ಅಧಿವೇಶನಕ್ಕೂ ಮೊದಲೇ ಸಿಎಂ ರಾಜೀನಾಮೆ

ಅಧಿವೇಶನಕ್ಕೂ ಮೊದಲೇ ಸಿಎಂ ರಾಜೀನಾಮೆ

ಅಧಿವೇಶನದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಲಿದೆ

– ಆರ್. ಅಶೋಕ್

ದಾವಣಗೆರೆ, ನ. 12 – ಕಳೆದ ವಿಧಾನಸಭಾ ಅಧಿವೇಶನದಲ್ಲಿ ವಾಲ್ಮೀಕಿ ನಿಗಮದ ಹಗರಣದ ಕಾರಣದಿಂದ ಒಬ್ಬ ಸಚಿವರ ವಿಕೆಟ್ ಉರುಳಿತ್ತು. ಮುಂದಿನ ಅಧಿವೇಶನದಲ್ಲಿ ಇನ್ನೂ ಹಲವು ಹಗರಣಗಳು ಚರ್ಚೆಗೆ ಬರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದ ಮೊದಲೇ ರಾಜೀನಾಮೆ ನೀಡಲಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಮುಡಾ ವಿವಾದಕ್ಕೆ ಸಂಬಂಧಿಸಿದಂತೆ ಇನ್ನೂ 1,500 ನಿವೇಶನಗಳ ಹಂಚಿಕೆ ವಿವರ ಕೇಳಿ ಪತ್ರ ಬರೆದಿದ್ದೇನೆ. ಇದರಿಂದ ಮುಡಾದಲ್ಲಿ ನಡೆದಿರುವ ಲೂಟಿ ಬಟಾ ಬಯಲಾಗಲಿದೆ ಎಂದು ಹೇಳಿದರು.

ಮುಂದಿನ ಅಧಿವೇಶನದಲ್ಲಿ ಕಾರ್ಮಿಕ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಲಿಕ್ಕರ್ ಲಾಬಿ ವಿವರಗಳನ್ನೂ ಪ್ರಸ್ತಾಪಿಸಲಾಗು ವುದು. ಅಧಿವೇಶನ ಪೂರ್ತಿ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆ ಎಳೆಯಲಾಗು ವುದು ಎಂದರು. ಅಬಕಾರಿ ಇಲಾಖೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜಭವನಕ್ಕೆ ದೂರು ಸಲ್ಲಿಸಲಾಗಿದೆ. ಆನಂತರ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಭೆ ನಡೆಸಿದ್ದಾರೆ. ಇದೆಲ್ಲಾ ಬೋಗಸ್ ಎಂದು ಸರ್ಕಾರ ಹೇಳುತ್ತದೆಯೇ? ದೂರು ಕೇಳಿ ಬಂದ ನಂತರ ಏಕೆ ಸಭೆ ನಡೆಸಲಾಗಿದೆ? ಎಂದು ಅಶೋಕ್ ಪ್ರಶ್ನಿಸಿದರು.

ಆರೋಪವೇ ಆಕ್ಸಿಜನ್ : ರಾಜ್ಯ ಕಾಂಗ್ರೆಸ್ ಸರ್ಕಾರ ಹಗರಣಗಳಲ್ಲಿ ಮುಳುಗಿದೆ. ಈಗ ಹಗರಣಗಳಿಂದ ತಪ್ಪಿಸಿಕೊಳ್ಳಲು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ ಎಂದವರು ಟೀಕಿಸಿದರು.

ಹಗತರಣಗಳಲ್ಲೇ ಮುಳುಗಿರುವ ಕಾಂಗ್ರೆಸ್ ಸರ್ಕಾರ ಆಕ್ಸಿಜನ್‌ಗಾಗಿ ಪರಿತಪಿಸುತ್ತಿದೆ. ಹೀಗಾಗಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಕೊರೊನಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಶ್ರೀರಾಮುಲು ವಿರುದ್ಧ ಪ್ರಾಸಿಕ್ಯೂಷನ್‌ ಮಾಡಬೇಕೆಂದು ನ್ಯಾಯಮೂರ್ತಿ ಮೈಕೆಲ್ ಡಿಕುನ್ಹ ಅವರ ನೇತೃತ್ವದ ತನಿಖಾ ಆಯೋಗ ವರದಿ ನೀಡಿದೆ. ಆದರೆ, ಈ ಆಯೋಗ ಯಡಿಯೂರಪ್ಪ ಹಾಗೂ ಶ್ರೀರಾಮುಲು ಅವರಿಗೆ ನೋಟಿಸ್ ನೀಡಿ ಮಾಹಿತಿಯನ್ನೇ ಪಡೆದಿಲ್ಲ. ನ್ಯಾಯಮೂರ್ತಿ ಕೆಂಪಣ್ಣ ಸಂಪೂರ್ಣ ವರದಿ ನೀಡಿದರೂ ಪರಿಶೀಲಿಸದ ಸರ್ಕಾರ, ಡಿಕುನ್ಹ ಅವರಿಂದ ಶೇ.10ರಷ್ಟೂ ಪೂರ್ಣಗೊಳ್ಳದ ವರದಿ ಪಡೆದು ಕ್ರಮಕ್ಕೆ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.

error: Content is protected !!