ಗೋಪುರ, ನಾಡನ್ನು ಸುಭೀಕ್ಷಗೊಳಿಸುವಂತಹ ಅಭಿವೃದ್ಧಿಯ ಸಂಕೇತ

ಗೋಪುರ, ನಾಡನ್ನು ಸುಭೀಕ್ಷಗೊಳಿಸುವಂತಹ ಅಭಿವೃದ್ಧಿಯ ಸಂಕೇತ

ನಗರದ ಕೆ.ಆರ್. ಮಾರುಕಟ್ಟೆಯ ಶ್ರೀ ಸಾಕ್ಷಿ ವರಸಿದ್ದಿ ವಿನಾಯಕ ದೇವಸ್ಥಾನದ ಗೋಪುರಕ್ಕೆ ಕಳಸ ಪುನಃ ಸ್ಥಾಪನೆ ಕಾರ್ಯಕ್ರಮದಲ್ಲಿ ಆವರಗೊಳ್ಳದ ಶ್ರೀಗಳ ವಿಶ್ಲೇಷಣೆ

ದಾವಣಗೆರೆ, ನ. 15- ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಶ್ರೀ ಸಾಕ್ಷಿ ವರಸಿದ್ದಿ ವಿನಾಯಕ ಸ್ವಾಮಿ ನೆಲೆ ನಿಂತು 34 ವರ್ಷಗಳಾಗಿವೆ. 34ನೇ ವರ್ಷದ ಸ್ವಾಮಿಯ ಸಂಕಲ್ಪ ಮತ್ತು ಇಚ್ಛೆಯ ಮೇರೆಗೆ ಇಂದು ಗೋಪುರಕ್ಕೆ ಪುನಃ ಕಳಸ ಸ್ಥಾಪನಾ ಅಂಗವಾಗಿ ಪೂಜಾ ಕಾರ್ಯಗಳು, ರುದ್ರಾಭಿಷೇಕ, ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿವೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ನಗರದ ಕೆ.ಆರ್.ಮಾರುಕಟ್ಟೆಯಲ್ಲಿರುವ ಶ್ರೀ ಸಾಕ್ಷಿ ವರಸಿದ್ದಿ ವಿನಾಯಕ ಸ್ವಾಮಿ ಸೇವಾ ಸಮಿತಿಯಿಂದ ವಿನಾಯಕ ಸ್ವಾಮಿ ದೇವಸ್ಥಾನದ ಗೋಪುರದ ಪುನಃ ಸ್ಥಾಪನಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಎಷ್ಟೇ ಸಾಹುಕಾರ, ದೊಡ್ಡ ಮನುಷ್ಯ ಇದ್ದರೂ ಕೂಡಾ ತಮ್ಮ ಮನೆಗಳ ಮೇಲೆ ಕಳಸವನ್ನು ಇಡಲ್ಲ. ಏಕೆಂದರೆ ಅದರ ಸಾಮರ್ಥ್ಯವನ್ನು ಸಹಿಸಿಕೊಳ್ಳು ವಂತಹ ಶಕ್ತಿ ಯಾವ ನರಮಾನವನಿಗೂ ಇರುವುದಿಲ್ಲ. ಅಂತಹ ಶಕ್ತಿ ಕಳಸದಲ್ಲಿದೆ. ದೇವಸ್ಥಾನದ ಮೇಲೆ ಏಕೆ ಕಳಸ ಸ್ಥಾಪನೆ ಮಾಡಬೇಕು. ಧಾರ್ಮಿಕ ನೆಲೆಗಟ್ಟುಗಳ ಕೇಂದ್ರ ಬಿಂದು ಸ್ಥಳವಾಗಿರುವ ದೇವಸ್ಥಾನದ ಗೋಪುರ ಗಳನ್ನು ಕಟ್ಟಬೇಕು. ಗೋಪುರ ಎಂದರೆ ಕೀರ್ತಿಯ ಸಂಕೇತ. ಆ ನಾಡನ್ನು ಸುಭೀಕ್ಷಗೊಳಿಸುವಂತಹ ಅಭಿವೃದ್ಧಿಯ ಸಂಕೇತ. ಗೋಪುರದಲ್ಲಿ ಶಿವ – ಪಾರ್ವತಿ ಸೇರಿದಂತೆ ಎಲ್ಲಾ ಪರಿವಾರದ ದೇವತೆಗಳನ್ನು ದೇವಸ್ಥಾನದ ಗೋಪುರದ ಚಿತ್ತಾರ ಮೂಡಿಸುತ್ತೇವೆ. ಆ ಎಲ್ಲಾ ದೈವತಾ ಅನುಗ್ರಹ ಸಾಕ್ಷಿಭೂತವಾಗಿ ಆ ಗೋಪುರದಲ್ಲಿ ಮಿಲನವಾಗುವಂತಹದ್ದಾಗುತ್ತದೆ. ಈ ಹಿನ್ನಲೆಯಲ್ಲಿಂದು ಸ್ವಾಮಿ ಗೋಪುರಕ್ಕೆ ಕಳಸವನ್ನು ಪುನಃ ಸ್ಥಾಪನೆ ಮಾಡಲಾಗುತ್ತಿದೆ ಎಂದರು. 

ಕೇವಲ ಒಂದು ವರ್ಷವಲ್ಲ, ಯಾವಾಗಲೂ ಜೀವನ ಪರ್ಯಾಂತ ಈ ದೇವಸ್ಥಾನ ಇರುವ ತನಕವು ಈ ಕಳಸ ಇರುವ ತನಕವೂ ಯಾರು ಭಕ್ತರು ಬಂದು ಕಳಸಕ್ಕೆ ಕೈ ಮುಗಿತಾರೋ ಅವರೆಲ್ಲರಿಗೂ ಕೂಡಾ ಬ್ರಹ್ಮ, ವಿಷ್ಣು, ಮಹೇಶ್ವರರ ದರ್ಶನ ದಿವ್ಯ ಅನುಗ್ರಹವಾಗುವುದು. ದೇವತೆಗಳು ಅಡಕವಾಗಿರುವ ಈ ದೇವಸ್ಥಾನದ ಮೇಲಿರುವ ಕಳಸವನ್ನು ಯಾರು ದರ್ಶನ ಮಾಡುತ್ತಾರೋ ಅವರಿಗೆ  ದೇವತೆಗಳ  ಕಾರುಣ್ಯದ ಪ್ರಾಪ್ತಿಯಾಗುವುದು. ನಾಡಿನಲ್ಲಿ ರೈತರಿಗೆ ಉತ್ತಮ ಮಳೆ ಬೆಳೆಯಾಗಲಿ, ವರ್ತಕರಿಗೆ ವ್ಯಾಪಾರ ಅಭಿವೃದ್ಧಿಯಾಗಲಿ ಎಂದು ತಿಳಿಸಿದರು.

ಪುರೋಹಿತರಾದ ವೀರಯ್ಯ ಸ್ವಾಮಿ, ವಿನಾಯಕ ಸ್ವಾಮಿ, ನಿರಂಜನ ಸ್ವಾಮಿ, ರುದ್ರಪ್ರಸಾದ ಸ್ವಾಮಿ ಪೂಜಾ ಕಾರ್ಯಗಳನ್ನು ನೆರವೇರಿಸಿದರು. 

ಭಕ್ತಿಸೇವೆಯನ್ನು ಲಿಂ. ಸಂಶಿ ವೀರಪ್ಪ, ಲಿಂ. ಸಂಶಿ ಕರಿಬಸಮ್ಮ ಸ್ಮರಣಾರ್ಥ ಸಂಶಿ ಶಂಭುಲಿಂಗಪ್ಪ ಪರಿವಾರದವರು ವಹಿಸಿಕೊಂಡಿದ್ದರು.  

ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಐರಣಿ ಬಕ್ಕೇಶ್, ಉಪಾಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಬಾಳೆಎಲೆ ರುದ್ರೇಶ್, ರಾಜಣ್ಣ, ಬಾಬಣ್ಣ, ಕರಿಬಸಪ್ಪ, ಜನತಾವಾಣಿ ಪ್ರತಿನಿಧಿ ಜೆ.ಎಸ್.ವಿರುಪಾಕ್ಷಪ್ಪ, ಮುರುಗೇಶ, ಆರ್.ಬಿ.ರವಿಕುಮಾರ, ಲಂಬಿ ಮುರುಗೇಶ್, ಡಿಟಿಎನ್ ವೀರಭದ್ರಯ್ಯ, ಮಾಲತೇಶ್, ನಾಗರಾಜ್, ಶಿವಯೋಗಿ ಹತ್ತಿಕಾಳು ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!