ಒಳಮೀಸಲಾತಿ ಜಾರಿಗೆ ಕೂಡಲೇ ನಿರ್ಧಾರ ಕೈಗೊಳ್ಳಲಿ

ಒಳಮೀಸಲಾತಿ ಜಾರಿಗೆ ಕೂಡಲೇ ನಿರ್ಧಾರ ಕೈಗೊಳ್ಳಲಿ

ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ಒತ್ತಾಯ

ದಾವಣಗೆರೆ, ನ.10- ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡಲೇ ಆಯೋಗ ರಚಿಸಿ ಮೂರು ತಿಂಗಳ ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯ ತನಕ ಸರ್ಕಾರದ ಯಾವುದೇ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸಬಾರದು ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಸರ್ಕಾರಕ್ಕೆ ಒತ್ತಾಯಿಸಿದರು.

ಇಂದಿಲ್ಲಿ ಶ್ರೀ ಶಿವಯೋಗ ಮಂದಿರದಲ್ಲಿ ಏರ್ಪಾಡಾಗಿದ್ದ ಜಿಲ್ಲಾ ಮಾದಿಗರ ಹಾಗೂ ಪರಿಶಿಷ್ಟ ಜಾತಿ ಮುಖಂಡರುಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಗೆ 3 ದಶಕಗಳಿಂದ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತ ತಲುಪಿದೆ. ಇಷ್ಟವಿಲ್ಲದಿದ್ದರೂ ಮತ್ತೊಂದು ಆಯೋಗ ರಚಿಸುವ ಸರ್ಕಾರದ ನಿರ್ಧಾರವನ್ನು ಸಮುದಾಯ ಒಪ್ಪಿಕೊಂಡಿದೆ ಎಂದರು.

ಇತ್ತ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆರೋಗ್ಯ ಇಲಾಖೆ ಸೇರಿ ಸರ್ಕಾರದ ಹಲವು ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳ್ಳಬೇಕು ಎಂದು ಆಗ್ರಹಿಸಿದರು.

ದತ್ತಾಂಶ ಸಂಗ್ರಹಿಸುವ ನೆಪದಲ್ಲಿ ಆಯೋಗ ರಚಿಸಿ ಕಾಲಹರಣ ಮಾಡಬಾರದು ಎಂಬ ಕೋರಿಕೆ ಸಮುದಾಯದ್ದಾಗಿತ್ತು. ಆದರೆ, ರಾಜ್ಯ ಸರ್ಕಾರ ಆಯೋಗ ರಚಿಸಲು ಈಗಾಗಲೇ ತೀರ್ಮಾನಿಸಿದೆ. ವರದಿ ಸಿದ್ಧಪಡಿಸಲು ಮೂರು ತಿಂಗಳ ಗಡುವು ನೀಡುವುದಾಗಿ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ಕೂಡಲೇ ಆಯೋಗ ರಚಿಸಿ ವಿಳಂಬ ಮಾಡದೇ ವರದಿ ಪಡೆದು ತೀರ್ಮಾನ ಕೈಗೊಳ್ಳಬೇಕು’ ಎಂದು ಹೇಳಿದರು.

ಆದಿಜಾಂಬವ ಮಠದ ಷಡಕ್ಷರಮುನಿ ಶ್ರೀಗಳು ಮಾತನಾಡಿ, ಬಡತನ, ಹಸಿವು ಮತ್ತು ದೌರ್ಜನ್ಯವನ್ನು ಅನುಭವಿಸುತ್ತಿರುವ ಮಾದಿಗ ಸಮುದಾಯ ನಿರಂತರವಾಗಿ ಶೋಷಣೆ ಅನುಭವಿಸಿದೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದರು.

ವಂಚನೆಗೆ ಒಳಗಾದ ಮಾದಿಗ ಸಮುದಾಯಕ್ಕೆ ಸರಿಯಾದ ಪಾಲು ಸಿಕ್ಕಾಗ ಮಾತ್ರ ಸಶಕ್ತಗೊಳ್ಳಲು ಸಾಧ್ಯವಾಗಲಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು, ಶಿಕ್ಷಣ ಪಡೆಯಲು ಒಳಮೀಸಲು ಅತ್ಯಗತ್ಯವಾಗಿದೆ ತಿಳಿಸಿದರು.

ಗುರು ರಾಮದಾಸ ಸ್ವಾಮಿ ಅಧ್ಯಾತ್ಮಿಕ ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಎಚ್‌.ವೀರಭದ್ರಪ್ಪ ಮಾತನಾಡಿ, ಡಿ.15ರಂದು ಆದಿ ಕರ್ನಾಟಕ ವಿದ್ಯಾರ್ಥಿನಿಲಯದ ಮೈದಾನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಾದಿಗ ಸಮಾಜದ ಸಮಾವೇಶಕ್ಕೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ 25 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಪೂರ್ವಭಾವಿ ಸಭೆಯಲ್ಲಿ ಸಮಾವೇಶ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವದ ಕುರಿತು ಚರ್ಚಿಸಲಾಗಿದೆ. ಭಿನ್ನಾಭಿಪ್ರಾಯ ಮರೆತು ಸಮುದಾಯದ ಹಿತಾಸಕ್ತಿಗಾಗಿ ಎಲ್ಲರೂ ಒಗ್ಗೂಡಿಕೊಂಡು ಸಮುದಾಯದ ಶಕ್ತಿ ಪ್ರದರ್ಶನ ಮಾಡೋಣ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಆಹ್ವಾನಿಸಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ರವಿ ನಾರಾಯಣ, ಸಮುದಾಯದ ಮುಖಂಡರಾದ ಬಿ.ಎಂ. ರಾಮಸ್ವಾಮಿ, ನಿರಂಜನಮೂರ್ತಿ, ರಾಜಣ್ಣ, ಎಸ್‌.ಮಲ್ಲಿಕಾರ್ಜುನ್‌ ಇದ್ದರು.

error: Content is protected !!