ಸರ್ಕಾರಿ ಅಧಿಕಾರಿ ಮಾತು ನಂಬಿ ಹಣ ಕಳೆದುಕೊಂಡ ಮಹಿಳೆ
ದಾವಣಗೆರೆ, ನ.11- ಜಿಲ್ಲಾ ಮಟ್ಟದ ಸರ್ಕಾರಿ ಅಧಿಕಾರಿಯೊಬ್ಬರ ಮಾತು ನಂಬಿ ಆನ್‌ಲೈನ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದ ಮಹಿಳೆಯೊಬ್ಬರು 10.45 ಕೋಟಿ ರೂ. ವಂಚನೆಗೊಳಗಾದ ಘಟನೆ ನಡೆದಿದೆ.
ನಗರದ ಪ್ರತಿಷ್ಠಿತ ವಿಶ್ವ ಚೇತನ ವಿದ್ಯಾಸಂಸ್ಥೆಯ ನಿರ್ದೇಶಕರಾದ ವಿ. ವಿಜಯಲಕ್ಷ್ಮಿ ವೀರಮಾಚಿನೇನಿ ವಂಚನೆಗೊಳಗಾದವರು.
ಇವರಿಗೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಡಿ. ಉಮೇಶ್ ಅಂತರ ರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ನಾಚ್ ಕಂಪನಿಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ಹೆಚ್ಚು ಹೆಚ್ಚು ಲಾಭ ಬರುತ್ತದೆಂದು ಹೇಳಿದ್ದರು.
ಇವರ ಮಾತು ಕೇಳಿದ ವಿಜಯಲಕ್ಷ್ಮಿ ಅವರು, ಹಂತ ಹಂತವಾಗಿ ಜೂ.12 ರಿಂದ ಆ.2 ರ ವರೆಗೆ 10.45 ಕೋಟಿ ರೂಪಾಯಿಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದರು.
ಹೂಡಿದ್ದ ಹಣ 10.45 ಕೋಟಿ ರೂ.ಗಳಾಗಿದ್ದರೂ, ಆನ್‌ಲೈನ್‌ನಲ್ಲಿ 23 ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತು. ಹೂಡಿಕೆಯ ಜತೆಗೆ ಹೆಚ್ಚುವರಿಯಾಗಿ ಬಂದ ಹಣವೂ ಸೇರಿದಂತೆ ಎಲ್ಲ ಹಣವನ್ನು ಬಿಡಿಸಿಕೊಳ್ಳಲು ಮುಂದಾದಾಗ ಕಂಪನಿಯವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಳ್ಳಲು ಬರುವುದಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಈ ವೇಳೆ ತಾನು ವಂಚನೆಗೊಳಗಾದ ಬಗ್ಗೆ ತಿಳಿದು ವಿಜಯಲಕ್ಷ್ಮಿ ವೀರಮಾಚಿನೇನಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆ.7ರಂದು ದೂರು ದಾಖಲಿಸಿದ್ದಾರೆ.