ಕರ್ನಾಟಕವನ್ನೇ ಖಬರಸ್ಥಾನ್ ಎಂದು ವಕ್ಫ್‌ಗೆ ಕೊಟ್ಟು ಬಿಡಿ

ಕರ್ನಾಟಕವನ್ನೇ ಖಬರಸ್ಥಾನ್ ಎಂದು ವಕ್ಫ್‌ಗೆ ಕೊಟ್ಟು ಬಿಡಿ

ಪಿ.ಜೆ. ಬಡಾವಣೆ ವಕ್ಫ್ ಆಸ್ತಿ ಎಂದು ನಮೂದಿಸಿರುವುದಕ್ಕೆ ಆರ್.ಅಶೋಕ್ ಆಕ್ರೋಶ

ದಾವಣಗೆರೆ, ನ.12 – ಪ್ರತಿದಿನ ಆ ಜಮೀನು ವಕ್ಫ್‌ಗೆ ಹೋಯಿತು, ಈ ಜಮೀನು ವಕ್ಫ್‌ಗೆ ಹೋಯಿತು ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿದೆ. ಪ್ರತಿನಿತ್ಯ ಹೀಗೆ ಮಾಡುವ ಬದಲು, ಇಡೀ ಕರ್ನಾಟಕವನ್ನೇ ಖಬರಸ್ಥಾನ ಎಂದು ಘೋಷಿಸಿ  ವಕ್ಫ್‌ಗೆ ಕೊಟ್ಟು ಬಿಡಲಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿ ಕಾರಿದ್ದಾರೆ.

ಪಿ.ಜೆ. ಬಡಾವಣೆಯ 4 ಎಕರೆ 13 ಗುಂಟೆ ಪ್ರದೇಶವನ್ನು ವಕ್ಫ್ ಆಸ್ತಿ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಆಲಿಸಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸುಮಾರು 565 ಕೋಟಿ ರೂ. ಬೆಲೆ ಬಾಳುವ ಪಿ.ಜೆ. ಬಡಾವಣೆ ಆಸ್ತಿಯನ್ನು ವಕ್ಫ್ ಬೋರ್ಡ್‌ಗೆ ನೀಡಲಾಗಿದೆ ಎಂದರು.

ಸುಮಾರು 70 ವರ್ಷಗಳ ಹಿಂದೆ ಪ್ರಿನ್ಸ್ ಜಯಚಾಮರಾಜೇಂದ್ರ ಒಡೆಯರ್ ಹೆಸರಿನಲ್ಲಿ ರೂಪಿಸಲಾಗಿದ್ದ ಬಡಾವಣೆಯನ್ನೇ ವಕ್ಫ್ ಮಂಡಳಿಗೆ ಕೊಡಲಾಗಿದೆ ಎನ್ನುವುದಾದರೆ, ಸಚಿವ ಜಮೀರ್ ಅಹಮದ್ ಗ್ಯಾಂಗ್‌ಗೆ ಎಷ್ಟು ದುರಹಂಕಾರ ಹಾಗೂ ಕೊಬ್ಬು ಇರಬೇಕು? ಎಂದು ಅಶೋಕ್ ಪ್ರಶ್ನಿಸಿದರು.

ವಕ್ಫ್ ವರ್ತನೆಗೆ ಜನ ನಿತ್ಯ ಛೀಮಾರಿ ಹಾಕುತ್ತಿದ್ದಾರೆ, ರೈತರು ಹೋರಾಟ ಮಾಡುತ್ತಿ ದ್ದಾರೆ. ಇಷ್ಟಾದರೂ, ದಾವಣಗೆರೆ ನಗರದ ಹೃದಯ ಭಾಗದಲ್ಲಿರುವ ನೂರಾರು ಕೋಟಿ ರೂ. ಬೆಲೆಯ ಜಮೀನು ಕಬಳಿಕೆ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕ್ಫ್ ಜಮೀನಿಗಾಗಿ ಇನ್ನು ಮುಂದೆ ನೋಟಿಸ್ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ನೋಟಿಸ್ ಕೊಟ್ಟರೂ, ಕೊಡದಿದ್ದರೂ ಏನೂ ವ್ಯತ್ಯಾಸ ಆಗುವುದಿಲ್ಲ. ಪಹಣಿಯ ಕಾಲಂ 9 ಹಾಗೂ 11ರಲ್ಲಿರುವ ವಕ್ಫ್ ಮಾಲೀಕತ್ವ ತೆಗೆಯಬೇಕಿದೆ. ಸಿದ್ದರಾಮಯ್ಯ ಅವರು ಈ ಅಂಶ ಬಿಟ್ಟು ಉಳಿದೆಲ್ಲ ಕಥೆ ಹೇಳುತ್ತಿದ್ದಾರೆ. ಈ ಬಗ್ಗೆ ನಿರ್ಧಾರವಾಗುವ ವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದರು.

ಸಂವಿಧಾನದ ಪ್ರಕಾರ ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕಲ್ಪಿಸಲು ಬರುವುದಿಲ್ಲ. ಆದರೂ, ಗುತ್ತಿಗೆಯಲ್ಲಿ ಶೇ.4ರ ಮೀಸಲಾತಿ ಕೊಡಲು ಸರ್ಕಾರ ಮುಂದಾಗಿದೆ. ಸಂವಿಧಾನವನ್ನೇ ಲೆಕ್ಕಿಸುವುದಿಲ್ಲ ಎಂದ ಮೇಲೆ, ಇಡೀ ಕರ್ನಾಟಕವನ್ನೇ ಖಬರಸ್ಥಾನ ಎಂದು ಘೋಷಿಸಿ, ಇಡೀ ಕರ್ನಾಟಕವನ್ನೇ ವಕ್ಫ್ ಬೋರ್ಡ್‌ಗೆ ದಾನ ಮಾಡಿ ಬಿಡಿ ಎಂದವರು ಕಿಡಿ ಕಾರಿದರು.

ಉಪ ಚುನಾವಣೆ ಹಿನ್ನೆಲೆಯಲ್ಲಿ ನೋಟಿಸ್ ವಾಪಸ್ ಪಡೆಯುವ ನಾಟಕ ಮಾಡಲಾಗುತ್ತಿದೆ. ಚುನಾವಣೆ ನಂತರ ಮತ್ತೆ ನೋಟಿಸ್ ಕೊಡಲಿದ್ದಾರೆ. ರೈತರ ಜಾಗ, ದೇವಸ್ಥಾನ, ಮಠ ಮಂದಿರಗಳ ಜಾಗವೆಲ್ಲವೂ ವಕ್ಫ್ ಪಾಲಾಗಲಿದೆ. ಇಡೀ ಕರ್ನಾಟಕದ ಜನ ಒಂದಾಗದಿದ್ದರೆ, ಸಿದ್ದರಾಮಯ್ಯ ಅವರು ಕರ್ನಾಟಕವನ್ನೇ ಮಿನಿ ಪಾಕಿಸ್ತಾನ ಮಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ವಿಫಲವಾಗಿವೆ. ಈ ವಿಷಯದಿಂದ ಜನರ ಗಮನ ಬೇರೆಡೆ ಸೆಳೆಯಲು ದಿಕ್ಕು ತಪ್ಪಿಸುವ ಕುತಂತ್ರದ ಕೆಲಸವನ್ನು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸರ್ಕಾರ ವಹಿಸಿದೆ ಎಂದು ಆರೋಪಿಸಿದರು. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ವಾಪಸ್ ಪಡೆಯಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ವಾತಾವರಣ ಕೆಡಲಿದೆ ಎಂದವರು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ, ಪರಿಷತ್ ಸದಸ್ಯ ರವಿಕುಮಾರ್, ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯ ಎಸ್.ಟಿ. ವೀರೇಶ್, ಮುಖಂಡರಾದ ವೀರೇಶ್ ಹನಗವಾಡಿ, ಬಿ.ಎಸ್. ಜಗದೀಶ್, ಅಣ್ಣೇಶ್, ಶ್ರೀನಿವಾಸ ದಾಸಕರಿಯಪ್ಪ, ಜಿ.ಎಸ್. ಅನಿತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!