ಹೆಚ್ಚಾಗುತ್ತಿರುವ ನಾಯಿ ಕಡಿತ

ಹೆಚ್ಚಾಗುತ್ತಿರುವ ನಾಯಿ ಕಡಿತ

ಎರಡು ತಿಂಗಳಲ್ಲಿ ನಾಯಿ ದಾಳಿಗೆ ತುತ್ತಾದವರ ಸಂಖ್ಯೆ 281

ದಾವಣಗೆರೆ: `281′ ಕಳೆದ ಎರಡು ತಿಂಗಳ ಅವಧಿಯಲ್ಲಿ ನಾಯಿ ಕಡಿತದಿಂದ ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಸಂಖ್ಯೆ ಇದು. ಇದಲ್ಲದೇ  ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರೂ ಇರಬಹುದು.

ಒಟ್ಟಾರೆ ಬೀದಿ ನಾಯಿಗಳ ಹಾವಳಿಗೆ ದಾವಣಗೆರೆ ನಗರವೂ ಸೇರಿದಂತೆ ಜಿಲ್ಲೆಯ ಜನತೆ ರೋಸಿ ಹೋಗಿದ್ದಾರೆ. ಇವುಗಳ ಉಪಟಳಕ್ಕೆ ಪರಿಹಾರವೇ ಇಲ್ಲವೇ? ಎಂದು ಪ್ರಶ್ನಿಸುತ್ತಿದ್ದಾರೆ. ದಂಡಿಗೆ, ದಾಳಿಗೆ ಹೆದರದೇ ಇದ್ರೂ, ಬೀದಿ ನಾಯಿಗಳಿಗೆ  ಹೆದರಬೇಕಾದ ಪರಿಸ್ಥಿತಿ ದಾವಣಗೆರೆ ಜನತೆಯದ್ದು.

ಪ್ರತಿ ದಿನ ಎರಡರಿಂದ ಮೂರು ಪ್ರಕರಣಗಳು ಜಿಲ್ಲಾಸ್ಪತ್ರೆಯಲ್ಲಿ ಕಾಣಿಸಿಕೊಳ್ಳುತ್ತವೆ. 2024ರಲ್ಲಿ ಜನವರಿಯಿಂದ ಅಕ್ಟೋಬರ್ ಕೊನೆಯವರಗೆ 735 ಜನರು ನಾಯಿ ಕಚ್ಚಿದಕ್ಕೆ ಚಿಕಿತ್ಸೆ ಪಡೆದಿದ್ದಾರೆ. ಕಳೆದ 2023ರ ಜನವರಿ ಯಿಂದ ಡಿಸೆಂಬರ್‌ವರೆಗೆ 434 ಜನರು ನಾಯಿ ಕಡಿತಕ್ಕೊಳಗಾಗಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಆಶ್ಚರ್ಯವೆಂದರೆ ಕಳೆದ ಆಗಸ್ಟ್‌ ತಿಂಗಳಲ್ಲಿ 77, ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಅಂದರೆ 166 ಹಾಗೂ ಅಕ್ಟೋಬರ್ ತಿಂಗಳಲ್ಲಿ 115 ಜನರಿಗೆ ನಾಯಿಗಳು ಕಚ್ಚಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಂಕಿ-ಅಂಶಗಳ ಪ್ರಕಾರ ಕಳೆದ ಕೆಲವು ತಿಂಗಳಿನಿಂದ ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. 

ಸ್ಮಾರ್ಟ್ ಸಿಟಿ ದಾವಣಗೆರೆ ನಗರದಲ್ಲಂತೂ ಹತ್ತಾರು ನಾಯಿಗಳ ಹಿಂಡು ಪ್ರತಿ ಬಡಾವಣೆಯ ಪ್ರತಿ ಬೀದಿಗಳಲ್ಲೂ ಕಾಣ ಸಿಗುತ್ತವೆ. ರಾತ್ರಿಯಾಗುತ್ತಲೇ ಸೈಕಲ್, ಬೈಕ್ ಸವಾರರ ಬೆನ್ನತ್ತುವೆ.  ಅಂದ ಹಾಗೆ ಈ ಬೀದಿ ನಾಯಿಗಳಿಗೆ ಪೊಲೀಸ್, ಪತ್ರಕರ್ತ, ಪಾಲಿಕೆ ಸದಸ್ಯ, ಅಧಿಕಾರಿ, ಸಾಮಾನ್ಯ ನಾಗರಿಕ ಎಂಬ ಯಾವ ಬೇಧವೂ ಇಲ್ಲ ಅನ್ನಿ. ಎಲ್ಲರೂ ನಾಯಿ ಉಪಟಳ ಅನುಭವಿಸಿದವರೇ.

ಚಿಕ್ಕಮಕ್ಕಳು, ವೃದ್ಧರಂತೂ ಬೀದಿಯಲ್ಲಿ ಓಡಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಮಾಧ್ಯಮಗಳು ಎಚ್ಚರಿಸಿದರೂ, ಮಹಾನಗರ ಪಾಲಿಕೆಯಿಂದ ಮಾತ್ರ `ನಮ್ಮಿಂದ ಏನು ಮಾಡಲೂ ಸಾಧ್ಯವಿಲ್ಲ’ ಎಂಬ ಉತ್ತರ ಬರುತ್ತದೆ.

ಪಾಲಿಕೆ ಸಿಬ್ಬಂದಿಗಳಿಂದಲೇ ನಡೆದಿರುವ ಇತ್ತೀಚಿನ ಸರ್ವೇ ಪ್ರಕಾರ ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ 16 ಸಾವಿರ ನಾಯಿಗಳಿವೆ.   ಪ್ರತಿ ವರ್ಷ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ವ್ಯಾಕ್ಸಿನ್‌ ಕೊಡಲು ಟೆಂಡರ್ ಕರೆಯಲಾಗುತ್ತದೆ. ನಿರಂತರವಾಗಿ ಸಂತಾನ ಹರಣ ಚಿಕಿತ್ಸೆ ನೀಡುತ್ತಿರುವುದರಿಂದ ಸದ್ಯ ಬೆಳವಣಿಗೆ ನಿಂತಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗುವ ಎಲ್ಲರೂ ಪಾಲಿಕೆ ವ್ಯಾಪ್ತಿಯಲ್ಲಿ ಇರುವುದಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಹೇಳಬಹುದು. ಆದರೆ ಬಹುತೇಕವಾಗಿ ದಾಖಲಾಗುವ ಪ್ರಕರಣಗಳು ಪಾಲಿಕೆ ವ್ಯಾಪ್ತಿಯಲ್ಲಿವೇ ಹಾಗೂ ನಗರದ ಐದಾರು ಕಿಲೋ ಮೀಟರ್ ಸುತ್ತಲಿನ ಪ್ರದೇಶಗಳಿಂದ ಬಂದವರೇ ಎನ್ನುತ್ತವೆ ಆಸ್ಪತ್ರೆಯ ಮೂಲಗಳು.


ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ [email protected]

error: Content is protected !!