ವೀರಶೈವ ಧರ್ಮದ ಗುರಿ ಮನುಕುಲದ ಉದ್ಧಾರ

ವೀರಶೈವ ಧರ್ಮದ ಗುರಿ ಮನುಕುಲದ ಉದ್ಧಾರ

ದಾವಣಗೆರೆ, ನ. 6- ಯಾವುದೇ ಜಾತಿ, ಮತ, ಪಂಥ, ವರ್ಣ, ವರ್ಗ, ಲಿಂಗಬೇಧವಿಲ್ಲದೇ ಭೂಮಿಯಲ್ಲಿ ಜನ್ಮ ತಾಳಿದ ಸಮಸ್ತ ಮನುಕುಲದ ಉದ್ಧಾರವೇ ವೀರಶೈವ ಲಿಂಗಾಯತ ಧರ್ಮದ ಪ್ರಮುಖ ಗುರಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ನಗರದ ಡಾ. ಸದ್ಯೋಜಾತ ಶಿವಾ ಚಾರ್ಯ ಸ್ವಾಮೀಜಿಯವರ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀಶೈಲ ಜಗದ್ಗುರು ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 38 ನೇ ವಾರ್ಷಿಕ ಸ್ಮರಣೋತ್ಸವ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 13 ನೇ ಪುಣ್ಯಾರಾಧನೆಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ, ಆರ್ಶೀವಚನ ನೀಡಿದರು.

ವೀರಶೈವ ಧರ್ಮ ಸನಾತನ ಕಾಲದಿಂದಲೂ ಎಲ್ಲರ ಉದ್ಧಾರಕ್ಕಾಗಿ ಶ್ರಮಿಸುತ್ತಾ ಬಂದಿದೆ. ಹುಟ್ಟಿದ ಜಾತಿಯನ್ನು ನೋಡದೇ ಧರ್ಮ ದೀಕ್ಷೆ ನೀಡುವುದಿಲ್ಲ. ಬದಲಾಗಿ ಅಳವಡಿಸಿಕೊಂಡಿರುವ ನೀತಿಯನ್ನು ನೋಡಿ ವೀರಶೈವ ಧರ್ಮ ಪ್ರವೇಶ ನೀಡಲಾಗುತ್ತದೆ ಎಂದರು.

ಪುರುಷರಿಗೆ ಯಾವ ಯಾವ ಧರ್ಮ ಸಂಸ್ಕಾರಗಳನ್ನು ಪಡೆದುಕೊಳ್ಳುವ ಅಧಿಕಾರವಿದೆಯೋ ಆ ಎಲ್ಲಾ ಅಧಿಕಾರಗಳನ್ನು ಮಹಿಳೆಯರಿಗೂ ನೀಡಲಾಗಿದೆ. ಈ ಧರ್ಮದಲ್ಲಿ ಹುಟ್ಟಿದ ನಂತರ ಧರ್ಮ ಸಂಸ್ಕಾರವನ್ನು ಪ್ರಾರಂಭಿಸುವುದಿಲ್ಲ. ಪ್ರಸವ ಪೂರ್ವದಲ್ಲಿಯೇ ಎಂಟನೇ ತಿಂಗಳು ಗರ್ಭವತಿ ತಾಯಿಯ ಉದರದಲ್ಲಿರುವ ಮಗುವಿಗೆ ಲಿಂಗಧಾರಣೆ ಮಾಡುವ ವೈಜ್ಞಾನಿಕ ಪದ್ಧತಿ ಈ ಧರ್ಮದಲ್ಲಿ ರೂಢಿಯಲ್ಲಿದೆ ಎಂದು ಹೇಳಿದರು.

ಧರ್ಮವನ್ನು ಬಿಟ್ಟುವನು ಇತರೆ ಪ್ರಾಣಿಗಳಿಗೆ ಸಮನಾಗಿ, ಮನುಷ್ಯ ದೇಹದ ಪಶು ಎಂದು ಕರೆಯಲ್ಪಡುತ್ತಾನೆ. ಬಿದ್ದವರನ್ನು, ಬೀಳುತ್ತಿರುವವರನ್ನು ಮತ್ತು ಬೀಳಲಿರುವವರನ್ನು ಹಿಡಿದು ಮೇಲೆತ್ತುವುದೇ ನಿಜವಾದ ಧರ್ಮವಾಗಿದೆ. ಧರ್ಮವನ್ನು ಬಿಟ್ಟರೆ ಅಧೋಗತಿ ನಿಶ್ಚಿತ ಎಂದು ಹೇಳಿದರು.

ವೀರಶೈವ ಧರ್ಮದ ಗುರಿ ಮನುಕುಲದ ಉದ್ಧಾರ - Janathavani

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಬಸವನ ಬಾಗೇವಾಡಿಯ ಡಾ. ಒಡೆಯರ್ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪಂಚಪೀಠಗಳಲ್ಲಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿದ ಪೀಠವೇ ಶ್ರೀಶೈಲ ಪೀಠವಾಗಿದೆ. ಭಕ್ತಿಯ ನಗರ, ದಾನಿಗಳ ತವರೂರು ಎಂದೇ ಖ್ಯಾತಿ ಹೊಂದಿರುವ ದಾವಣಗೆರೆಯಲ್ಲಿ ಲಿಂ. ವಾಗೀಶ ಪಂಡಿತಾರಾಧ್ಯ ಶ್ರೀ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶ್ರೀಗಳ ಕರ್ತೃ ಗದ್ದುಗೆ ಇರುವುದರಿಂದ `ಅಭಿನವ ಶ್ರೀಶೈಲ’ ಎಂದು ಕರೆಯಲಾಗುತ್ತದೆ ಎಂದರು.

`ಸಮಾಜ ಮತ್ತು ಪಂಚಪೀಠಗಳ ಮಹತ್ವ’ ಕುರಿತು ಬಳ್ಳಾರಿ ಚಿಕ್ಕಾಟೆ ಮಠದ ವೀರಭದ್ರಯ್ಯ ವಿಷಯ ಮಂಡಿಸಿ ದರು.  ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಲೋಗಲ್ ಸಂಸ್ಥಾನ ಬೃಹನ್ಮಠದ ಶ್ರೀ ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಹರ್ಲಾಪುರ ಶ್ರೀಗಳು ಸಮ್ಮುಖ ವಹಿಸಿದ್ದರು.

ಹಿಪ್ಪರಗಿಯ ವಿಶ್ರಾಂತ ಪ್ರಾಧ್ಯಾಪಕ  ಸಿ.ಜಿ.ಮಠಪತಿ, ದಾವಣಗೆರೆ-ಹರಿಹರ ಅರ್ಬನ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಎಸ್.ಜಿ. ಉಳುವಯ್ಯ, ಬನ್ನಯ್ಯ ಸ್ವಾಮಿ, ಎಂ.ಎನ್. ಹರೀಶ್, ಕೆ.ಎಂ. ಪರಮೇಶ್ವರಯ್ಯ, ರಾಜಶೇಖರ ಗುಂಡಗಟ್ಟಿ, ಹನುಮಂತಪ್ಪ, ಎನ್.ಹೆಚ್. ಪಟೇಲ್ ಮತ್ತಿತರರು ಉಪಸ್ಥಿತರಿದ್ದರು.

ಸಕ್ಕರೆ ಕಾಯಿಲೆ ತಜ್ಞ ಡಾ. ವಿನಯಕುಮಾರ್ ಸ್ವಾಮಿ, ಶ್ಯಾಮಲ ಎನ್.ಎಂ. ಹಾಲಸ್ವಾಮಿ ಮತ್ತಿತರರು ಗುರು ರಕ್ಷೆ ಸ್ವೀಕರಿಸಿದರು.

ಉಪನ್ಯಾಸಕಿ ಸೌಭಾಗ್ಯ ಹಿರೇಮಠ ಪ್ರಾರ್ಥಿಸಿದರು. ಚಿತ್ರದುರ್ಗದ ಸಾಹಿತಿ ನಿರಂಜನ ದೇವರಮನೆ ನಿರೂಪಿಸಿದರು. ಡಿ.ಎಂ. ಹಾಲಸ್ವಾಮಿ ಸ್ವಾಗತಿಸಿದರು. ಪಿ.ಜಿ. ರಾಜಶೇಖರಯ್ಯ ಧ್ವಜವಂದನೆ ನಡೆಸಿಕೊಟ್ಟರು.

error: Content is protected !!