ಸ್ಮಾರ್ಟ್ ಸಿಟಿ ಹೆಸರಲ್ಲಿ ದರ ದುಪ್ಪಟ್ಟು, ಸೈಟುಗಳಿದ್ದರೂ ಕೊಳ್ಳಲಾಗದ ಜನತೆ, ನಿಂತ ನೀರಾಗಿದೆ ಭೂ ವ್ಯಾಪಾರ
ದಾವಣಗೆರೆ: ನಿವೇಶನ ಕೊಳ್ಳುವುದು, ಮನೆ ಕಟ್ಟಿಸುವುದು ಮಧ್ಯಮ ವರ್ಗದವರ ಕನಸು. ಆದರೆ ದಾವಣಗೆರೆಯಂತಹ ನಗರದಲ್ಲಿ ಮಧ್ಯಮ ವರ್ಗದವರು ನಿವೇಶನ ಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ದರಗಳು ಏರಿಕೆಯಾಗಿಬಿಟ್ಟಿವೆ.
ಮಾರ್ಗಸೂಚಿ ದರ ಏರಿಕೆ, ಮುದ್ರಾಂಕ ಶುಲ್ಕದ ಹೊರೆ, ಸಾಲು ಸಾಲು ಹಬ್ಬಗಳು ಮತ್ತಿತರೆ ಕಾರಣಗಳಿಂದಾಗಿ ಕಳೆದ ಮೂರ್ನಲ್ಕು ತಿಂಗಳಿನಿಂದ ಭೂ ವ್ಯವಹಾರಕ್ಕೆ ಗರ ಬಡಿದಂತಾಗಿದೆ ಎಂಬುದು ಮಧ್ಯವರ್ತಿಗಳ ಮಾತು. ಆದರೆ ಮಧ್ಯವರ್ತಿಗಳ `ಕೃತಕ ದರ ಏರಿಕೆ’ ಕಾರಣವೂ ಇದಕ್ಕೆ ಕಾರಣ ಇರಬಹುದು.
ನಗರದ ಸುತ್ತಲಿನ ಐದಾರೂ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿವೇಶನಗಳಿದ್ದರೂ ಮಧ್ಯಮ ವರ್ಗಕ್ಕೆ ಕೈ ಗೆಟುಕುವಂತಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ರಿಯಲ್ ಎಸ್ಟೇಟ್ ದಂಧೆ ನಿಂತ ನೀರಾಗಿದೆ. ಬಂಡವಾಳ ಶಾಹಿಗಳು ಮಾತ್ರ ಇಲ್ಲಿ ಹಣ ತೊಡಗಿಸುತ್ತಿದ್ದಾರೆಯೇ ವಿನಃ ಮಧ್ಯಮ ವರ್ಗ ಸದ್ಯಕ್ಕೆ ಕೊಳ್ಳುವಿಕೆಯಿಂದ ದೂರು ಉಳಿದಿದೆ.
2016ರಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗುತ್ತಲೇ ನಿವೇಶನಗಳ ಬೆಲೆ ಗಗನ ಮುಖಿಯಾಗಿಯಾಗ ತೊಡಗಿದವು. ಪ್ರತಿ ಅಡಿಗೆ 1500 ರೂ. ಇದ್ದ ನಿವೇಶನದ ಬೆಲೆ ದಿಢೀರನೆ 3 ಸಾವಿರ ರೂ.ಗಳಿಗೆ ಏರಿತ್ತು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುತ್ತದೆ. ದಾವಣಗೆರೆ ಸಿಂಗಾಪುರದಂತಾಗುತ್ತದೆ ಎಂದು ಭಾವಿಸಿದ ಬಂಡವಾಳ ಶಾಹಿಗಳು ನಿವೇಶನಗಳನ್ನು, ಮನೆಗಳನ್ನು ಕೊಳ್ಳತೊಡಗಿದರು. ಇದು ಮಧ್ಯಮ ವರ್ಗಕ್ಕೆ ಬಿಸಿ ತುಪ್ಪವಾಯ್ತು.
ಇದಾದ ನಂತರವೂ ಅಂದರೆ ಕಳೆದ ಐದಾರು ವರ್ಷಗಳಿಂದ ಸ್ಮಾರ್ಟ್ ಹೆಸರಲ್ಲಿ ಬೆಲೆ ಏರುತ್ತಲೇ ಸಾಗಿತ್ತು. ಆದರೆ ಸ್ಮಾರ್ಟ್ ಯೋಜನೆ ಮುಗಿಯುತ್ತಾ ಬಂದರೂ, ದಾವಣಗೆರೆಯಲ್ಲಿ ಜನರ ಕಲ್ಪನೆಯಲ್ಲಿದ್ದ `ಸ್ಮಾರ್ಟ್’ ಸಿಟಿ ಮಾತ್ರ ಕನಸಾಗಿಯೇ ಉಳಿಯಿತು.
ಹೊಸ ನಿವೇಶನದಲ್ಲಿ ಹತ್ತಿಪ್ಪತ್ತು ಸೈಟು…
ಹೊಸ ನಿವೇಶನ ರೆಡಿಯಾಗುತ್ತಲೇ ಬಂಡವಾಳ ಶಾಹಿಗಳು ಅಥವಾ ಹಣವುಳ್ಳ ಮಧ್ಯವರ್ತಿಗಳು ಹತ್ತಿಪ್ಪತ್ತು ನಿವೇಶನಗಳನ್ನು ಕೊಂಡುಕೊಳ್ಳುತ್ತಾರೆ. ನಂತರ ಅವುಗಳನ್ನು ಲಾಭಕ್ಕೆ ಮಾರಿಕೊಳ್ಳು ತ್ತಾರೆ. ಇದು ನಿವೇಶನಗಳ ದರ ಏರಿಕೆಗೆ ಪ್ರಮುಖ ಕಾರಣ.
ಇನ್ನು ನಿವೇಶನ ಕೊಂಡು ಮನೆಗಳನ್ನು ಕಟ್ಟಿಯೂ ಮಾರಾಟ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಪ್ರಕ್ರಿಯೆ ಹೆಚ್ಚಾಗಿದೆ. ನಿವೇಶನ ಖರೀದಿಸಿ, ಮನೆ ಕಟ್ಟಿಸಲೂ ಬಿಡುವಿಲ್ಲ ಎನ್ನುವವರೇ ಇವರಿಗೆ ಬಂಡವಾಳ.
ಉದಾಹರಣೆಗೆ 30 ಲಕ್ಷ ರೂ.ಗಳಿಗೆ ನಿವೇಶನ ಖರೀದಿಸಿ, 30 ಲಕ್ಷ ಖರ್ಚು ಮಾಡಿ ಮನೆ ಕಟ್ಟಿದರೆ, 90 ಲಕ್ಷ ರೂ.ಗಳಿಂದ 1 ಕೋಟಿ ರೂ. ವರೆಗೆ ಮನೆ ಮಾರಾಟ ಮಾಡಬಹುದು ಎಂಬುದು ಮನೆ ಕಟ್ಟಿ ಮಾರುವ ಮಧ್ಯವರ್ತಿಗಳ ಆಲೋಚನೆ.
ಮನೆಗಳೂ ಹೆಚ್ಚಾಗಿವೆ..
ಕೊಂಡ ನಿವೇಶನದಲ್ಲೀಗ ಎರಡು ಅಥವಾ ಮೂರು ಮಹಡಿ ಮನೆ ನಿರ್ಮಿಸಿ ಒಂದರಲ್ಲಿ ತಾವಿದ್ದು, ಉಳಿದ ಮನೆಗಳಿಂದ ಬಂದ ಬಾಡಿಗೆಯಲ್ಲಿ ಲೋನ್ ತೀರಿಸುವ ಆಲೋಚನೆ ಜನರದ್ದು. ಹೀಗಾಗಿ ಮನೆಗಳು ಹೆಚ್ಚಾಗಿ ಬಾಡಿಗೆ ಮನೆಗಳಿಗೆ ಬೇಡಿಕೆ ಕಡಿಮೆಯಾಗಿದೆ. ಆದರೆ ಮಧ್ಯ ಭಾಗದಲ್ಲಿ, ಪ್ರತಿಷ್ಠಿತ ಬಡಾವಣೆಗಳಲ್ಲಿ ಮಾತ್ರ ಬಾಡಿಗೆ ಮನೆಗಳಿಗೆ ಬೇಡಿಕೆ ಕುಂದಿಲ್ಲ.
ಕಳೆದ ವರ್ಷ 27,864 ಆಸ್ತಿ ನೋಂದಣಿ
ನಗರದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ 2020-21ನೇ ಸಾಲಿನಲ್ಲಿ 23,097 ಆಸ್ತಿಗಳು ನೋಂದಣಿಗಳಾಗಿದ್ದವು. ಸ್ಟಾಂಪ್ ಹಾಗೂ ರಿಜಿಸ್ಟೇಷನ್ ಶುಲ್ಕ ಸೇರಿ 70,68,93,138 ರೂ. ಸಂಗ್ರಹವಾಗಿತ್ತು. 2021-22ನೇ ಸಾಲಿನಲ್ಲಿ 25,659 ಆಸ್ತಿಗಳು ನೋಂದಣಿಯಾಗಿದ್ದು, 94,96,13,912 ರೂ. ಹಾಗೂ 2022-23ನೇ ಸಾಲಿನಲ್ಲಿ 27,864 ಆಸ್ತಿಗಳು ನೋಂದಣಿಯಾಗಿ 96,00,34,174 ರೂ. ಸಂಗ್ರಹವಾಗಿತ್ತು. ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಿನಿಂದ ಅಕ್ಟೋಬರ್ ಕೊನೆ ವರೆಗೆ 14,586 ಮಾತ್ರ ನೋಂದಣಿಗಳಾಗಿವೆ. ಕಳೆದ ಮೂರು ವರ್ಷಗಳಿಂದಲೂ ಏರಿಕೆಯತ್ತ ಸಾಗಿದ್ದ ನೋಂದಣಿ ಪ್ರಸಕ್ತ ವರ್ಷ ತುಸು ಇಳಿಕೆಯಾಗಿದೆ.
ಸೈಟ್ ಎಂಬುದು `ಬಂಡವಾಳ’
ಪ್ರಸ್ತುತ ದಿನಗಳಲ್ಲಿ ನಿವೇಶನ ಕೊಳ್ಳುವವರಲ್ಲಿ ಹೆಚ್ಚಿನವರು ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳು, ಎ ಹಾಗೂ ಬಿ ದರ್ಜೆ ನೌಕರರು. ಪೊಲೀಸ್ ಅಧಿಕಾರಿಗಳು, ಉಪನ್ಯಾಸಕರು. ಐಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರೇ. ಮನೆಕಟ್ಟಿಸುವ ಇರಾದೆ ಇರದಿದ್ದರೂ ಭೂಮಿ ಮೇಲೆ ಬಂಡವಾಳ ಹಾಕಿದರೆ ಲಾಭವೇ ಹೆಚ್ಚು ಎನ್ನುವ ಉದ್ದೇಶ ದಿಂದ ನಿವೇಶನಗಳನ್ನು ಕೊಳ್ಳುತ್ತಿದ್ದಾರೆ. ಇನ್ನು ದಾವಣಗೆರೆಯಲ್ಲಿ ಕರ್ತವ್ಯಕ್ಕೆ ಬರುವ ಪ್ರತಿ ಸರ್ಕಾರಿ ಅಧಿಕಾರಿ ಅಥವಾ ನೌಕರ ಬೇರೆ ನಗರಕ್ಕೆ ವರ್ಗವಾದರೂ ಇಲ್ಲೊಂದು ನಿವೇಶನ ಖರೀದಿಸಿಟ್ಟು ಹೋಗುವುದೇ ಹೆಚ್ಚು ಎನ್ನು ತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು.
ಮಾರ್ಗಸೂಚಿ ದರ ಏರಿಕೆಯಿಂದಲೂ ಪೆಟ್ಟು
ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಮಾರಾಟ ದರಕ್ಕೂ, ಸರ್ಕಾರ ನಿಗದಿ ಪಡಿಸಿರುವ ಮಾರ್ಗಸೂಚಿ ದರಕ್ಕೂ ಕೆಲವು ಪ್ರದೇಶಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಇದರಿಂದಾಗಿ ನಿವೇಶನ, ಜಮೀನು ಖರೀದಿ ವ್ಯವಹಾರದಲ್ಲಿ ಕಪ್ಪು ಹಣದ ಚಲಾವಣೆ ಜಾಸ್ತಿ. ಮಾರ್ಗಸೂಚಿ ದರ ಹೆಚ್ಚಿಸುವ ಮೂಲಕ ಅದಕ್ಕೂ ನಿಯಂತ್ರಣ ಹಾಕಲು ಸರ್ಕಾರ ಮುಂದಾಗಿದೆ.
ಪ್ರತಿ ವರ್ಷ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲಾಗುತ್ತಿತ್ತು. 2019ರಿಂದ ಕೋವಿಡ್ ಕಾರಣದಿಂದಾಗಿ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಜೊತೆಗೆ ಕಳೆಗುಂದಿದ್ದ ರಿಯಲ್ ಎಸ್ಟೇಟ್ಗೆ ಉತ್ತೇಜನ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು 2020-21ರಲ್ಲಿ ಮೊದಲ ಬಾರಿಗೆ ಶೇ. 10ರಷ್ಟು ಮಾರ್ಗಸೂಚಿ ದರವನ್ನು ಕಡಿಮೆ ಮಾಡಲಾಗಿತ್ತು.
ಮಾರ್ಗಸೂಚಿ ಪರಿಷ್ಕರಣೆಯಿಂದ ಸರ್ಕಾರದ ಆದಾಯ ಗಳಿಕೆಯಲ್ಲಿ ಹೆಚ್ಚಳವಾಗಬಹುದಾದರೂ, ಕೋವಿಡ್ ಸಂದರ್ಭದಲ್ಲಿ ಮಂದಗತಿ ಪಡೆದುಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮ ಸಾಕಷ್ಟು ಚೇತರಿಸಿಕೊಂಡಿತ್ತು. ಈಗ ದರ ಏರಿಕೆಯಿಂದ ಮತ್ತೆ ವಹಿವಾಟಿನ ಮೇಲೆ ಹೊಡೆತ ಬಿದ್ದಿದೆ.
ಎರಡು ಬಸ್ ನಿಲ್ದಾಣಗಳು, ತುಂಗಭದ್ರಾ ನದಿ ಬಳಿ ಒಂದು ಬ್ಯಾರೇಜ್, ಒಂದಿಷ್ಟು ಸಿಮೆಂಟ್ ರಸ್ತೆಗಳನ್ನು ಬಿಟ್ಟರೆ, ಅಂತಹ ಘನಾಂಧಾರಿ ಕೆಲಸಗಳಾವುವೂ ಆಗಲೇ ಇಲ್ಲ. ಸ್ಮಾರ್ಟ್ ಸಿಟಿ ನೆಪದಿಂದ ಸ್ಮಾರ್ಟ್ ಆಗಿದ್ದು ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದವರು.
ದಾವಣಗೆರೆ ನಾಲ್ಕೈದು ಕಿಲೋ ಮೀಟರ್ ಸುತ್ತ ನಿವೇಶನ ದರ ಪ್ರತಿ ಅಡಿಗೆ 4 ಸಾವಿರ ರೂ. ಆಸುಪಾಸಿದೆ. ಇಲ್ಲಿ ನಿವೇಶನ ಕೊಂಡು ಮನೆಕಟ್ಟುವುದು ಕಷ್ಟ. ಇನ್ನು ಹೃದಯ ಭಾಗದಲ್ಲಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅಳಿದುಳಿದ ನಿವೇಶನಗಳಿಗೆ ಬಂಗಾರದ ಬೆಲೆ.
ಪಶ್ಚಿಮ ಭಾಗ ನಗರದಿಂದ ಹರಿಹರದವರೆಗೂ ಹೊಸ ಬಡಾವಣೆಗಳು ತಲೆ ಎತ್ತಿವೆ. ಇನ್ನೇನು ಕೆಲವೇ ವರ್ಷಗಳಲ್ಲಿ ದಾವಣಗೆರೆ-ಹರಿಹರ ಒಂದಾಗುವ ಹಂತದಲ್ಲಿದೆ. ನಗರದ ಸುತ್ತ ನಿವೇಶನ ಕೊಳ್ಳಲಾಗದ ಬಡ ವರ್ಗ ಈಗ ಬಾತಿ, ಕುಂದುವಾಡದ ಬಳಿ ಇರುವ ನಿವೇಶನಗಳತ್ತ ಕಣ್ಣು ಹಾಯಿಸಿದ್ದಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಅಲ್ಲಿಯೂ ನಿವೇಶನಗಳು ದುಬಾರಿಯಾಗಿದ್ದವು.
ದಕ್ಷಿಣ ಭಾಗದಲ್ಲಿ ಕೊಂಡಜ್ಜಿ ರಸ್ತೆಯ ಯರಗುಂಟೆ ಬಳಿಯ ಜಮೀನುಗಳೂ ಈಗಾಗಲೇ ಬಡಾವಣೆಗಳಾಗಿ ಮನೆಗಳು ನಿರ್ಮಾಣಗೊಂಡಿವೆ. ಸಮೀಪದ ಕಕ್ಕರಗೊಳ್ಳದಲ್ಲೂ ಬಡಾವಣೆ ನಿರ್ಮಾಣವಾಗಿ. ಈಗಾಗಲೇ ಹಲವರು ನಿವೇಶನ ಖರೀದಿಸಿದ್ದಾರೆ. ಉತ್ತರ ಭಾಗದಲ್ಲಿ ಈಗಾಗಲೇ ಶಿರಮಗೊಂಡನಹಳ್ಳಿ ಬಳಿ ಜಮೀನುಗಳ ಬೆಲೆ ಹೆಚ್ಚಾಗಿದೆ.
ಇನ್ನು ಶಾಮನೂರು ಆಚೆ ದೂಡಾದಿಂದ ನಿರ್ಮಾಣವಾಗಿದ್ದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಂತೂ ಅತಿವೇಗವಾಗಿ ಮನೆಗಳು ನಿರ್ಮಾಣವಾದವು. ಇಲ್ಲಿ ನಿವೇಶನಗಳು ಸಿಗುವುದೂ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಿವಪಾರ್ವತಿ ಬಡಾವಣೆ, ಡಾಲರ್ಸ್ ಕಾಲೋನಿ ದಾಟಿ ಈಗ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆದರೆ ನಿವೇಶನ ಕೊಳ್ಳುವುದು ಕಷ್ಟ.
ನಗರದ ಪೂರ್ವ ಭಾಗಕ್ಕೆ ಅಷ್ಟಾಗಿ ಬೇಡಿಕೆ ಬರಲಿಲ್ಲವಾದರೂ ತೋಳಹುಣಸೆವರೆಗೂ ನಿವೇಶನಗಳಾಗಿವೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ ಸಾವಿರಾರೂ ಕೋಟಿ ರೂ. ಅನುದಾನ ಇದ್ದರೂ, ನಗರದಲ್ಲಿ ಮೂತ್ರ ವಿಸರ್ಜನೆಗೂ ಜಾಗ ಹುಡುಕಾಡಬೇಕಾದ ಪರಿಸ್ಥಿತಿ ಇದೆ.
ಪಿ.ಜೆ. ಬಡಾವಣೆ, ತರಳಬಾಳು ಬಡಾವಣೆ, ವಿದ್ಯಾನಗರ, ಎಂ.ಸಿ.ಸಿ. ಎ ಹಾಗೂ ಬಿ ಬ್ಲಾಕ್ ನಂತಹ ಬಡಾವಣೆಗಳಲ್ಲೇ ಶೌಚಾಲಯಗಳಿಲ್ಲ. ಇನ್ನು ನೂತನ ಬಡಾವಣೆಗಳಲ್ಲಂತೂ ಕನಸಿನ ಮಾತೇ ಸರಿ. ಆದರೂ ನಿವೇಶನಗಳ ಬೆಲೆ ಏರಿಕೆಯಾಗಿದೆ. ಬಡವರು ಕೊಳ್ಳುವುದಾದರೂ ಹೇಗೆ ಎನ್ನುತ್ತಾರೆ ವಿದ್ಯಾನಗರದ ಹರಿಣಿ ಫ್ಯಾನ್ಸಿ ಸ್ಟೋರ್ ಮಾಲೀಕ ತರುಣ್.
ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ [email protected]