ್ಪ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಬೆಳ್ಳೂಡಿ ರಾಮಚಂದ್ರಪ್ಪ, ಶಿವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಮಂಜುಳಾ ಮಾತನಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎ. ಬಿ. ರಾಮಚಂದ್ರಪ್ಪ ಅವರು, ಸಹಕಾರ ಸಂಘಗಳ ನಡುವೆ ಸಹಕಾರವನ್ನು ಬಲಪಡಿಸುವ ಕುರಿತು ವಿಶೇಷ ಉಪನ್ಯಾಸ ನೀಡಿ, ಸಹಕಾರ ಸಂಘಗಳ ಕೆಲಸಕ್ಕೆ ಜಾತೀಯತೆ ಅಡ್ಡಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅತ್ಯುತ್ತಮ ಸಾಧನೆಗೈದ ಜಿಗಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಮಲಾಪುರದ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಹರಿಹರದ ತುಂಗಭದ್ರಾ ಕ್ರೆಡಿಟ್ ಕೋ-ಆಪ್ ಸೊಸೈಟಿಗೆ ಅಪೆಕ್ಸ್ ಬ್ಯಾಂಕಿನವರು ನೀಡಿದ ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.
ಶಿಮುಲ್ ನಿರ್ದೇಶಕರಾದ ಚೇತನ್ ನಾಡಿಗೇರ, ಕೆ.ಜಿ. ಸುರೇಶ್, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಸ್. ಜಿ.ಪರಮೇಶ್ವರಪ್ಪ, ಕುಮಾರ್, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ,
ಎಪಿಎಂಸಿ ಮಾಜಿ ಅಧ್ಯಕ್ಷ ಜಿ ಮಂಜುನಾಥ್ ಪಟೇಲ್, ಹೆಚ್. ಎಂ. ಶಿವಾನಂದಪ್ಪ, ಹಾಲಪ್ಪ, ಪಿಎಸಿಎಸ್ ಜಿಲ್ಲಾ ನೌಕರರ ಒಕ್ಕೂಟದ ಅಧ್ಯಕ್ಷ ಮಹೇಶ್ವರಪ್ಪ,
ತಾ. ಅಧ್ಯಕ್ಷ ಜಿ.ವಿ. ಕುಮಾರ್, ಸಿಡಿಪಿಒ ಸುನೀತಾ, ಜನತಾ ಬಜಾರ್ ನಿರ್ದೇಶಕ ಶಿವಕುಮಾರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.