ವೃತ್ತಿ ರಂಗಭೂಮಿ ದಿನ ಆಚರಿಸಲು ಒತ್ತಾಯ

ವೃತ್ತಿ ರಂಗಭೂಮಿ ದಿನ ಆಚರಿಸಲು ಒತ್ತಾಯ

ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಡಕೋಳ ಸರ್ಕಾರಕ್ಕೆ ಒತ್ತಾಯ

ದಾವಣಗೆರೆ ಜನತೆ ರಂಗಭೂಮಿಯ ಕಟ್ಟಾ ಸಹೃದಯಿಗಳಾಗಿದ್ದರು. ಈ ನಿಟ್ಟಿನಲ್ಲಿ ದಾವಣಗೆರೆ ಹಾಗೂ ವೃತ್ತಿ ರಂಗಭೂಮಿಗೆ ಶತಮಾನದ ನಂಟಿದೆ.

– ಮಲ್ಲಿಕಾರ್ಜುನ ಕಡಕೋಳ, ವೃತ್ತಿ ರಂಗಭೂಮಿ ನಿರ್ದೇಶಕ

ದಾವಣಗೆರೆ, ನ.15- ಸರ್ಕಾರವು ನವೆಂಬರ್‌ 14ರಂದು ವೃತ್ತಿ ರಂಗಭೂಮಿ ದಿನ ಆಚರಿಸಲು ಮುಂದಾಗಬೇಕು ಎಂದು ವೃತ್ತಿ ರಂಗ ಭೂಮಿಯ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಸರ್ಕಾರಕ್ಕೆ ಒತ್ತಾಯಿಸಿದರು.

ವೃತ್ತಿ ರಂಗಭೂಮಿ ರಂಗಾಯಣ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮತ್ತು  ಸಕ್ಕರಿ ಬಾಳಾಚಾರ್ಯ ಟ್ರಸ್ಟಿನ ಸಂಯುಕ್ತಾಶ್ರಯದಲ್ಲಿ  ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ವೃತ್ತಿ ರಂಗಭೂಮಿ ಮತ್ತು ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನಲ್ಲಿ 1871ರ ನವಂಬರ್‌ 14ರಂದು ಮೊದಲ ಬಾರಿಗೆ ನಾಟಕ ಮೇಳ ಉದಯವಾಗಿತ್ತು, ಆ ವಿಶೇಷ ದಿನದ ಸ್ಮರಣಾರ್ಥವಾಗಿ ವೃತ್ತಿ ರಂಗಭೂಮಿ ದಿನಾಚರಣೆಗೆ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮರಾಠಿ ನಾಟಕಗಳು ಹೆಚ್ಚು ಪ್ರಚಲಿತವಾಗಿದ್ದನ್ನು ಕಂಡು ಕನ್ನಡಿಗರಲ್ಲಿ ಕನ್ನಡ ಪ್ರಜ್ಞೆ ಜಾಗೃತಗೊಳಿಸುವ ನಿಟ್ಟಿನಲ್ಲಿ ಕನ್ನಡದಲ್ಲಿ 70ಕ್ಕೂ ಅಧಿಕ ನಾಟಕಗಳನ್ನು ಸಿದ್ಧಪಡಿಸಿ, ಪ್ರದರ್ಶಿಸುವ ಜತೆಗೆ ನಾಟಕ ಕಂಪನಿ ಕಟ್ಟುವಲ್ಲಿ ಸಕ್ಕರಿ ಬಾಳಾಚಾರ್ಯರು (ಶಾಂತ ಕವಿ) ಮೊದಲಿಗರು ಎಂದರು.

ಕನ್ನಡ ಸಾಹಿತ್ಯ ಕ್ಷೇತ್ರಕ್ಕೂ ಸೇವೆಯನ್ನು ಅರ್ಪಿಸಿದ ಶಾಂತ ಕವಿಗಳು, ಕನ್ನಡಿಗರಲ್ಲಿರುವ ಅಭಿಮಾನ ಶೂನ್ಯತೆಯನ್ನು ಬಡಿದೆಬ್ಬಿಸುವ ಕಾರ್ಯ ಮಾಡಿದ್ದರು ಎಂದು ಅವರನ್ನು ಸ್ಮರಿಸಿದರು.

ವಚನ ಚಳುವಳಿ ಕಾಲದಲ್ಲೇ ವೃತ್ತಿ ರಂಗಭೂಮಿ ಜನಿಸಿದೆ. ಈ ವಚನ ಚಳುವಳಿಯಲ್ಲಿ ಬಹುರೂಪಿ ಚೌಡಯ್ಯ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಅವರೇ ಪ್ರಪಂಚದ ಮೊಟ್ಟ ಮೊದಲ ವೃತ್ತಿ ರಂಗಭೂಮಿ ಕರ್ಮಿಯಾಗಿದ್ದಾರೆ ಎಂದು ಹೇಳಿದರು.

ಅವಿಭಜಿತ ವಿಜಯಪುರ ಜಿಲ್ಲೆಯು ಕನ್ನಡ ವೃತ್ತಿ ರಂಗಭೂಮಿಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದ ಅವರು, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವೃತ್ತಿ ರಂಗಭೂಮಿ ಬಗ್ಗೆ ಹೆಚ್ಚು ಉಲ್ಲೇಖ ದಾಖಲಿಸದೇ ರಂಗಾಯಣಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಸಾಹಿತ್ಯ ಚರಿತ್ರೆ ಬರೆದಿರುವ ವರ್ಗದ ಬಗ್ಗೆ ನನಗೆ ತುಂಬಾ ಬೇಸರವಿದೆ. ನಾನು ಚರಿತ್ರೆ ಓದಿದ ವಿದ್ವಾಂಸನಲ್ಲ. ಆದರೆ ಸಾಹಿತ್ಯ ಚರಿತ್ರೆಯಲ್ಲಿ ಈ  ರೀತಿಯ ಅಪಸವ್ಯಗಳನ್ನು ಬಹಳವಾಗಿ ದಾಖಲಿಸಲಾಗಿದೆ. ಸಾಹಿತ್ಯ ಚರಿತ್ರೆಯಲ್ಲಿ ವೃತ್ತಿ ರಂಗಭೂಮಿ ಮತ್ತು ತತ್ವಪದಗಳಿಗೆ ಅನೂಚಾನವಾಗಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಕಾಲೇಜಿನ ಸಾಂಸ್ಕೃತಿಕ ಸಮಿತಿ ಸಂಚಾಲಕ ತೊಪ್ಪಲ ಕೆ. ಮಲ್ಲಿಕಾರ್ಜುನ ಗೌಡ ಪ್ರಾಸ್ತಾವಿಕ ಮಾತನಾಡಿ, ವೃತ್ತಿ ರಂಗಭೂಮಿ ಸಿನಿಮಾ ಜಗತ್ತಿಗೆ ಜನನ ನೀಡಿದೆ. ಡಾ. ರಾಜಕುಮಾರ್‌ ಅಂತಹ ನಟರೂ ವೃತ್ತಿ ರಂಗಭೂಮಿಯಿಂದಲೇ ಬಂದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಎಂ. ಮಂಜಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಶೃತಿ ರಾಜ್‌, ಐಕ್ಯೂಎಸಿ ಸಂಚಾಲಕ ಡಾ.ಎಂ.ಪಿ. ಭೀಮಪ್ಪ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಜಿ. ಕಾವ್ಯಶ್ರೀ, ಡಾ.ಎನ್‌.ಎಂ. ಅಶೋಕ್‌ ಕುಮಾರ್‌, ಗೋವಿಂದ ಸ್ವಾಮಿ, ಡಾ. ಭಾರತಿ ಮತ್ತಿತರರಿದ್ದರು.

error: Content is protected !!