ಜಿಲ್ಲಾಡಳಿತದ ಕನಕ ಜಯಂತಿಯಲ್ಲಿ ಶಾಸಕ ಕೆ.ಎಸ್. ಬಸವಂತಪ್ಪ ಆಶಯ
ದಾವಣಗೆರೆ, ನ. 17 – ಕನಕದಾಸರ ಕೀರ್ತನೆ ಗಳನ್ನು ಅರಿತುಕೊಂಡು ಅವರು ಪ್ರತಿಪಾದಿಸಿದ್ದ ಸಮ ಸಮಾಜ ನಿರ್ಮಾಣದಲ್ಲಿ ತೊಡಗಬೇಕಿದೆ ಎಂದು ಶಾಸಕ ಕೆ.ಎಸ್. ಬಸವಂತಪ್ಪ ಕರೆ ನೀಡಿದ್ದಾರೆ.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಇಂದು ಆಯೋಜಿಸಲಾಗಿದ್ದ ಕನಕ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನಕದಾಸರು ಕೀರ್ತನೆಗಳ ಮೂಲಕ ಹೋರಾಟ ಮಾಡಿದರು. ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಕನಕರ ಕೀರ್ತನೆಗಳನ್ನು ನೋಡಿ ನಮ್ಮ ನಡೆಯನ್ನು ಬದಲಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನಕದಾಸರಂತಹ ದಾರ್ಶನಿಕರ ಚಿಂತನೆಗಳು ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮೇಲೆ ಪ್ರಭಾವ ಬೀರಿದ್ದವು. ಅಂಬೇಡ್ಕರ್ ರಚಿಸಿದ ಸಂವಿಧಾನದಿಂದಾಗಿ ನಾವು ಬೆಳವಣಿಗೆ ಕಾಣುತ್ತಿದ್ದೇವೆ ಎಂದು ಹೇಳಿದರು.
ಪಾಲಿಕೆ ಮೇಯರ್ ಚಮನ್ ಸಾಬ್ ಮಾತನಾಡಿ, ಎಲ್ಲ ಧರ್ಮಗಳು ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆಯ ಸಂದೇಶ ನೀಡುತ್ತಿವೆ. ಆದರೆ, ನಿಜವಾದ ಧರ್ಮಪಾಲನೆ ಮಾಡುವವರನ್ನು ಹಿಂದೆ ಸರಿಸಿ, ಮೂಲಭೂತವಾದಿಗಳು ಮುಂದೆ ಬಂದಿದ್ದಾರೆ. ಎಲ್ಲ ಧರ್ಮಗಳಲ್ಲೂ ಇದೇ ಪರಿಸ್ಥಿತಿ ಆಗಿದೆ ಎಂದು ವಿಷಾದಿಸಿದರು.
ಜನ ಬರದೇ ಜಯಂತಿಗಿಲ್ಲ ಯಶಸ್ಸು
ಕನಕ ಜಯಂತಿಗೆ ಬಂದವರ ಸಂಖ್ಯೆ ಕಡಿಮೆ ಇದ್ದ ಬಗ್ಗೆ ಆಕ್ಷೇಪಿಸಿದ ಪಾಲಿಕೆ ಮೇಯರ್ ಚಮನ್ ಸಾಬ್, ಜನರು ಬಂದರೆ ಮಾತ್ರ ಜಯಂತಿಗಳು ಯಶಸ್ವಿಯಾಗುತ್ತವೆ ಎಂದರು.
ನಮ್ಮ ಸಮಾಜದ ಜನಸಂಖ್ಯೆ ಸಾಕಷ್ಟಿದೆ ಎಂದು ಹೇಳುತ್ತೇವೆ. ಆದರೆ, ದಾರ್ಶನಿಕರು ಹೇಳಿರುವುದನ್ನು ಕೇಳುವ ಇಂತಹ ಸಭೆಗಳಿಗೆ ಜನರು ಬರುತ್ತಿಲ್ಲ ಎಂದು ವಿಷಾದಿಸಿದರು.
ಈ ಬಗ್ಗೆ ಮಾತನಾಡಿದ ಶಾಸಕ ಕೆ.ಎಸ್. ಬಸವಂತಪ್ಪ, ಇಂತಹ ಸಮಾರಂಭಗಳಿಗೆ ಶಾಲೆ ಹಾಗೂ ಕಾಲೇಜು ಮಕ್ಕಳನ್ನು ಕರೆ ತರಬೇಕು. ಮುಂದಿನ ನಾಗರಿಕರಾದ ಅವರಿಗೆ ಕನಕರ ಸಂದೇಶ ತಲುಪಬೇಕು ಎಂದರು.
ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಪರಶುರಾಮಪ್ಪ ಮಾತನಾಡಿ, ಕನಕ ಜಯಂತಿಗಾಗಿ ಇನ್ನೊಂದು ಬೃಹತ್ ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ. ಈ ಬಗ್ಗೆ ನಂತರದಲ್ಲಿ ದಿನಾಂಕ ನಿರ್ಧಾರವಾಗಲಿದೆ ಎಂದರು.
ಮಂದಿರ, ಮಸೀದಿಗಳೆರಡಲ್ಲೂ ಅನಾಯಾಸ ಮರಣದ ಪ್ರಾರ್ಥನೆ: ಚಮನ್ ಸಾಬ್
ದೇವಾಲಯಗಳಿಗೆ ತೆರಳುವ ಜನರು ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ ದೇಹಿ ಮೇ ಕೃಪಯಾ ಶಂಭೋ ತ್ವಯಿ ಭಕ್ತಿಮಚಂಚಲಾಂ ಎಂದು ಪ್ರಾರ್ಥಿಸುವ ಪದ್ಧತಿ ಇದೆ.
ಅದೇ ರೀತಿ ಮಸೀದಿಗಳಲ್ಲೂ ಆಸಾನ್ ಮೌತ್ ದೇ, ಕಿಸಿ ಕಾ ಮೌತಾಜ್ ನಾ ಬನಾ, ಮರ್ತೇ ವಕ್ತ್ ತೇರೇ ನಾಮ್ ಮೇರೆ ಜುಬಾನ್ ಪೇ ರೆಹನೇ ದೆ, ಯೇ ಮೇರಿ ದುವಾ ಕುಬೂಲ್ ಕರ್ ಎಂದು ಪ್ರಾರ್ಥಿಸುತ್ತೇವೆ. ಇವರೆಡರ ಅರ್ಥ ಒಂದೇ ಎಂದು ಪಾಲಿಕೆ ಮೇಯರ್ ಚಮನ್ ಸಾಬ್ ಹೇಳಿದರು.
ಬೇರೆ ಯಾರನ್ನೂ ಅವಲಂಬಿಸುವ ಜೀವನ ಬೇಡ, ಕಷ್ಟವಿಲ್ಲದೇ ಮರಣ ಸಿಗಬೇಕು. ದೇವರ ಪ್ರಾರ್ಥನೆ ನನ್ನ ಮನದಲ್ಲಿ ಇರಬೇಕು ಎಂದು ದೇವಾಲಯ ಹಾಗೂ ಮಸೀದಿ ಎರಡರಲ್ಲೂ ಜನರು ಬೇಡಿಕೊಳ್ಳುತ್ತಾರೆ. ಎಲ್ಲ ಧರ್ಮಗಳಲ್ಲೂ ಜನರು ಶಾಂತಿ, ಪ್ರೀತಿ ಹಾಗೂ ಸೌಹಾರ್ದತೆ ಬಯಸುತ್ತಾರೆ ಎಂದು ತಿಳಿಸಿದರು.
ಧರ್ಮ ಎಂದರೆ ತೋರಿಕೆ, ಪ್ರಚಾರ ಇಲ್ಲವೇ ವಾಟ್ಸ್‌ಆಪ್ ಸ್ಟೇಟಸ್‌ಗಳಲ್ಲಿ ಫೋಟೋ ಹಾಕಿಕೊಳ್ಳು ವುದಲ್ಲ. ಆದರೆ, ನಾವು ಧರ್ಮ ಹಾಗೂ ಜಾತಿಯ ಹೊಡೆದಾಟಗಳಲ್ಲಿ ದಾರ್ಶನಿಕರ ಮಾತುಗಳನ್ನೇ ಮರೆತಿದ್ದೇವೆ. ಅಧ್ಯಯನ ಮಾಡಿ ಧರ್ಮದ ಬಗ್ಗೆ ತಿಳಿದುಕೊಳ್ಳದೇ, ಬೇರೆಯವರು ಹೇಳಿದ್ದನ್ನೇ ಧರ್ಮ ಎಂದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಪರಶುರಾಮಪ್ಪ ಮಾತನಾಡಿ, ದಾರ್ಶನಿಕರ ಜಯಂತಿ ಆಚರಣೆಗೆ ರಜೆ ನೀಡುವ ಪದ್ಧತಿ ನಿಲ್ಲಬೇಕು. ಪ್ರಸಕ್ತ 18 ದಾರ್ಶನಿಕರ ಜಯಂತಿಗೆ ರಜೆ ನೀಡಲಾಗುತ್ತಿದೆ. ಇದರ ಬದಲು ಎಲ್ಲರ ಜಯಂತಿಯನ್ನು ಒಂದೇ ದಿನ ಆಚರಿಸಬೇಕು ಎಂದು ಅಭಿಪ್ರಾಯ ಪಟ್ಟರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜಪ್ಪ ಉಪನ್ಯಾಸ ನೀಡಿ, ಕನಕದಾಸರು ಆ ಕಾಲದಲ್ಲಿ ಒಬ್ಬರೇ ಜಡ ಪರಂಪರೆ ವಿರುದ್ಧ ಹೋರಾಡಿದ್ದರು. ಅವರ ಆದರ್ಶಗಳನ್ನು ತಿಳಿದು ಸಮಾಜದ ದಮನಿತರು ಹೋರಾಟ ನಡೆಸಿದರೆ ಸಮಾಜ ಪ್ರಗತಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಉಪ ಮೇಯರ್ ಸೋಗಿ ಶಾಂತಕುಮಾರ್, ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಕೆಪಿಸಿಸಿ ಸಂಚಾಲಕ ಆನಂದಪ್ಪ, ಕುರುಬ ಸಮಾಜದ ಮುಖಂಡ ಲೋಕಿಕೆರೆ ಸಿದ್ದಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ದೂಡಾ ಆಯುಕ್ತ ಹುಲ್ಮನಿ ತಿಮ್ಮಣ್ಣ, ಜಿ.ಪಂ. ಉಪ ಕಾರ್ಯದರ್ಶಿ ಕೃಷ್ಣ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಮತ್ತಿತರರು ಉಪಸ್ಥಿತರಿದ್ದರು.