ಬದುಕಿನ ಸಾರ್ಥಕತೆ, ಆತ್ಮೋನ್ನತಿಗೆ ಹರನಂತೆ ಗುರುವನ್ನೂ ಸ್ಮರಿಸಬೇಕು

ಬದುಕಿನ ಸಾರ್ಥಕತೆ, ಆತ್ಮೋನ್ನತಿಗೆ ಹರನಂತೆ ಗುರುವನ್ನೂ ಸ್ಮರಿಸಬೇಕು

ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಕರೆ

ದಾವಣಗೆರೆ, ನ. 4- ಬದುಕಿನ ಸಾರ್ಥಕತೆಗೆ ಮತ್ತು ಆತ್ಮೋನ್ನತಿಗಾಗಿ ಹರನನ್ನು ಸ್ಮರಿಸುವಂತೆ ಗುರುವನ್ನೂ ಸಹ ಸ್ಮರಿಸಬೇಕೆಂದು ಶ್ರೀಶೈಲ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಕರೆ ನೀಡಿದರು.

ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಹಿರೇಮಠದ ಸಭಾಂಗಣದಲ್ಲಿ ಇಂದು ಹಮ್ಮಿಕೊಂಡಿದ್ದ ಮೂರು ದಿನಗಳ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 38 ನೇ ಸ್ಮರಣೋತ್ಸವ ಹಾಗೂ ಲಿ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 13 ನೇ ವರ್ಷದ ಪುಣ್ಯಾರಾಧನೆ, ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ತಂದೆ-ತಾಯಂದಿರು ನಮ್ಮನ್ನು ದೇವಲೋಕದಿಂದ ಭೂಲೋಕಕ್ಕೆ ತಂದಿರುತ್ತಾರೆ. ಆದರೆ ಗುರು ಸುಜ್ಞಾನ ಮತ್ತು ಸಂಸ್ಕಾರಗಳನ್ನು ನೀಡುವ ಮುಖೇನ ಭೂಲೋಕದಿಂದ ನಮ್ಮನ್ನು ದೇವಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ಆದ್ದರಿಂದ ಜನ್ಮ ನೀಡಿದ ತಂದೆ-ತಾಯಂದಿರು ಶ್ರೇಷ್ಠರಾದರೆ, ಗುರುವು ಪರಮ ಶ್ರೇಷ್ಠನಾಗಿ ನಮಗೆ ನಿರಂತರ ಮಾರ್ಗದರ್ಶನ ನೀಡಿ, ಉದ್ಧರಿಸಿದ ಗುರುಗಳ ಉಪಕಾರದ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.

ಶಿವ ತನ್ನ ಕೈಯಲ್ಲಿ ಹಿಡಿದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಬಿಟ್ಟು ಶಾಸ್ತ್ರಗಳನ್ನು ಹಿಡಿದುಕೊಂಡು ಭುವಿಗೆ ಅವತರಿಸಿದ ದೇವರೇ ಸದ್ಗುರುವಾಗಿದ್ದಾನೆ ಎಂದು ಹೇಳಿದರು.

ಸಾಮಾನ್ಯವಾಗಿ ದುಷ್ಟರ ಸಂಹಾರ ಮತ್ತು ಶಿಷ್ಟರ ಪರಿಪಾಲನಾರ್ಥವಾಗಿ ದೇವರು ಅನೇಕ ಅವತಾರಗಳನ್ನು ತಾಳುತ್ತಾನೆ. ಆ ಕಾರಣಕ್ಕಾಗಿ ರಾಮ, ಕೃಷ್ಣ ಮೊದಲಾದ ದೇವರ ಅನೇಕ ಅವತಾರಗಳ ಕೈಯಲ್ಲಿ ವಿಭಿನ್ನ ಶಸ್ತ್ರಾಸ್ತ್ರಗಳಿರುವುದನ್ನು ಕಾಣುತ್ತೇವೆ. ಆದರೆ ಸದ್ಗುರುವು ದುಷ್ಟರನ್ನು ಸಂಹರಿಸುವುದಿಲ್ಲ. ಬದಲಾಗಿ ದುಷ್ಟರಲ್ಲಿರುವ ದುಷ್ಟ ಬುದ್ದಿಯನ್ನು ಸಂಹರಿಸುತ್ತಾನೆ. ಬುದ್ದಿಯ ಪರಿವರ್ತನೆಗೆ ಶಸ್ತ್ರಾಸ್ತ್ರಗಳಿಗಿಂತ ಶಾಸ್ತ್ರದ ಅವಶ್ಯಕತೆ ಅಧಿಕವಾಗಿರುತ್ತದೆ ಎಂದು ತಿಳಿಸಿದರು.

`ವೀರಶೈವ ಧರ್ಮವನ್ನು ಪೋಷಿಸಿದ ರಾಜ ಮನೆತನಗಳು’ ಕುರಿತು ಉಪನ್ಯಾಸ ನೀಡಿದ ಹಿಪ್ಪರಗಿಯ ಸಿ.ಜಿ.ಮಠಪತಿ ಅವರು, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಧರ್ಮವೇ ಹೊರತು ಪ್ರತ್ಯೇಕ ಅಲ್ಲ ಎಂದರು.

ಆದಿ ಜಗದ್ಗುರು ರೇಣುಕಾಚಾರ್ಯರು ಸ್ಥಾಪಿಸಿದ ವೀರಶೈವ ಧರ್ಮವನ್ನು ಹನ್ನೆರಡನೇ ಶತಮಾನದಲ್ಲಿ ಸುಧಾರಣೆಗೆ ತಂದು ಉಚ್ಚ್ರಾಯ ಸ್ಥಿತಿಗೆ ತೆಗೆದುಕೊಂಡು ಹೋದವರು ಬಸವಣ್ಣ ಎಂದು ಹೇಳಿದರು.

ವೀರಶೈವ ಧರ್ಮ ಅತ್ಯಂತ ಪ್ರಾಚೀನವಾದುದು. ಈ ಬಗ್ಗೆ ಸಿಂಧೂ ನದಿ ನಾಗರಿಕತೆಯಲ್ಲಿ ಸಾಕ್ಷ್ಯಗಳು ಲಭ್ಯವಾಗಿವೆ.  ಹನ್ನೆರಡನೇ ಶತಮಾನದಲ್ಲಿಯೇ ವೀರಶೈವ ಧರ್ಮದಲ್ಲಿನ ಲೋಪಗಳನ್ನು ಸರಿಪಡಿಸಲು ಬಸವಣ್ಣನವರು ಮುಂದಾಗಿದ್ದರಿಂದಲೇ ವೀರಶೈವ ಧರ್ಮ ಉಚ್ಚ್ರಾಯಸ್ಥಿತಿಗೆ ಹೋಗಲು ಕಾರಣವಾಯಿತು. ಆಪಘಾನಿಸ್ಥಾನ, ಕಾಶ್ಮೀರ ಸೇರಿದಂತೆ ಹಲವು ಕಡೆಗಳಿಂದ ಅನುಭವ ಮಂಟಪದ ಕಾರ್ಯಕಲಾಪಗಳನ್ನು ನೋಡಲು ಕಲ್ಯಾಣಕ್ಕೆ ವೀರಶೈವ ಸಮುದಾಯ ಹರಿದುಬಂದಿತ್ತು. ಅನ್ಯಧರ್ಮೀಯರಾಗಿದ್ದರೆ ಏಕೆ ಕಲ್ಯಾಣಕ್ಕೆ ಬರುತ್ತಿದ್ದರು ಎಂದು ಪ್ರಶ್ನಿಸಿದರು.

ಶರಣರ ವಚನಗಳಲ್ಲಿ `ವೀರಶೈವ’ ಪದ ಬಳಕೆ ಅನೇಕ ಬಾರಿ ಉಲ್ಲೇಖವಾಗಿದೆ. ಇಪ್ಪತ್ತು ಸಾವಿರ ವಚನಗಳಲ್ಲಿ `ಲಿಂಗಾಯತ’ ಎನ್ನುವ ಪದ ಕೇವಲ 14 ಬಾರಿ ಮಾತ್ರ ಬಳಕೆಯಾಗಿರುವುದು ಸಿಗುತ್ತದೆ. ಅದು ಬೇರೆ ಅರ್ಥದಲ್ಲಿಯೇ ಹೊರತು, ಪ್ರತ್ಯೇಕ ಧರ್ಮ ಎಂಬರ್ಥದಲ್ಲಿ ಅಲ್ಲ. ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಎಂಬ ಭಾವದಿಂದ ಮುನ್ನಡೆಯೋಣವೆಂದರು.

ದಕ್ಷಿಣ ಭಾರದಲ್ಲಿ ವೀರಶೈವ ಧರ್ಮ ಹೆಚ್ಚು ವ್ಯಾಪಿಸಿದೆ. ಕರ್ನಾಟಕದಲ್ಲಿ  ವೀರಶೈವರ ಸಾಂಧ್ರತೆ ಅಧಿಕ ಪ್ರಮಾಣದಲ್ಲಿದೆ. ಪ್ರಮಾಣಾತ್ಮಕ ಮತ್ತು ಗುಣಾತ್ಮಕ ಕಾರ್ಯದಿಂದ ಈ ಧರ್ಮ ಇಡೀ ದೇಶದ ಗಮನ ಸೆಳೆದಿದೆ ಎಂದರು.

ದೊಡ್ಡ ದೊಡ್ಡ ರಾಜಮನೆತನಗಳು ವೀರಶೈವ ಧರ್ಮಕ್ಕೆ ರಾಜಾಶ್ರಯ ನೀಡಲಿಲ್ಲವೆಂಬ ಅಸಮಾಧಾನ ಕೂಡ ಇದೆ. ಅಂದು ಶೈವ ಮತ್ತು ವೀರಶೈವ ಪರಂಪರೆ ಮಧ್ಯೆ ಭಿನ್ನತೆ ಕಂಡಬರಲಿಲ್ಲ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಂಗಳನ್ನು ಅಳವಡಿಸಿಕೊಂಡ ಸುಸಂಸ್ಕೃತ ಧರ್ಮವಾಗಿದೆ ಎಂದು ವಿವರಿಸಿದರು.

ಕಲ್ಯಾಣಿ ಚಾಲುಕ್ಯರು, ಬಾದಾಮಿ ಚಾಲುಕ್ಯರು, ಕಲಚೂರಿಗಳು, ಹೊಯ್ಸಳರು, ವಾರಂಗಲ್ಲಿನ ಕಾಕತೀಯರು, ವಿಜಯನಗರದ ಅರಸರು ಸೇರಿದಂತೆ ಕರ್ನಾಟಕದ ಅನೇಕ ರಾಜ ಮನೆತನಗಳು ವೀರಶೈವ ಧರ್ಮದ ಪೋಷಣೆ ಮಾಡಿವೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿದರು. ರಾಮಘಟ್ಟದ ರಾಜಗುರು ಪುರವರ್ಗ ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಮುಷ್ಟೂರು ಓಂಕಾರ ಉಚ್ಚಲಿಂಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಎಡೆಯೂರಿನ ಬಾಳೆಹೊನ್ನೂರು ಶಾಖಾಮಠದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ ನಾಂದಿ ನುಡಿಯನ್ನಾಡಿದರು.

ತಂದೆ-ತಾಯಿಗಳಿಗಿಂತ ಗುರುಗಳ ಮಾತಿಗೆ ಮನ್ನಣೆ ಜಾಸ್ತಿ. ಸಮಾಜಕ್ಕೆ ಧರ್ಮ ಗುರುಗಳ ಅವಶ್ಯಕತೆ ಇದೆ. ಪಂಚಪೀಠಗಳು ಧರ್ಮ, ಸಂಸ್ಕೃತಿಯನ್ನು ಶತ ಶತಮಾನಗಳಿಂದಲೂ ಉಳಿಸಿಕೊಂಡು ಬರುತ್ತಿವೆ ಎಂದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮೊದಲ್ಗೊಂಡು ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್, ಉದ್ಯಮಿ ಅಥಣಿ ಪ್ರಶಾಂತ್, ವರ್ತಕ ಉಳುವಯ್ಯ, ಬೆಳ್ಳೂಡಿ ಶಿವಕುಮಾರ್, ಯಲವಟ್ಟಿ ಹಾಲೇಶ್, ಸೌಭಾಗ್ಯ ಬೀಳಗಿಮಠ, ಆವರಗೊಳ್ಳ ವಾಗೀಶ್ವರಯ್ಯ, ಶಿವಕುಮಾರ್ ಡಿ.ಶೆಟ್ಟರ್, ರಾಜಶೇಖರ ಗುಂಡಗಟ್ಟಿ, ಬನ್ನಯ್ಯಸ್ವಾಮಿ, ನಂದಿಗಾವಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!