ವಕ್ಫ್‌ನಿಂದ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ

ವಕ್ಫ್‌ನಿಂದ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ

ತುಷ್ಟೀಕರಣಕ್ಕಾಗಿ ದಾಖಲೆ ಇಲ್ಲದೇ ವಕ್ಫ್‌ಗೆ ಆಸ್ತಿಗಳ ಸೇರ್ಪಡೆ ಎಂದು ಪ್ರಹ್ಲಾದ್ ಜೋಶಿ ತರಾಟೆ

ದಾವಣಗೆರೆ, ನ. 12 – ವಕ್ಫ್ ಆಸ್ತಿ ವಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹೊರಡಿಸಿರುವ ಆದೇಶಗಳನ್ನು ರಾಜ್ಯ ಸರ್ಕಾರ ಉಲ್ಲಂಘಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ದಾಹಕ್ಕಾಗಿ ಸಂಪತ್ತಿನ ಅಸಮತೋಲನ ತರುವ ಮೂಲಕ ದೇಶಕ್ಕೆ ಗಂಭೀರ ಬೆದರಿಕೆ ತರಲು ಮುಂದಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರಾಟ ಪತ್ರ ಇಲ್ಲವೇ ಉಡುಗೊರೆ ರೀತಿಯ ದಾಖಲೆಗಳ ಆಧಾರ ಇಲ್ಲದೇ ವಕ್ಫ್ ಆಸ್ತಿಗಳನ್ನು ಪಡೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಅದೇ ರೀತಿ, ನೋಟಿಸ್ ಕಳಿಸದೇ ಯಾವುದೇ ಆಸ್ತಿ ದಾಖಲೆಗಳಲ್ಲಿ ವಕ್ಫ್ ತನ್ನ ಹೆಸರು ಸೇರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಇಷ್ಟಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣದಿಂದ ಆಸ್ತಿಗಳನ್ನು ವಕ್ಫ್‌ಗೆ ಸೇರ್ಪಡೆ ಮಾಡುತ್ತಿದೆ ಎಂದು ಟೀಕಿಸಿದರು.

ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ನೋಟಿಸ್‌ಗಳು ಹಾಗೂ ಮ್ಯುಟೇಷನ್‌ಗಳನ್ನು ತಡೆಯಲು ಕಳೆದ ನವೆಂಬರ್ 9ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಕೇವಲ ಕಣ್ಣೊರೆಸುವ ತಂತ್ರವಾಗಿದೆ. ಈಗಾಗಲೇ ಆಸ್ತಿ ಆರ್.ಟಿ.ಸಿ.ಗಳಲ್ಲಿ ವಕ್ಫ್ ಎಂದು ಸೇರಿಸಿದ್ದರೆ, ಅದರ ಗತಿ ಏನು ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆರ್.ಟಿ.ಸಿ.ಗಳಲ್ಲಿ ವಕ್ಫ್ ಎಂದು ನಮೂದಾಗಿರುವ ಪ್ರಕರಣಗಳಿಗೆ ಸರ್ಕಾರದ ಆದೇಶ ಅನ್ವಯವಾಗುವುದಿಲ್ಲ. ಮತ್ತೆ ನೋಟಿಸ್ ಕಳಿಸುವುದಿಲ್ಲ ಎಂಬ ಸ್ಪಷ್ಟನೆಯೂ ಇಲ್ಲ ಎಂದು ಸಚಿವ ಜೋಶಿ ಹೇಳಿದರು.

ಮತಾಂಧ ಸಚಿವ ಜಮೀರ್ ಅಹಮದ್ ಖಾನ್ ಅವರು ರಾಜ್ಯಾದ್ಯಂತ ವಕ್ಫ್ ಆಂದೋಲನ ನಡೆಸಿ, ಈಗಾಗಲೇ ಆಸ್ತಿ ದಾಖಲೆಗಳಲ್ಲಿ ವಕ್ಫ್ ಎಂದು ಸೇರ್ಪಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಹಾನಗಲ್ ತಾಲ್ಲೂಕಿನ ಹರಣಗಿ ಗ್ರಾಮದಲ್ಲಿ ವಕ್ಫ್ ಹಾವಳಿಗೆ ಸಿಲುಕಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಗಮನ ಸೆಳೆದ ಸಂಸದ ತೇಜಸ್ವಿ ಸೂರ್ಯ ಹಾಗೂ ಮಾಧ್ಯಮಗಳ ವಿರುದ್ಧವೇ ಸರ್ಕಾರ ಪ್ರಕರಣ ದಾಖಲಿಸಿದೆ. ಸರ್ಕಾರ ನಿರ್ಲಜ್ಜ, ಮತಿಗೆಟ್ಟ ಹಾಗೂ ಭ್ರಷ್ಟವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಅವಸರದಿಂದ ಅಧಿಕಾರ ಹಿಡಿಯುವ ಸಲುವಾಗಿ ದೇಶವನ್ನು ಒಡೆದಿತ್ತು. 370ನೇ ವಿಧಿ ಜಾರಿಗೆ ತಂದ ಕಾರಣಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾ ದಕರಿಗೆ ಆಶ್ರಯ ತಾಣವಾಗಿತ್ತು. ನಂತರ 2013ರಲ್ಲಿ ವಕ್ಫ್ ಕಾನೂನು ತರುವ ಮೂಲಕ ದೇಶದ ಸಂಪತ್ತನ್ನು ವಕ್ಫ್‌ಗೆ ಕೊಡಲಾಗುತ್ತಿದೆ. ಇದರಿಂದ ಸಂಪತ್ತು ಹಂಚಿಕೆ ಅಸಮತೋಲನವಾಗಿ ದೇಶದ ಭದ್ರತೆಗೆ ಗಂಭೀರ ಬೆದರಿಕೆ ಎದುರಾಗುವ ಸಾಧ್ಯತೆಯೂ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಕೆ.ಎಸ್. ನವೀನ್, ಮಾಜಿ ಶಾಸಕ ಎಸ್.ವಿ. ರಾಮಚಂದ್ರ, ಮುಖಂಡರಾದ ಗಾಯತ್ರಿ ಸಿದ್ದೇಶ್ವರ್, ಜಿ.ಎಸ್. ಅನಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!