ವಿಡಿಯೋ ಕಾನ್ಫರೆನ್ಸ್ ಮೂಲಕ 11 ರಾಜ್ಯಗಳ
18 ರೈಲ್ವೆ ನಿಲ್ದಾಣಗಳಲ್ಲಿ ಜನೌಷಧಿ ಕೇಂದ್ರಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ
ದಾವಣಗೆರೆ, ನ. 13 – ನಗರದ ರೈಲ್ವೆ ನಿಲ್ದಾಣದಲ್ಲಿ ಜನೌಷಧಿ ಕೇಂದ್ರವನ್ನು ಬುಧವಾರ ಉದ್ಘಾಟಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 11 ರಾಜ್ಯಗಳ 18 ರೈಲ್ವೆ ನಿಲ್ದಾಣಗಳಲ್ಲಿ ಸ್ಥಾಪಿಸಲಾಗಿರುವ ಜನೌಷಧಿ ಕೇಂದ್ರಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.
ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ಜನೌಷಧಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮೈಸೂರು ರೈಲ್ವೆ ವಿಭಾಗದಲ್ಲಿ ಎರಡನೇ ಜನೌಷಧಿ ಕೇಂದ್ರವನ್ನು ದಾವಣಗೆರೆಯಲ್ಲಿ ತೆರೆಯಲಾಗಿದೆ.
ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಕಾರಣದಿಂದ ಜನರು ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ಪಡೆಯಲು ಹಾಗೂ ಹಣ ಉಳಿಸಲು ಸಾಧ್ಯವಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಗುಣಮಟ್ಟದ ಜನರಿಕ್ ಔಷಧಿಗಳನ್ನು ರೈಲ್ವೆ ಪ್ರಯಾಣಿಕರಿಗೆ ಕಡಿಮೆ ಬೆಲೆಗೆ ಹಾಗೂ ಸುಲಭವಾಗಿ ದೊರಕುವಂತೆ ಮಾಡಲು ಈ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಮೈಸೂರು ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಶಿಲ್ಪಿ ಅಗರ್‌ವಾಲ್ ತಿಳಿಸಿದರು.
ಆರಂಭಿಕ ಹಂತದಲ್ಲಿ 500 ವಿಧದ ಔಷಧಿ ಗಳು ಹಾಗೂ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಮಾರಲಾಗುವುದು. ಮುಂಬರುವ ದಿನಗಳಲ್ಲಿ ಬೇಡಿಕೆಯನ್ನು ಪರಿಗಣಿಸಿ ಹೆಚ್ಚಿನ ಔಷಧಿಗಳನ್ನು ಪೂರೈಸಲಾಗುವುದು ಎಂದು ಜನೌಷಧಿ ಕೇಂದ್ರದ ಮಾಲೀಕರಾದ ಟಿ.ಎಸ್. ಕಿರಣ್ ಹೇಳಿದರು.
ರೈಲ್ವೆ ಇಲಾಖೆಯು ಜನರಿಗೆ ಅನುಕೂಲವಾ ಗುವ ದೃಷ್ಟಿಯಿಂದ ಜನೌಷಧಿ ಕೇಂದ್ರಕ್ಕೆ ವ್ಯವಸ್ಥೆ ಮಾಡಿದೆ. ಈ ಕೇಂದ್ರಕ್ಕೆ ವಾಣಿಜ್ಯ ಮಾನದಂಡಗಳು ಅನ್ವಯವಾಗುವುದಿಲ್ಲ. ಜನೌಷಧಿ ಮಳಿಗೆಯ ವ್ಯವಸ್ಥೆಯನ್ನು ಇಲಾಖೆಯೇ ಕಲ್ಪಿಸಿದೆ, ನಾಮಮಾತ್ರದ ಬಾಡಿಕೆ ಪಡೆಯಲಾಗುವುದು ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
ಸಾಕಷ್ಟು ರೈಲ್ವೆ ನಿಲ್ದಾಣಗಳಲ್ಲಿ ಔಷಧದ ಅಂಗಡಿಗಳು ಲಭ್ಯವಿರುವುದಿಲ್ಲ. ಕೆಲವೊಮ್ಮೆ ರೈಲ್ವೆ ನಿಲ್ದಾಣಗಳು ನಗರ ಕೇಂದ್ರದಿಂದ ದೂರದಲ್ಲಿರುತ್ತವೆ. ಹೀಗಾಗಿ ಜನರಿಗೆ ಔಷಧಗಳನ್ನು ಪಡೆಯಲು ಸಮಸ್ಯೆಯಾಗುತ್ತಿತ್ತು. ಜನೌಷಧಿ ಕೇಂದ್ರಗಳನ್ನು ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸುವುದರಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ನಿಲ್ಧಾಣಗಳಲ್ಲಿ ಜನೌಷಧಿ ಕೇಂದ್ರ ತೆರೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ದಾವಣಗೆರೆ : ನಗರದ ರೈಲ್ವೆ ನಿಲ್ದಾಣದಲ್ಲಿ ಜನೌಷಧಿ ಕೇಂದ್ರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಚಮನ್ ಸಾಬ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಎಸ್‌ಪಿ ವಿಜಯ ಕುಮಾರ್ ಸಂತೋಷ್, ಮೈಸೂರು ರೈಲ್ವೆ ವಿಭಾಗದ ಡಿ.ಆರ್.ಎಂ. ಶಿಲ್ಪಿ ಅಗರ್‌ವಾಲ್, ದಾವಣಗೆರೆ ಚೇಂಬರ್ ನಿರ್ದೇಶಕ ಕಾಸಲ್ ಬದರೀನಾಥ್ ಮತ್ತಿತರರು ಉಪಸ್ಥಿತರಿದ್ದರು.