ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯೋತ್ಸವದಲ್ಲಿ ಪತ್ರಕರ್ತ ಮಂಜುನಾಥ ಕಾಡಜ್ಜಿ
ದಾವಣಗೆರೆ,ನ.8- ಕನ್ನಡ ನಾಡು, ನುಡಿ, ಜಲ, ಗಡಿ ಪ್ರದೇಶಗಳಿಗೆ ಕುತ್ತು ಬಂದಾಗ ಪ್ರತಿಯೊಬ್ಬರೂ ಹೋರಾಟಕ್ಕೆ ಮುಂದಾಗಬೇಕೆಂದು ಹಿರಿಯ ಪತ್ರಕರ್ತ ಪಿ. ಮಂಜುನಾಥ್ ಕಾಡಜ್ಜಿ ತಿಳಿಸಿದರು.
ನಗರದ ಡಾ. ಎಂ.ಸಿ ಮೋದಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪಾದಚಾರಿ ಘಟಕದಿಂದ ಹಮ್ಮಿ ಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಎಲ್ಲಾದರೂ ಭಾಷಾ ವಿರೋಧಿ ಕೃತ್ಯಗಳು ಸಂಭವಿಸಿದಾಗ ಇದನ್ನು ಕನ್ನಡಪರ ಸಂಘ ಸಂಸ್ಥೆಗಳವರೇ ಪ್ರತಿಭಟಿಸಬೇಕೆಂಬ ಅಸಡ್ಡೆ ವನೋಭಾವ ಪ್ರತಿಯೊಬ್ಬರಲ್ಲೂ ಬೇರೂರಿದಂತಿದೆ. ಇದನ್ನು ಕೈ ಬಿಟ್ಟು ಭಾಷೆ, ನೆಲ, ಜಲ ಗಳಿಗೆ ಧಕ್ಕೆ ಬಂದ ಪ್ರತಿಯೊಬ್ಬರೂ ಕನ್ನಡಪರ ಸಂಘ ಸಂಸ್ಥೆಗಳ ಜೊತೆ ನಿಂತು ಪ್ರತಿಭಟಿಸಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್ ರಾಮೇಗೌಡ ಮಾತನಾಡಿ, ಸರ್ಕಾರಗಳು ಮತ್ತು ಸ್ಥಳೀಯ ಆಡಳಿತಗಳು ಕನ್ನಡ ಭಾಷೆ ಬಗ್ಗೆ ಅಸಡ್ಡೆ ತೋರಿದ ಸಂದರ್ಭದಲ್ಲಿ ಅದನ್ನು ಬಲವಾಗಿ ವಿರೋಧಿಸುವ ಕೆಲಸವನ್ನು ಕರವೇ ಮಾಡಿಕೊಂಡು ಬಂದಿದೆ. ಮುಂದಿನ ದಿನಗಳಲ್ಲಿ ಕೂಡ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದರು.
ಇದಕ್ಕೂ ಮುನ್ನ ಎವಿಕೆ ಕಾಲೇಜು ರಸ್ತೆಯಲ್ಲಿನ ವೇದಿಕೆಯ ಜಿಲ್ಲಾ ಕಚೇರಿ ಬಳಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಸಾಹಿತಿ, ಉಪನ್ಯಾಸಕ ಮಹಾಂತೇಶ್ ನಿಟ್ಟೂರು ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು ಜನಸಾಮಾನ್ಯರು ಧ್ವನಿಗೂಡಿಸಿದರೆ ಮಾತ್ರ ಕನ್ನಡದ ಭಾಷೆ ಮಹತ್ವ ಪಡೆಯುತ್ತದೆ. ಕರವೇ ಅಂತಹ ಹೋರಾಟಗಾರರು ನಮ್ಮ ರಾಜ್ಯದಲ್ಲಿ ಕನ್ನಡ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಕನ್ನಡಿಗನು ಇದರ ಬಗ್ಗೆ ಗಮನ ಹರಿಸಬೇಕು. ಕರ್ನಾಟಕದಲ್ಲಿ ಕನ್ನಡಿಗರ ಬದುಕಾಗಬೇಕು. ಹೊರತು ಪರಭಾಷಿಗರ ಬದುಕನ್ನು ಕಟ್ಟುವ ರೀತಿ ನಮ್ಮಲ್ಲಿ ನೋಡಿ ಕೊಂಡು ಸುಮ್ಮನೆ ಕೂತರೆ, ಪರಭಾಷಿಗರು ಒಂದು ದಿನ ಕರ್ನಾಟಕವನ್ನು ಆಳುವಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತದೆ ಇದನ್ನು ತಡೆಗಟ್ಟುವ ಕೆಲಸ ಕರವೇ ಯಂತಹ ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಮುಖಂಡರಾದ ಮಂಜುಳಾ, ಗಣೇಶ್ ಗೀತಾ, ಸಲ್ಮಾ ಬಾನು, ಮಂಜುಶ್ರೀ ಗೌಡ, ಮಲ್ಲಿಕಾರ್ಜುನ್, ಕೆ ಜಿ ಬಸವರಾಜ್, ಗೋಪಾಲ್ ದೇವರ ಮನೆ, ಸಂತೋಷ್, ಗಜೇಂದ್ರ, ಸುರೇಶ್, ತನ್ವೀರ್, ಆಟೋ ರಫೀಕ್, ಪೈಲ್ವಾನ್ ಜಬೀವುಲ್ಲಾ, ಮಂಜುನಾಥ್, ಪರಮೇಶ್, ಬಸವರಾಜ್, ಚಂದ್ರು, ಎಂಬಿಎ ಲೋಕೇಶ್, ಗಿರೀಶ್ ಕುಮಾರ್, ಸಂಜೀವ್, ಮಂಜುನಾಥ್, ಸಾಗರ್, ಗುರುಮೂರ್ತಿ ಪತ್ರಕರ್ತ ಚನ್ನಬಸವ ಶೀಲವಂತ್, ತುಳಸಿರಾಮ್ ದಾದಾಪೀರ್ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದ ನಂತರ ಮೋದಿ ವೃತ್ತದಲ್ಲಿ ಹಾಕಲಾಗಿದ್ದ ಖಾಸಗಿ ಶಾಲೆಯೊಂದರ ಆಂಗ್ಲ ನಾಮಫಲಕಕ್ಕೆ ವೇದಿಕೆ ಮುಖಂಡರು ಮಸಿ ಬಳಿದರು.