ಹಿರಿಮೆ-ಗರಿಮೆ ಹೊಂದಿದ ಕ್ಷೇತ್ರ `ರಂಗಭೂಮಿ’

ಹಿರಿಮೆ-ಗರಿಮೆ ಹೊಂದಿದ ಕ್ಷೇತ್ರ `ರಂಗಭೂಮಿ’

ರಂಗ ನಾಟಕಗಳ ಸಂಸ್ಕೃತಿ ಮತ್ತೆ ಮರುಕಳಿಸುವಂತೆ ಮಾಡಿದ ಅಭಿನಯ ಪ್ರದರ್ಶನ

ದಾವಣಗೆರೆ, ನ. 7- ರಂಗ ವೈಶಿಷ್ಟ್ಯ ಮೆರೆದ ಮೇರು ಸಂಸ್ಕೃತಿಯ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ನಾಟಕಗಳು ಇತ್ತೀಚಿನ ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ರಂಗಾಸಕ್ತರಿಗೆ ನಾಟ್ಯ ಸಂಗೀತ, ರಂಗಗೀತೆಗಳ ಗಾಯನದ ಮೂಲಕ ರಂಗ ನಾಟಕಗಳ ಸಂಸ್ಕೃತಿಯನ್ನು ಮತ್ತೆ ಮರುಕಳಿಸುವಂತೆ ಮಾಡಿದ್ದು `ಅಭಿನಯ ಸಂಗೀತ ಪ್ರದರ್ಶನ’ ಇದಕ್ಕೆ ನಗರದ ಶಿವಯೋಗಾಶ್ರಮ ಆವರಣದ ರಂಗ ವೇದಿಕೆ ಸಾಕ್ಷಿಯಾಗಿದ್ದು ವಿಶೇಷ.

ದಾವಣಗೆರೆ ವೃತ್ತಿ ರಂಗಭೂಮಿ ರಂಗಾಯಣ ಕಳೆದ ಹದಿನೈದು ದಿನಗಳಿಂದ ರಂಗ ಸಂಗೀತ, ವೃತ್ತಿರಂಗ ಗೀತೆಗಳ ಕಲಿಕಾ ಕಾರ್ಯಾಗಾರದಲ್ಲಿ ಆಯ್ದ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ರಂಗ ಗೀತೆಗಳು ಮತ್ತು ನಾಟ್ಯ ಸಂಗೀತ ಹಿಂದಿನ ರಂಗ ವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುವ ಮೂಲಕ ವಿನೂತನ ರಂಗ ಪ್ರಯೋಗಕ್ಕೆ ನಾಂದಿ ಹಾಡಿದ್ದಾರೆ.

ಧಾರವಾಡದ ಹಿರಿಯ ರಂಗ ನಿರ್ದೇಶಕ ಡಾ.ಪ್ರಕಾಶ ಗರುಡ ಮತ್ತು ಮತ್ತೊಬ್ಬ ಯುವ ರಂಗ ನಿರ್ದೇಶಕ ರಾಘವ ಕಮ್ಮಾರ ಅವರ ರಂಗ ತರಬೇತಿಯಲ್ಲಿ ಪಳಗಿದ ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ 18 ಕಲಾವಿದರು ತಮ್ಮ ಕಲಾ ಪ್ರತಿಭೆ ಮೂಲಕ ಸಹೃದಯಿ ಪ್ರೇಕ್ಷಕರ ಮನ ಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡಿದರು.

ಇದೇ ವೇಳೆ ರಂಗ ಸಂಗೀತ, ವೃತ್ತಿ ರಂಗ ಗೀತೆಗಳ ಕಲಿಕಾ ಕಾರ್ಯಾಗಾರದ ಸಮಾರೋಪ ಮತ್ತು ಅಭಿನಯ ಸಂಗೀತ ಪ್ರದರ್ಶನ ಕಾರ್ಯಕ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದ ಕೇಂದ್ರ ಸಂಗೀತ-ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ತುಮಕೂರಿನ ಡಾ. ಲಕ್ಷ್ಮಣದಾಸ್ ಅವರು, `ಭೂಮಿ’ ಎಂಬ ಹಿರಿಮೆ-ಗರಿಮೆ ಹೊಂದಿದ ಏಕೈಕ ಕ್ಷೇತ್ರ ಅದು `ರಂಗಭೂಮಿ’. ಮತ್ತೆ ವೈಭವದತ್ತ ವೃತ್ತಿ ರಂಗ ಭೂಮಿ ಹೆಜ್ಜೆ ಹಾಕುತ್ತಿದೆ ಎಂದರು.

ಈ ಭೂಮಿ ವೃತ್ತಿ ರಂಗಭೂಮಿಗೆ ನೆಲೆ ಒದಗಿಸಿಕೊಟ್ಟಿದೆ. ರೋಮಾಂಚನಗೊಳಿಸುವ ರಂಗ ಗೀತೆಗಳು ಮತ್ತು ರಂಗಭೂಮಿ ಪರಂಪರೆ ಮುಂದುವರೆಯಬೇಕಾಗಿದೆ ಎಂಬ ಸದಾಶಯ ವ್ಯಕ್ತಪಡಿಸಿದರು.

ರಂಗಭೂಮಿಗೆ ತನ್ನದೇ ಆದ ಶಿಸ್ತು ಇದೆ. ರಂಗಭೂಮಿ ಎತ್ತರಕ್ಕೆ ಹೋದಷ್ಟು ರಂಗಾಸಕ್ತರು ಹತ್ತಿರವಾಗುತ್ತಾರೆ. ದಾವಣಗೆರೆ ಅನೇಕ ರಂಗ ಕಲಾವಿದರನ್ನು ಕೊಡುಗೆಯಾಗಿ ನೀಡಿದೆ. ಇದೀಗ ರಂಗಾಯಣ ಸಂಸ್ಥೆ ದಾವಣಗೆರೆಯಲ್ಲಿ ಆರಂಭವಾಗಿದ್ದು, ಸದಾ ಚಲನಶೀಲತೆಯಿಂದ  ಕೂಡಿರಲಿ. ಯುವಕರಲ್ಲಿ ರಂಗ ಕಿಚ್ಚು ಹೆಚ್ಚಿಸಲಿ ಎಂದು ಆಶಿಸಿದರು.  

ಈ ನಾಡಿನಲ್ಲಿ ಅನೇಕ ರಂಗ ಕಲಾವಿದರು ತಮ್ಮ ರಂಗ ಕಲೆ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಅಭಿನಯ ಮಾತ್ರ ಮರೆಯಾಗಿಲ್ಲ. ರಂಗ ಬಾಹುಳ್ಯ ಕಟ್ಟಿಕೊಟ್ಟ ಪ್ರಮುಖರಲ್ಲಿ ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್, ಇತ್ತೀಚಿನ ದಿನಗಳಲ್ಲಿ ಅಂತಹ ರಂಗ ಸೇವೆಯನ್ನು ಮಲ್ಲಿಕಾರ್ಜುನ ಕಡಕೋಳ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ಹಿರಿಯ ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ರಂಗಭೂಮಿಗೆ ತಾಯಿಬೇರು ವೃತ್ತಿ ರಂಗಭೂಮಿ. ಇತ್ತೀಚಿನ ದಿನಗಳಲ್ಲಿ ವೃತ್ತಿ ರಂಗಭೂಮಿ  ರಂಗಾಯಣ ಹೆಚ್ಚು ಕ್ರಿಯಾಶೀಲತೆಯಿಂದ ಕೂಡಿದೆ. ಗುಬ್ಬಿ ಕಂಪನಿಯಂತಹ ರಂಗ ವೈಭವ ಮತ್ತೆ ಮರುಕಳಿಸಬೇಕಾಗಿದೆ ಎಂದರು.

ಕೊಂಡಜ್ಜಿ ಗುಡ್ಡಕ್ಕೂ ರಂಗಭೂಮಿಗೂ ಅವಿನಾಭಾವ ಸಂಬಂಧವಿದೆ. ಖ್ಯಾತ ರಂಗಕರ್ಮಿ ಬಿ.ವಿ. ಕಾರಂತ ಅವರು ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಸಮನ್ವಯ ಆಗಬೇಕು ಎಂದು ಹೇಳಿದ್ದನ್ನು ಸ್ಮರಿಸಿದ ಬಾ.ಮ. ಅವರು, ದಾವಣಗೆರೆಗೆ ಬರಬೇಕಾಗಿದ್ದ ರಂಗಾಯಣ ರಾಜಕಾರಣದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸ್ಥಾಪಿತವಾಯಿತು ಎಂದು ಹೇಳಿದರು.

ಹಳೆಯ ರಂಗ ವೈಭವ ಮತ್ತೆ ಮರುಕಳಿಸಲು ರಂಗಾಸಕ್ತರು ರಂಗಾಯಣದ ಜೊತೆ ಕೈಜೋಡಿಸಬೇಕು. ರಂಗಭೂಮಿ ಕ್ರಿಯಾಶೀಲತೆಯ ಪ್ರತೀಕ. ಎಲ್ಲಾ ನೋವನ್ನು ಮರೆಸುತ್ತದೆ. ಕೇವಲ ಸರ್ಕಾರ ಮಾತ್ರವಲ್ಲದೇ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, ರಂಗ ಗೀತೆಗಳ ಮಾಧುರ್ಯ ಮರು ರೂಪಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 39 ಕಲಾವಿದರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 18 ಜನರನ್ನು ಆಯ್ಕೆ ಮಾಡಿ ಅವರಿಗೆ ವೃತ್ತಿ ರಂಗಭೂಮಿ ಸಂಗೀತದ ಪರಂಪರೆ, ನಾಟ್ಯ ಸಂಗೀತದ ಪರಿಚಯ, ಅಭಿನಯವನ್ನು ಕಾರ್ಯಾಗಾರದ ಮೂಲಕ ತರಬೇತಿ ನೀಡಲಾಗಿದೆ ಎಂದರು.

ದಾವಣಗೆರೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಂಗಮಂದಿರದ ಪಿಲ್ಲರ್‌ಗಳನ್ನು ತೆಗೆದು ಸ್ಮಾರ್ಟ್ ಸಿಟಿ ಯೋಜನೆಯಡಿ ಸುಸಜ್ಜಿತ ರಂಗಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ರಂಗ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಡುವಂತೆ ಹಾಜರಿದ್ದ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರಲ್ಲಿ ಮನವಿ ಮಾಡಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ರಂಗಾಯಣ ವಿಶೇಷ ಅಧಿಕಾರಿ ರವಿಚಂದ್ರ, ರಂಗಕರ್ಮಿ ಡಾ. ಪ್ರಕಾಶ್ ಗರುಡ, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ, ಶಿವಯೋಗಾಶ್ರಮದ ಓಂಕಾರಪ್ಪ, ರಂಗ ನಿರ್ದೇಶಕ ರಾಘವ ಕಮ್ಮಾರ ಮತ್ತಿತರರು ಇದ್ದರು.

ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತ ರಂಗ ನಟಿ ಸಾವಿತ್ರಿ ರಿತ್ತಿ, ಆರ್.ಜಿ. ಹಳ್ಳಿ ನಾಗರಾಜ್, ಡಾ. ಪ್ರಕಾಶ ಗರುಡ, ರಾಘವ ಕಮ್ಮಾರ್, ಕಲಾವಿದ ಆರ್.ಟಿ. ಅರುಣ್ ಕುಮಾರ್, ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಜಾಲಿಮರದ ಕರಿಬಸಪ್ಪ ಅವರನ್ನು ಗೌರವಿಸಲಾಯಿತು.

 ಕಲಿಕಾರ್ಥಿಗಳು ನಾಂದಿ ಗೀತೆ ಹಾಡಿದರು. ರವಿಚಂದ್ರ ಸ್ವಾಗತಿಸಿದರು. ಆರ್.ಟಿ. ಅರುಣ್ ಕುಮಾರ್, ಡಾ. ಶೃತಿ ರಾಜ್ ವಿಭಿನ್ನ ರೀತಿಯಲ್ಲಿ ನಿರೂಪಣೆ ಮಾಡಿದರು. ಉಮಾಶಂಕರ್, ಎಸ್.ಎಸ್. ಸಿದ್ಧರಾಜ್, ನೀಲಗುಂದ ಬಸವನಗೌಡ್ರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!