ಮನೆ ಮನೆಗೆ ಇ-ಸ್ವತ್ತು ಅಭಿಯಾನ ನಡೆಸಿ

ಮನೆ ಮನೆಗೆ ಇ-ಸ್ವತ್ತು ಅಭಿಯಾನ ನಡೆಸಿ

ಪಿ.ಡಿ.ಒ.ಗಳ ಸಭೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಸೂಚನೆ

ದಾವಣಗೆರೆ, ನ. 5 – ಗ್ರಾಮಸ್ಥರು ಎದುರಿಸುತ್ತಿರುವ ಇ-ಸ್ವತ್ತು ಸಮಸ್ಯೆ ಬಗೆಹರಿಸಲು ಜನವರಿ ಅಂತ್ಯದ ಒಳಗೆ ಮನೆ ಮನೆಗೆ ಇ- ಸ್ವತ್ತು ಅಭಿಯಾನ ನಡೆಸಬೇಕು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಾವಣಗೆರೆ ತಾಲ್ಲೂಕು ಪಿಡಿಒ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇ-ಸ್ವತ್ತಿಗೆ ಸಂಬಂಧಿಸಿದಂತೆ ಜನರಿಂದ ಸಾಕಷ್ಟು ದೂರುಗಳು ಬರುತ್ತಿವೆ. ನಾವೇ ಜನರ ಬಳಿ ಹೋಗಿ ಭೂ ದಾಖಲೆಗಳ ಡಿಜಿಟಲೀಕರಣ ಮಾಡಬೇಕು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.

ಆಗ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಗ್ರಾಮ ಪಂಚಾಯ್ತಿ ಪಿ.ಡಿ.ಒ.ಗಳೇ ಮನೆ ಮನೆಗೆ ತೆರಳಿ ಇ-ಸ್ವತ್ತು ಅಭಿಯಾನ ಮಾಡಬೇಕು. ಜನವರಿ ಅಂತ್ಯದ ಒಳಗೆ ಈ ಅಭಿಯಾನ ನಡೆಸಬೇಕು ಎಂದು ಸೂಚನೆ ನೀಡಿದರು.

ಇ – ಸ್ವತ್ತು ಪ್ರಕ್ರಿಯೆಗೆ ಅಗತ್ಯ ಶುಲ್ಕ ಪಡೆದು, ಯಾವುದೇ ವಿವಾದ ಇಲ್ಲದ ಆಸ್ತಿಗಳನ್ನು ಇ-ಸ್ವತ್ತು ಮಾಡಿಕೊಡಬೇಕು. ಇದೇ ವೇಳೆ ಪೌತಿ ಖಾತೆಯ ಆಂದೋಲನ ನಡೆಸಬೇಕು ಎಂದು ತಿಳಿಸಿದರು.

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಗ್ರಾಮಸ್ಥರ ಜೊತೆ ನೇರ ಸಂಪರ್ಕ ಹೊಂದಿರುವ ಪಿ.ಡಿ.ಒ.ಗಳು ಆರೋಗ್ಯ, ನೀರು, ನೈರ್ಮಲ್ಯ ಸೇರಿದಂತೆ ಜನರ ಮೂಲಭೂತ ಅಗತ್ಯಗಳನ್ನು ಜವಾಬ್ದಾರಿಯಿಂದ ಒದಗಿಸಬೇಕು. ಪಾರದರ್ಶಕತೆ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯ್ತಿ ಪಿ.ಡಿ.ಒ.ಗಳು ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಸ್ವಸಹಾಯ ಸಂಘಗಳನ್ನು ಕಾರ್ಯನಿರ್ವಹಣೆಯಲ್ಲಿ ತೊಡಗಿಸಿಕೊಳ್ಳಬೇಕು. ತಮಗೆ ಬರುವ ಆದಾಯವನ್ನು ಬಳಕೆ ಮಾಡುವಾಗ ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಕೈ ಜೋಡಿಸಬೇಕು. ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಸಮಿತಿಯ ಜೊತೆ ಸಹಭಾಗಿಯಾಗಿ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಮೂಲಕ ನೀರಾವರಿ ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಪಂಚಾಯ್ತಿಗಳಲ್ಲಿ ಆಗಬೇಕಾದ ಕೆಲಸಗಳನ್ನು ಪಿ.ಡಿ.ಒ.ಗಳು ಪಟ್ಟಿ ಮಾಡಿಕೊಳ್ಳಬೇಕು. ಕ್ರಮ ತೆಗೆದುಕೊಂಡ ಬಗ್ಗೆ ದಾಖಲಿಸಿಕೊಳ್ಳಬೇಕು. ಈ ಬಗ್ಗೆ ನಿಯಮಿತವಾಗಿ ಸಭೆ ಕರೆದು ಪರಿಶೀಲನೆ ನಡೆಸಲಾಗುವುದು ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ನಗರ ಪಾಲಿಕೆ ನಡೆಸಿರುವ ಸಮೀಕ್ಷೆಯ ಪ್ರಕಾರ 1,200 ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಇವರನ್ನು ಮತ್ತೆ ಶಾಲೆಗೆ ತರಲು ಶಿಕ್ಷಣ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿ ಸಿಇಒ ರಾಮಭೋವಿ, ದಾವಣಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಮತ್ತಿತರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!