ನಗರದಲ್ಲಿ ಶ್ರದ್ಧಾ ಭಕ್ತಿಯ ತುಳಸಿ ವಿವಾಹ ಸಂಭ್ರಮ
ದಾವಣಗೆರೆ, ನ.12- ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವ ತುಳಸಿ ವಿವಾಹವನ್ನು ಜಿಲ್ಲೆಯಲ್ಲಿನ ಕೆಲವರು ಮಂಗಳವಾರವೇ ಶ್ರದ್ಧಾ ಭಕ್ತಿಯಿಂದ ಸಂಭ್ರಮಿಸಿದರೆ, ಇನ್ನೂ ಕೆಲವರು ಬುಧವಾರ ಆಚರಿಸಲಿದ್ದಾರೆ.
ಈ ಬಾರಿ ಹಬ್ಬದ ಮಾರುಕಟ್ಟೆ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದರಿಂದ ಸಾಧಾರಣ ವ್ಯಾಪಾರ ವಹಿವಾಟು ನಡೆಯಿತು. ಕಳೆದ ದಸರಾ ಮತ್ತು ದೀಪಾವಳಿ ಹಬ್ಬದಲ್ಲಿ ಹೂವು ಮತ್ತು ಹಣ್ಣುಗಳ ಮೇಲಿದ್ದ ಬೆಲೆ ಏರಿಕೆ ಬಿಸಿ, ಈ ಹಬ್ಬದಲ್ಲಿ ತಣ್ಣಗಾಗಿದೆ.
ಭರ್ಜರಿ ವ್ಯಾಪಾರ ನಡೆಸಿ ಹಬ್ಬವನ್ನು ಸಂಭ್ರಮಿಸುವ ಕನಸು ಹೊತ್ತಿದ್ದ ವ್ಯಾಪಾರಸ್ಥರಿಗೆ ಮಾರುಕಟ್ಟೆ ಸ್ಥಳಾಂತರದ ಬರೆ ಬಿದ್ದಿದ್ದು, ಹೂವು, ಹಣ್ಣು, ಕಾಯಿ ಹಾಗೂ ಇತರೆ ಮಾರಾಟಗಾರರ ಮುಖದಲ್ಲಿ ಸಂತಸದ ಕಳೆ ಕುಗ್ಗಿತ್ತು.
ಸಂಭ್ರಮದ ತುಳಸಿ ಪೂಜೆ..!
ನಗರದ ಕೆಲವು ಮನೆಗಳಲ್ಲಿ ಮಂಗಳವಾರವೇ ತುಳಸಿ ವಿವಾಹ ಸಂಭ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಹಿಳೆಯರು ರಂಗೋಲಿ, ಹೂವು, ಮಾವಿನ ಎಲೆಗಳಿಂದ ಹಾಗೂ ದೀಪಗಳಿಂದ ತುಳಸಿ ಕಟ್ಟೆಯನ್ನು ಅಲಂಕರಿಸಿ ಭಕ್ತಿಯಿಂದ ತುಳಸಿಯನ್ನು ಪೂಜಿಸಿದರು.
ಸ್ಥಳಾಂತರದ ಅವಾಂತರ..!
ಪ್ರವಾಸಿ ಮಂದಿರ ರಸ್ತೆ ಹಾಗೂ ಆರ್.ಹೆಚ್. ಛತ್ರದ ಮುಂಭಾಗ ಪ್ರತಿ ವರ್ಷದಂತೆ ಈ ವರ್ಷವೂ ಪಾದಚಾರಿ ರಸ್ತೆಯಲ್ಲಿ ವರ್ತಕರು ವ್ಯಾಪಾರಕ್ಕಿಟ್ಟಿದ್ದ ವಸ್ತುಗಳನ್ನು ಪಾಲಿಕೆಯವರು ರಾತ್ರೋರಾತ್ರಿ ಜೆಸಿಬಿಯಿಂದ ತೆರವು ಗೊಳಿಸಿರುವುದರಿಂದ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಾಳೆಕಂಬ, ಕಬ್ಬು ಮತ್ತು ಹೂವು ಸೇರಿದಂತೆ ಇತರೆ ವಸ್ತುಗಳು ತೆರವು ವೇಳೆ ಹಾನಿಗೆ ತುತ್ತಾಗಿದ್ದರಿಂದ ಹಳ್ಳಿಗಳಿಂದ ಬಂದಂತಹ ವ್ಯಾಪಾರಿಗಳು ತೊಂದರೆ ಅನುಭವಿಸಿದರು.
`ರಾತ್ರಿ ಮಲ್ಗೋಕೆ ಬಿಟ್ಟಿಲ್ಲ ಸರ್, ಬಡವರ ಹೊಟ್ಟೆ ಮೇಲೆ ಹೊಡಿದಿದ್ದಾರೆ. ಈ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ನೆರಳೂ ಇಲ್ಲ. ಅಲ್ಲಿಯಾಗಿದ್ರೆ ಕಟ್ಟಡಗಳ ನೆರಳಿಗಾದರೂ ಕೂತು ವ್ಯಾಪಾರ ಮಾಡುತ್ತಿದ್ದೇವು’ ಎಂದು ಮಹಿಳಾ ವ್ಯಾಪಾರಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.
`ಅಲ್ಲಿಯಾಗಿದ್ರೆ ವ್ಯಾಪಾರ ಆಗ್ತಿತ್ತು. ಇಲ್ಲಿ ಏನು ಇಲ್ಲ. ಬಿಸಿಲಲ್ಲಿ ಸುಮ್ನೆ ಕೂತಿವಿ. ಮಾರಾಟಕ್ಕೆ ಕೊಂಡು ತಂದ ವಸ್ತುಗಳನ್ನು ಪಾಲಿಕೆಯವರು ಹಾನಿಗೊಳಿಸಿದ್ದಾರೆ ಎಂದು ವ್ಯಾಪಾರಿಯೊಬ್ಬರು ದೂರಿದರು.
ಟ್ರಾಫಿಕ್ ಕಿರಿ-ಕಿರಿಗೆ ಬ್ರೇಕ್..!
ಪ್ರತಿ ವರ್ಷ ಯಾವುದೇ ಹಬ್ಬದ ಮಾರುಕಟ್ಟೆಯಾಗಲಿ ಪ್ರವಾಸಿ ಮಂದಿರ ರಸ್ತೆ ಹಾಗೂ ಆರ್.ಹೆಚ್ ಛತ್ರದ ಮುಂಭಾಗ ಸೇರಿದಂತೆ ವಿವಿಧೆಡೆ ಮಾರುಕಟ್ಟೆ ನಡೆಯುತ್ತಿತ್ತು.
ಪ್ರತಿ ಬಾರಿ ಹಬ್ಬದ ಮಾರುಕಟ್ಟೆ ನಡೆದಾಗಲೂ ವಾಹನಗಳ ಸಂಚಾರದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿತ್ತು. ಈ ಕಾರಣಕ್ಕಾಗಿ ವಾಹನ ಸಂಚಾರಕ್ಕೆ ಉಂಟಾಗುತ್ತಿದ್ದ ಕಿರಿ-ಕಿರಿಗೆ ಬ್ರೇಕ್ ಹಾಕಲು, ಪಾಲಿಕೆಯು ಹಬ್ಬದ ಮಾರುಕಟ್ಟೆಯನ್ನು ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸಿದೆ.
ಇತ್ತ ಹಬ್ಬದ ವ್ಯಾಪಾರಕ್ಕಾಗಿ ಹೂವಿನ ಮಾರುಕಟ್ಟೆಗೆ ಧಾವಿಸಿದ ನಗರ ವಾಸಿಗಳು, ಹಬ್ಬದ ಮಾರುಕಟ್ಟೆ ಸ್ಥಳಾಂತರ ಗೊಂಡಿರುವುದನ್ನು ತಿಳಿದು, ಹೈಸ್ಕೂಲ್ ಮೈದಾನಕ್ಕೆ ತೆರಳಿದ ದೃಶ್ಯ ಕಂಡು ಬಂದಿತು.
ಬೆಳಗ್ಗೆಯಿಂದ ವ್ಯಾಪಾರವಿಲ್ಲದೆ ಸ್ತಬ್ದವಿದ್ದ ಮಾರುಕಟ್ಟೆಯಲ್ಲಿ ವರ್ತಕರು, ಗ್ರಾಹಕರಿಗಾಗಿ ಕಾಯುವ ಪ್ರಸಂಗ ಎದುರಾಗಿತ್ತು. ತದನಂತರ ಮಧ್ಯಾಹ್ನದ ವೇಳೆಗೆ ಸಾಧಾರಣ ವ್ಯಾಪಾರ ಜರುಗಿತು.
ಚೆಂಡು ಹೂವು, ಸೇವಂತಿಗೆ ಹೂವು, ಬೆಟ್ಟದ ನೆಲ್ಲಿಕಾಯಿ, ತುಳಸಿ ಮಾಲೆ, ಬಿಲ್ವ ಪತ್ರೆ, ಹುಣಸೆ ಕಾಯಿ, ಬಾಳೆ ಕಂಬ, ಕಬ್ಬು, ಮಾವಿನ ತೋರಣಗಳು ಹಾಗೂ ಪೂಜಾ ಸಾಮಗ್ರಿಗಳು ಮಾರುಕಟ್ಟೆಯಲ್ಲಿದ್ದವು.
ಚೆಂಡು ಹೂವು ಮಾರಿಗೆ 50-60 ರೂ.ಗಳು, ಬಾಳೆ ಕಂಬ ಸಣ್ಣದು 20 ರೂ.ಗಳು ಹಾಗೂ ದೊಡ್ಡದು 30ರೂ.ಗಳಿಗೆ ಒಂದು ಜೊತೆಯಂತೆ ಮಾರುಕಟ್ಟೆಯಲ್ಲಿ ಮಾರಲ್ಪಟ್ಟವು.