ಇ-ಜನ್ಮ ತಂತ್ರಾಂಶ ತರಬೇತಿ

ಇ-ಜನ್ಮ ತಂತ್ರಾಂಶ ತರಬೇತಿ

ಜನರನ್ನು ಅಲೆಸದೆ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಿ ; ನೋಂದಣಾಧಿಕಾರಿಗೆ ಜಿಲ್ಲಾಧಿಕಾರಿಗಳ ಸೂಚನೆ

ದಾವಣಗೆರೆ, ನ.12- ಸಾರ್ವಜನಿಕರ ಕೆಲಸವನ್ನು ಮೆಚ್ಚಿಸುವುದಕ್ಕಾಗಿ  ಮಾಡದೆ, ಆತ್ಮ ಸಾಕ್ಷಿಗನುಗುಣವಾಗಿ ಮಾಡಿದಾಗ ಉತ್ತಮ ಕೆಲಸವಾಗಲು ಸಾಧ್ಯ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು.

ಅವರು ಮಂಗಳವಾರದಂದು ಸಾಂಖ್ಯಿಕ ಇಲಾಖೆ ಹಾಗೂ ಅಪರ ಜಿಲ್ಲಾ ಜನನ, ಮರಣ ನೋಂದಣಾಧಿಕಾರಿಗಳ ಕಚೇರಿ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನನ – ಮರಣ ನೋಂದಣಿ ನಿಯಮಗಳು ಮತ್ತು ಇ-ಜನ್ಮ ತಂತ್ರಾಂಶದ ನಿರ್ವಹಣೆ ಕುರಿತ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿಮಾತನಾಡಿದರು.

ಜನನ, ಮರಣ ದಾಖಲೆಗಳನ್ನು ಪಡೆಯಲು ಬರುವ ಜನರನ್ನು ಅಲೆದಾಡಿಸದೆ ನಿಗದಿತ ಸಮಯದೊಳಗೆ ಜನನ-ಮರಣ ಪ್ರಮಾಣ ಪತ್ರ ವಿತರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. 

ಗ್ರಾಮೀಣ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ ಶೇ.100 ರಷ್ಟು ಜನನ, ಮರಣ ನೋಂದಣಿ ಘಟನೆಗಳನ್ನು ದಾಖಲಿಸಲು ಘಟನೆಗಳು ಘಟಿಸಿದ 30 ದಿನಗಳ ಒಳಗಿನ ಘಟನೆಗಳನ್ನು ನೋಂದಾಯಿಸಲು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಜನನ, ಮರಣ ಉಪನೋಂದಣಾ ಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ತಮ್ಮ ಕುಟುಂಬದಲ್ಲಿ ಸಂಭವಿಸುವ ಜನನ ಮತ್ತು ಮರಣ ಘಟನೆಗಳ ಮಾಹಿತಿಯನ್ನು ಜಿಲ್ಲಾ ಹಾಗೂ ಗ್ರಾಮೀಣ ಜನನ, ಮರಣ ಉಪನೋಂದಣಾಧಿಕಾರಿಗಳು ಹಾಗೂ ನೋಂದಣಾಧಿಕಾರಿಗಳಿಗೆ ನೀಡಿ ಕಡ್ಡಾಯವಾಗಿ ಇ-ಜನ್ಮ ತಂತ್ರಾಶದಲ್ಲಿ ಜನನ, ಮರಣ ಪ್ರಮಾಣ ಪತ್ರಗಳನ್ನು ಪಡೆಯುವಂತೆ ತಿಳಿಸಿದರು.

ಜನನ, ಮರಣ ಘಟನೆ ನಡೆದ 1 ರಿಂದ 21 ದಿನಗಳೊಳಗೆ ಪ್ರಮಾಣ ಪತ್ರ ಲಭ್ಯವಿದ್ದು, ಘಟನೆ ಮನೆಯಲ್ಲಾಗಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿಯಲ್ಲಿ ಕಾರ್ಯದರ್ಶಿಗಳು, ನಗರ ಪ್ರದೇಶವಾಗಿದ್ದರೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷಕರು ಮತ್ತು ಸರ್ಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಾದರೆ ಸರ್ಕಾರಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ನಿವಾಸಿ ವೈದ್ಯಾಧಿಕಾರಿಗಳ ಹತ್ತಿರ ಪಡೆಯಬಹುದಾಗಿದೆ ಎಂದು ತಿಳಿಸಿದರು. 

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಮಾತನಾಡಿ, ಜನನ-ಮರಣಗಳ ಅಂಕಿ ಅಂಶಗಳ ಮೂಲಕ ನೋಂದಣಿ ಆದರೆ ಕೊನೆಯ ಒಂದು ವರ್ಷದಲ್ಲಿ ಎಷ್ಟು ಮರಣ ಹಾಗೂ ಜನನ ಆಗಿದೆ ಎಂಬ ಅಂಕಿ-ಅಂಶದ ನಿಖರ ಮಾಹಿತಿ ದೊರೆಯುತ್ತದೆ. ಹಾಗೆಯೇ ಮುಂದಿನ ದಿನಗಳಲ್ಲಿ  ಜನನ-ಮರಣ ಪ್ರಮಾಣ ಪತ್ರ ವಿತರಿಸಲು ವಿವಿಧ  ಇಲಾಖೆಗಳನ್ನು ಸೇರ್ಪಡೆ ಮಾಡುವ ಗುರಿ ಇದೆ ಎಂದು ತಿಳಿಸಿದರು.

ಜನಸಂಖ್ಯೆ ಅನುಗುಣವಾಗಿ ಸರ್ಕಾರದ ಅನುದಾನ ಪಡೆಯಬೇಕಾದರೆ ನೊಂದಣಿಯ ಅಂಕಿ-ಅಂಶಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು. 

ಜನನ-ಮರಣ ದಾಖಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಜನರನ್ನು ಅಲೆದಾಡಿಸದೆ, ಸೂಕ್ತ ಸಮಯದೊಳಗೆ ಜನನ-ಮರಣ ಪ್ರಮಾಣ ಪತ್ರ ನೀಡಿದರೆ ಸಾರ್ವಜನಿಕರು ನ್ಯಾಯಾಲಯಕ್ಕೆ ಬರುವ ಸಂಖ್ಯೆ ಕಡಿಮೆಯಾಗುತ್ತದೆ. ಸಕಾಲದಲ್ಲಿ ದಾಖಲೆ ನೀಡುವುದರಿಂದ ಜನರ ಸಮಯ, ಆರ್ಥಿಕ ಸ್ಥಿತಿ ಹಾಗೂ  ಜನರ ವೈಯಕ್ತಿಕ ಜೀವನಕ್ಕೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಂಗಳೂರು ಜನನ – ಮರಣ ವಿಭಾಗದ ಜಂಟಿ ನಿರ್ದೇಶಕ ಎಸ್.ಕೆ.ಚಿಕ್ಕಬೀರಯ್ಯ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೆ. ನೀಲಾ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!