ಭದ್ರಾ ಡ್ಯಾಂ ರಕ್ಷಣೆಗಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಭದ್ರಾ ಡ್ಯಾಂ ರಕ್ಷಣೆಗಾಗಿ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ದಾವಣಗೆರೆ, ನ.6- ಭದ್ರಾ ಡ್ಯಾಂ ಬಫರ್ ಜೋನ್ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ವಿರೋಧಿಸಿ ಜಿಲ್ಲಾಧಿಕಾರಿ ಯವರಿಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಮನವಿ ಪತ್ರ ಸಲ್ಲಿಸಲಾಯಿತು.

ಮಧ್ಯ ಕರ್ನಾಟಕದ ಜನರ ಜೀವನಾಡಿಯಾಗಿ ರುವ ಭದ್ರಾ ಜಲಾಶಯ 6 ಜಿಲ್ಲೆಗಳ ಸುಮಾರು 4.5 ಲಕ್ಷ ಎಕರೆ ಕೃಷಿಗೆ ಮತ್ತು ಕುಡಿಯುವ ನೀರಿನ ನೀರಾವರಿ ಮೂಲವಾಗಿದೆ. ಈ ನೀರನ್ನು ನಂಬಿ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. 

ಆದರೆ ಭದ್ರಾ ಜಲಾಶಯದ ಬುಡದಲ್ಲಿ ಸುಮಾರು 16 ಎಕರೆ ಬಫರ್ ಜೋನ್ ಪ್ರದೇಶದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ವಸತಿ ಸಮುಚ್ಚಯಗಳ ನಿರ್ಮಾಣ ಕಾಮಗಾರಿ ಗಳನ್ನು ಸದ್ದಿಲ್ಲದೆ ಮಾಡಲಾಗುತ್ತಿದೆ. ಇದನ್ನು ತರೀಕೆರೆ ಮತ್ತು ಹೊಸದುರ್ಗ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಜೆ.ಜೆ.ಎಂ. (ಜಲ ಜೀವನ ಮಿಷನ್) ಯೋಜನೆಯಡಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಇದು ಭದ್ರಾ ಜಲಾಶಯದ ಅಭದ್ರತೆಗೆ ಕಾರಣ ವಾಗಿದೆ ಹಾಗೂ ಸಂಪೂರ್ಣ ಅವೈಜ್ಞಾನಿಕವಾಗಿದೆ.

ಭದ್ರಾ ಡ್ಯಾಂ ರಕ್ಷಣೆಗಾಗಿ ಮನವಿ ಪತ್ರದಲ್ಲಿ ಸಲ್ಲಿಸಿದ ಪ್ರಮುಖ ಬೇಡಿಕೆಗಳು:

ಭದ್ರಾ ಡ್ಯಾಂ ತಳಭಾಗದಲ್ಲಿ ಜೆಜೆಎಂ ಯೋಜನೆಯಡಿ ಕೈಗೊಳ್ಳಲಾದ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು. ಜಲಾಶಯ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ಸಲ್ಲದು. ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ಮಾಡಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು.

1962ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಲಾಗಿದೆ. ಸಹಜವಾಗಿ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗು ತ್ತಿದೆ. ಈ ಸೋರಿಕೆ ತಡೆಗಟ್ಟಬೇಕು.

ಹಳೆಯಾದಾಗಿರುವ ಡ್ಯಾಂ ಗೇಟ್‌ಗಳನ್ನು ಸರಿಪಡಿಸಿ, ಗಟ್ಟಿಗೊಳಿಸಬೇಕು.

ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಂ ನಿರ್ವಹಣೆ ಕ್ರೇನ್‌ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆ ಗಳನ್ನು ಸರಿಪಡಿಸಿ, ಭದ್ರಗೊಳಿಸಬೇಕು.

ಡ್ಯಾಂನ ಸುತ್ತಲೂ ಬೇಲಿ ನಿರ್ಮಿಸಿ, ಸುಭದ್ರತೆ ಕಾಪಾಡಬೇಕು.

ಡ್ಯಾಂನ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗ್ಯ ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆ (ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣೆ ಯೋಜನೆ) ಅಡಿಯಲ್ಲಿ ಡ್ಯಾಂನ ಸುರಕ್ಷತೆಗೆ ರೂ.100 ಕೋಟಿಗಳ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರ ರೂ.100 ಕೋಟಿ ಅನುದಾನ ಬಿಡುಗಡೆ ಮಾಡಿ, ಡ್ಯಾಂನ ಸುರಕ್ಷತೆ ಕಾಪಾಡಬೇಕು ಎಂದು ಕೋರಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿಯೋಗದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ ಎಂ ಸತೀಶ್, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎ.ವೈ.ಪ್ರಕಾಶ್, ಮಾಜಿ ಮೇಯರ್ ಹೆಚ್.ಎನ್.ಗುರುನಾಥ್, ಜಿಲ್ಲಾ ಬಿಜೆಪಿ ಮುಖಂಡರಾದ ಎ.ಬಿ.ಹನುಮಂತಪ್ಪ, ಹೆಚ್.ಎನ್.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ವಿ.ಚನ್ನಪ್ಪ, ವಕೀಲ ಕೆ.ಹೆಚ್.ಧನಂಜಯ, ಪುಲಿಯ, ಕೊಂಡಜ್ಜಿ ಹನುಮಂತಪ್ಪ, ರಾಜುಗೌಡ ಮತ್ತಿತರರಿದ್ದರು.

error: Content is protected !!