ಇ-ಆಸ್ತಿ ತಂತ್ರಾಂಶದಲ್ಲಿನ ತೊಂದರೆ ವಿಳಂಬ ಸರಿಪಡಿಸಲು ಆಗ್ರಹ

ಇ-ಆಸ್ತಿ ತಂತ್ರಾಂಶದಲ್ಲಿನ ತೊಂದರೆ ವಿಳಂಬ ಸರಿಪಡಿಸಲು ಆಗ್ರಹ

ದಾವಣಗೆರೆ, ನ.11- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸುವಲ್ಲಿ ನಾಗರಿಕರಿಗೆ ಆಗುತ್ತಿರುವ ವಿಳಂಬ ಮತ್ತು ತೊಂದರೆಯನ್ನು ಸರಿಪಡಿಸುವಂತೆ ಪಾಲಿಕೆ ಮಾಜಿ ಸದಸ್ಯರ ಒಕ್ಕೂಟದಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಪಾಲಿಕೆಯ ಮಾಜಿ ಸದಸ್ಯರು, ಪಾಲಿಕೆಯ ಕಂದಾಯ ಶಾಖೆಯ ಸೇವೆ ಗಳನ್ನು ಸರಳೀಕರಣಗೊಳಿಸಲು ಮತ್ತು ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಇ-ಆಸ್ತಿ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗಿದೆ ಎಂದರು.

ಮಹಾನಗರ ಪಾಲಿಕೆ ವಾಪ್ತಿಯಲ್ಲಿನ ಸ್ವತ್ತಿನ ಮಾಲೀಕರು, ತಮ್ಮ ಹೆಸರಿಗೆ ಸ್ವತ್ತನ್ನು ನೋಂದಣಿ ಕಚೇರಿಯಲ್ಲಿ ನೋಂದಾಯಿಸಿದ ನಂತರ ಪಾಲಿಕೆಯಲ್ಲಿ ಖಾತೆ ನಂಬರನ್ನು ಪಡೆಯಬೇಕಾದ ಸಂದರ್ಭದಲ್ಲಿ ಇ.ಸಿ, ಕ್ರಯ ಪತ್ರ, ದಾನ ಪತ್ರ, ಪಾಲು ವಿಭಾಗ ಪತ್ರ ಹಾಗೂ ಇತರೆ ದಾಖಲೆಗಳನ್ನು ನೀಡಿ ಖಾತಾ ಪಡೆದಿರುತ್ತಾರೆ. ಅವುಗಳನ್ನೇ ಇ-ತಂತ್ರಾಂಶಕ್ಕೆ ಅಳವಡಿಸಿಕೊಂಡು ಇ-ಆಸ್ತಿ (ನಮೂನೆ-2) ನೀಡಬೇಕೆಂದು ಒತ್ತಾಯಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕಾಯ್ದೆ ಹಾಗೂ ನಿಯಮಾವಳಿಗಳ ಪ್ರಕಾರ ಅಭಿವೃದ್ಧಿಪಡಿಸಲಾಗಿರುವ ತಂತ್ರಾಂಶದ ಮೂಲಕವೇ ಇನ್ಮುಂದೆ ಕಂದಾಯ ಶಾಖೆಯು ತೆರಿಗೆದಾರರಿಗೆ ಮತ್ತು ಸಾರ್ವಜನಿಕರಿಗೆ ಸೇವೆಗಳನ್ನು ಒದಗಿಸಬೇಕಾಗಿದೆ. ಇಲ್ಲಿನ ವಾರ್ಡ್‌ಗಳಲ್ಲಿರುವ ಸ್ವತ್ತುಗಳನ್ನು ಇ-ಆಡಳಿತ ತಂತ್ರಾಂಶದಲ್ಲಿಯೂ ಅಧಿಕೃತ ಆಸ್ತಿಗಳೆಂದೇ ಪರಿಗಣಿಸಿ, ಆ ಆಸ್ತಿಗಳಿಗೆ ದಾಖಲೆ ಕೇಳದೆ ಅವುಗಳನ್ನೇ ಅಪ್‌ಲೋಡ್ ಮಾಡಿ ಅಧಿಕೃತಗೊಳಿಸಬೇಕು ಎಂದು ಹೇಳಿದರು.

ಆಸ್ತಿಯು ನಿವೇಶನವಾಗಿದ್ದಲ್ಲಿ ಪ್ರಮುಖ ಸ್ಥಳವನ್ನು ಒಳಗೊಂಡಿರುವ ನಿವೇಶನದ ಫೋಟೋ ವನ್ನು ತಂತ್ರಾಂಶದಲ್ಲಿ ಅಪ್‌ ಲೋಡ್ ಮಾಡಬೇಕು. ಒಂದು ವೇಳೆ ನಿವೇಶನದ ಹತ್ತಿರ ಯಾವುದೇ ಪ್ರಮುಖ ಸ್ಥಳಗಳು ಇಲ್ಲದೇ ಇದ್ದಲ್ಲಿ ಮಾಲೀಕರು ನಿವೇಶನದಲ್ಲಿ ನಿಂತಿರುವ ಫೋಟೋವನ್ನು ತಂತ್ರಾಂ ಶದಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು ಎಂದರು. ಇ-ಸ್ವತ್ತು ನಮೂನೆಯನ್ನು ಸರಳೀಕರಿಸಿ ಕೊಂಡು ಇ-ಆಸ್ತಿ ನಮೂನೆ-2 ನೀಡಬೇಕು. ಅದನ್ನು ಬಿಟ್ಟು ಈಗಾಗಲೇ ಇ-ಸ್ವತ್ತು ನೀಡುವಾಗ ಆಸ್ತಿ ಮಾಲೀಕರಿಗೆ ಆಗಿರುವ ನೋವುಗಳನ್ನು ಕೇಳಿದರೆ ಬೇಸರವಾಗಲಿದೆ ಎಂದು ತಿಳಿಸಿದರು.

ಮಾಜಿ ಮಹಾಪೌರರುಗಳಾದ ಗುರುನಾಥ್‌, ವಸಂತ್‌ ಕುಮಾರ್‌, ಸುಧಾ ಜಯರುದ್ರೇಶ್‌, ಎಂ.ಎಸ್‌. ವಿಠ್ಠಲ್‌, ಜ್ಯೋತಿ ಶಿವರಾಜ್‌ ಪಾಟೀಲ್, ಪಾಲಿಕೆ ಮಾಜಿ ಸದಸ್ಯರುಗಳಾದ ಆವರಗೆರೆ ಸುರೇಶ್‌, ಹೆಚ್‌.ಎನ್‌. ಶಿವಕುಮಾರ್‌, ವಿಪಕ್ಷ ನಾಯಕ ಪ್ರಸನ್ನ ಕುಮಾರ್‌, ಪಾಲಿಕೆ ಸದಸ್ಯ ಕೆ.ಎಂ. ವೀರೇಶ್, ದೂಡಾ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ್‌, ಕೊಳೇನಹಳ್ಳಿ ಸತೀಶ್‌, ಬಿ.ಜಿ. ಸಿದ್ದೇಶ್‌ ಮತ್ತಿತರರು ಈ ಸಂದರ್ಭದಲ್ಲಿದ್ದರು.

error: Content is protected !!