ಮಧುಮೇಹ ಮತ್ತು ಸ್ವಾಸ್ಥ್ಯ ಮೇಳ ಕಾರ್ಯಕ್ರಮದಲ್ಲಿ ಸಂಸದರಾದ ಡಾ. ಪ್ರಭಾ ಸಲಹೆ
ದಾವಣಗೆರೆ, ನ.14- ಆರೋಗ್ಯದ ಹಿತ ದೃಷ್ಟಿಯಿಂದ 35 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ತಪ್ಪದೇ ರಕ್ತ ತಪಾಸಣೆಗೆ ಒಳಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಸಲಹೆ ನೀಡಿದರು.
ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಬಾಪೂಜಿ ಒಪಿಡಿ ಬ್ಲಾಕ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮಧುಮೇಹ ಮತ್ತು ಸ್ವಾಸ್ಥ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಯಾಬಿಟಿಸ್ ರೋಗಕ್ಕೆ ತುತ್ತಾದ ವ್ಯಕ್ತಿಗಳು ಹೆಚ್ಚಾಗಿ ನಾರಿನಾಂಶವುಳ್ಳ ತರಕಾರಿ ಹಾಗೂ ಕಾಳು-ಬೇಳೆಗಳ ಸೇವನೆಗೆ ಪ್ರಾಮು ಖ್ಯತೆ ನೀಡಿದರೆ ಉತ್ತಮ ಆರೋಗ್ಯ ಕಾಪಾಡಿಕೊ ಳ್ಳಬಹುದು ಎಂದು ಕಿವಿಮಾತು ಹೇಳಿದರು.
ಟ್ರಸ್ಟಿನ ವತಿಯಿಂದ ನವೆಂಬರ್ 20ರ ವರೆಗೆ ಆರ್‌ಬಿಎಸ್, ಪಿಪಿಬಿಎಸ್, ಎಚ್‌ಬಿಎ1ಸಿ, ಆರ್‌ಎಫ್‌ಟಿ, ಬಿಪಿ, ಇಸಿಜಿ ಮತ್ತು ಕಣ್ಣಿನ ನರ ತಪಾಸಣೆಯನ್ನು ಉಚಿತವಾಗಿ ಮಾಡಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದು ಕೊಳ್ಳಬೇಕು ಎಂದು ಮನವಿ ಮಾಡಿದರು.
ಮಧುಮೇಹ ಜಾಗೃತಿ ಜಾಥಾ..!
ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಎಸ್.ಎಸ್.ಕೇರ್ ಟ್ರಸ್ಟ್ ವತಿಯಿಂದ `ನಮ್ಮ ನಡೆ, ಆರೋಗ್ಯದ ಕಡೆ’ ಎಂಬ ವಾಕ್ಯದಡಿ ಬೃಹತ್ ಮಧುಮೇಹ ಜಾಗೃತಿ ಜಾಥಾ ಗುರುವಾರ ಬೆಳಗ್ಗೆ ಜರುಗಿತು.
ಜೆಜೆಎಂ ಕಾಲೇಜಿನ ಮುಂಭಾಗ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಮಧುಮೇಹ ಜಾಗೃತಿ ಜಾಥಾಗೆ ವಿಧ್ಯುಕ್ತ ಚಾಲನೆ ನೀಡಿದರು.
ಜೆಜೆಎಂ ಕಾಲೇಜಿನಿಂದ ಪ್ರಾರಂಭವಾದ ಜಾಥಾ ಗುಂಡಿ ವೃತ್ತ, ರಾಮ್ ಅಂಡ್ ಕೋ ವೃತ್ತ, ಕೆಇಬಿ ಸರ್ಕಲ್, ವಿದ್ಯಾರ್ಥಿ ಭವನದ ಮೂಲಕ ಬಾಪೂಜಿ ಆಸ್ಪತ್ರೆ ಸೇರಿತು.
ಮುಖ್ಯ ಬೀದಿಗಳಲ್ಲಿ ಒಟ್ಟು 3 ಕಿ.ಮೀ ಸಾಗಿದ ಜಾಥಾ ಜನರಲ್ಲಿ ಸಕ್ಕರೆ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿತು.
ಸಾರ್ವಜನಿಕರೇ ಎಸ್.ಎಸ್. ಕೇರ್ ಟ್ರಸ್ಟಿನ ರೂವಾರಿಗಳು. ಈ ನಿಟ್ಟಿನಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಿದ್ದೇವೆ. ನಾಗರಿಕರೆಲ್ಲರೂ ತಮ್ಮ-ತಮ್ಮ ವಾರ್ಡ್‌ಗಳಲ್ಲಿ ಶಿಬಿರದ ಬಗ್ಗೆ ಮಾಹಿತಿ ತಲುಪಿಸಿ ಎಂದು ಮನವಿ ಮಾಡಿದರು. ಈಗಾಗಲೇ ಸಂಸ್ಥೆಯ ವೈದ್ಯರು ಕಕ್ಕರಗೊಳ್ಳ ಮತ್ತು ಅರಸಾಪುರ ಗ್ರಾಮದ ಪ್ರತಿ ಮನೆ-ಮನೆಗೆ ಹೋಗಿ ಬಿಪಿ, ಶುಗರ್ ಹಾಗೂ ಇತರೆ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾಗರಿಕರು ತಮ್ಮ ಆರೋಗ್ಯದ ಜತೆಗೆ ಮಕ್ಕಳ ಸ್ವಾಸ್ಥ್ಯಕ್ಕೂ ಗಮನ ಹರಿಸಬೇಕು ಎಂದು ಹೇಳಿದರು.
ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ.ಡಿ.ಎಸ್. ಕುಮಾರ್ ಪ್ರಾಸ್ತಾವಿಕ ಮಾತನಾಡಿ, ಎಸ್.ಎಸ್ ಲೈಫ್ ಕೇರ್ ಟ್ರಸ್ಟ್‌ನ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ನಾಯಕತ್ವದಲ್ಲಿ ಉಚಿತವಾಗಿ ಹೆರಿಗೆ, ಕಣ್ಣಿನ ಪರೀಕ್ಷೆ, ಕ್ಯಾನ್ಸರ್ ಪರೀಕ್ಷೆ ಮತ್ತು ರಕ್ತ ಪರೀಕ್ಷೆ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿತ ಸೇವೆಗಳನ್ನು ಸಂಸ್ಥೆಯು ಉಚಿತವಾಗಿ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಈ ವೇಳೆ ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಕ್ಲಾ ಶೆಟ್ಟಿ, ನಿರ್ದೇ ಶಕ ವಿ. ಸತ್ಯನಾರಾಯಣ, ಡಾ. ಮಂಜುನಾಥ್ ಆಲೂರು, ಬಾಪೂಜಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಗುರುಪ್ರಸಾದ್ ಮತ್ತಿತರರಿ ದ್ದರು. ಡಾ.ಜಿ. ಧನ್ಯ ಕುಮಾರ್ ನಿರೂಪಿಸಿದರು. ಡಾ. ಮೂಗನಗೌಡ ಪಾಟೀಲ್ ಸ್ವಾಗತಿಸಿದರು. ಡಾ.ಎನ್. ಅಶ್ವಿನಿ ವಂದಿಸಿದರು.