ಜೀವಪರ, ಜನಪರ, ವೈಜ್ಞಾನಿಕವಾಗಿರುವ ರಂಗಭೂಮಿ

ಜೀವಪರ, ಜನಪರ, ವೈಜ್ಞಾನಿಕವಾಗಿರುವ ರಂಗಭೂಮಿ

ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ 

ದಾವಣಗೆರೆ, ನ. 18- ರಂಗಭೂಮಿ ಜೀವಪರ, ಜನಪರ, ವಾಸ್ತವಕ್ಕೆ ಹತ್ತಿರವಾದ ಮತ್ತು ವೈಜ್ಞಾನಿಕವಾಗಿರುವ ನಾಟಕಗಳು ಸಹೃದಯ ಪ್ರೇಕ್ಷಕರೆದುರಿಗೆ ಬರುತ್ತವೆ ಎಂದು ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ವೃತ್ತಿ ರಂಗಭೂಮಿ ರಂಗಾಯಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ದಾವಣಗೆರೆ ಹಾಗೂ ಬಳ್ಳಾರಿ ಜಿಲ್ಲೆಯ ಸಿರಿಗೆರೆ ಧಾತ್ರಿ ರಂಗ ಸಂಸ್ಥೆ ಇವರುಗಳ ಸಂಯುಕ್ತಾಶ್ರದಲ್ಲಿ ಇಂದು ಸಂಜೆ ಹಮ್ಮಿಕೊಂಡಿದ್ದ ದಾವಣಗೆರೆಯ ಭೀಮೇಶ್ ಹಾಲೋಳ್ ನಿರ್ದೇಶನದ `ಶ್ರೀ ಕೃಷ್ಣ  ಸಂಧಾನ’ ನಗೆ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ಈ ನಾಟಕಗಳನ್ನು ರಂಗಶಿಸ್ತು ಮತ್ತು ಸೋಪಜ್ಞಶೀಲ ಚೌಕಟ್ಟಿನಲ್ಲಿ ತರುವ ಅಗತ್ಯವಿದೆ. ದಕ್ಷಿಣ ಕರ್ನಾಟಕದಲ್ಲಿ ಪೌರಾಣಿಕ ಮತ್ತು ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ನಾಟಕಗಳ ಪ್ರದರ್ಶನ ಕಾಣುತ್ತೇವೆ ಎಂದರು.

ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು, ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ಪೌರಾಣಿಕ ನಾಟಕಗಳು ಹೆಚ್ಚು ಪ್ರದರ್ಶನವಾಗುವುದನ್ನು ನೋಡುತ್ತೇವೆ. ಸಭ್ಯತೆಯ ಎಲ್ಲೆ ಮೀರದಂತೆ, ಸಂಸ್ಕೃತಿಗೆ ಧಕ್ಕೆ ಬಾರದಂತೆ ರಂಗದ ಮೇಲೆ ತರಲಾಗುತ್ತದೆ ಎಂದು ಹೇಳಿದರು.

ರಾಜ್ಯದ ಪ್ರತಿ ಹಳ್ಳಿಗಳಲ್ಲೂ ನಾಟಕಗಳು ಪ್ರದರ್ಶನಗೊಳ್ಳುವುದನ್ನು ಕಾಣುತ್ತೇವೆ. ಸಮೀಕ್ಷೆ ಆಧಾರದ ಮೇಲೆ ಕನಿಷ್ಠ ಹದಿನೈದು ಸಾವಿರ ನಾಟಕಗಳು ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿವೆ. ರಂಗ ನಿರ್ದೇಶನ, ನಾಟಕ ರಚನೆ, ವಿನ್ಯಾಸ, ಸಂಗೀತವನ್ನು ಗ್ರಾಮೀಣ ಜನರೇ ಮಾಡುತ್ತಿರುವುದು  ಅತ್ಯಂತ ವಿಶೇಷ ಎಂದರು.

ನೃತ್ಯ, ಸಂಗೀತ, ನಟ, ನಟಿಯರ ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವುದು ಗ್ರಾಮೀಣ ಜನರು. ಇವರ ಬದ್ಧತೆಯನ್ನು ಮೆಚ್ಚಲೇಬೇಕಾಗುತ್ತದೆ. ದಾವಣಗೆರೆಯವರೇ ಆದ ಭೀಮೇಶ್ ಹಾಲೋಳ್ `ಶ್ರೀ ಕೃಷ್ಣ ಸಂಧಾನ’ ನಗೆ ನಾಟಕ ನಿರ್ದೇಶಿಸಿ, ರಂಗದ ಮೇಲೆ ತಂದಿರುವುದು ಅಭಿನಂದನಾರ್ಹ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಜನರಲ್ಲಿ ಹೊಸ ಅಭಿರುಚಿ ಮೂಡಿಸುವ ಅವಶ್ಯವಿದೆ. ನೇಪಥ್ಯಕ್ಕೆ ಸರಿಯುತ್ತಿರುವ ನಾಟಕಗಳಿಗೆ ಪ್ರೋತ್ಸಾಹಿಸಬೇಕಾಗಿದೆ ಎಂದರು.

ದಾವಣಗೆರೆ ರಂಗಭೂಮಿಯ ತವರು. ಇಲ್ಲಿ ವೃತ್ತಿ ಮತ್ತು ಹವ್ಯಾಸಿ ನಾಟಕ ಕಂಪನಿಗಳು ಹೆಚ್ಚು ಯಶಸ್ಸನ್ನು ಪಡೆದಿರುವುದನ್ನು ಸ್ಮರಿಸಿದರು. 

ವೃತ್ತಿ ರಂಗಭೂಮಿ ರಂಗಾಯಣದ ವಿಶೇಷ ಅಧಿಕಾರಿ ರವಿಚಂದ್ರ, ರಂಗಕರ್ಮಿ ಬಾ.ಮ. ಬಸವರಾಜಯ್ಯ, ರಂಗ ನಿರ್ದೇಶಕ ಭೀಮೇಶ್ ಹಾಲೋಳ್, ರಂಗ ಅನಿಕೇತನ ಸಂಸ್ಥಾಪಕರಾದ ಹೆಚ್.ಎನ್. ಸುಧಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 

ನಂತರ ನಡೆದ `ಶ್ರೀ ಕೃಷ್ಣ ಸಂಧಾನ’ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು.

error: Content is protected !!