ಆರೋಪ ಬಿಡಿ, ಅಭಿವೃದ್ಧಿಗೆ ಕೈ ಜೋಡಿಸಿ

ಆರೋಪ ಬಿಡಿ, ಅಭಿವೃದ್ಧಿಗೆ ಕೈ ಜೋಡಿಸಿ

ಹರಿಹರ ಶಾಸಕ ಬಿ.ಪಿ. ಹರೀಶ್‌ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ

ಹರಿಹರ, ಅ. 4 – ಬಿಜೆಪಿ ಶಾಸಕ ಬಿ.ಪಿ. ಹರೀಶ್ ಮತ್ತು ನಗರಸಭೆ ಆಡಳಿತ ಮಾಡುತ್ತಿರುವ ಜೆಡಿಎಸ್ ಪಕ್ಷದವರು ವಿರೋಧ ಮಾಡುವುದರ ಬದಲು, ಅಭಿವೃದ್ಧಿಗೆ ಸಹಮತ ನೀಡಿದರೆ  ಮಾತ್ರ ಹರಿಹರ ನಗರವನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಬೆಂಕಿನಗರ ಬಡಾವಣೆಯಲ್ಲಿ ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ  ಚರಂಡಿ ಕಾಮಗಾರಿಯನ್ನು ವೀಕ್ಷಿಸಿ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. 

ಶಾಸಕ ಹರೀಶ್ ಅವರು ಸಣ್ಣಪುಟ್ಟ ಕೆಲಸಕ್ಕೂ ಅಡ್ಡಿ ಪಡಿಸುತ್ತಾ ಹೋದರೆ ಅಭಿ ವೃದ್ಧಿಗೆ ಹಿನ್ನಡೆಯಾಗುತ್ತದೆ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು. ಅವರು ತಮ್ಮ ಪಕ್ಷ ಆಡಳಿತಕ್ಕೆ ಬಂದಾಗ ಬೇಕಾದಂತೆ ಅಧಿಕಾರ ಮಾಡಿಕೊಳ್ಳಲಿ. ಆದರೆ ನಮ್ಮ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದರಿಂದ, ವಿರೋಧ ಮಾಡುವುದನ್ನು ಕೈ ಬಿಟ್ಟು, ಅಭಿವೃದ್ಧಿ ಕಡೆಗೆ ಗಮನ ಹರಿಸಲಿ ಎಂದರು.

ನಗರದ ಜನತೆಯ ಬಹುದಿನದ ಬೇಡಿಕೆಯಾದ ದೂಡಾ ಶಾಖಾ ಕಚೇರಿ ಆರಂಭಿಸಲು ಈಗಾಗಲೇ ದೂಡಾ ಅಧ್ಯಕ್ಷರಿಗೆ ಸೂಚಿಸಿದ್ದು, ಒಂದು ವಾರದಲ್ಲಿ ಶಾಖಾ ಕಚೇರಿ ಆರಂಭಗೊಳ್ಳಲಿದೆ ಎಂದರು.

ಇಲ್ಲಿನ ಚರಂಡಿ ಕಾಮಗಾರಿಗೆ ಕಳೆದ ಒಂದೂವರೆ ವರ್ಷದ ಹಿಂದೆ ಬಿಡುಗಡೆ ಆಗಿರುವ ಹಣ ಇದುವರೆಗೂ ಬಳಕೆಯಾಗಿಲ್ಲ. ಇದಕ್ಕೆ ನಗರಸಭೆಯ ಅಧಿಕಾರಿ ವರ್ಗ ಕಾರಣ ಎಂದರು. ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದರು.

ಹೈಸ್ಕೂಲ್ ಬಡಾವಣೆಯ ಅಂಬೇಡ್ಕರ್ ಪಾರ್ಕ್ ಅಭಿವೃದ್ಧಿ ಮತ್ತು ಮಕ್ಕಳಿಗೆ ಆಟಿಕೆ ವಸ್ತುಗಳು, ಕೆ.ಹೆಚ್. ಬಿ‌ ಕಾಲೋನಿ ಪಾರ್ಕ್ ಅಭಿವೃದ್ಧಿ, ಬೆಂಕಿನಗರ ಕನ್ನಡ ಶಾಲಾ ಕೊಠಡಿ ನಿರ್ಮಾಣ, ಬೆಂಕಿನಗರ ಕಾಲುವೆ ತಡೆಗೋಡೆ ನಿರ್ಮಾಣ, ನೀರು ಶೇಖರಣಾ ಘಟಕ ಸ್ಥಾಪನೆ, ಮಳೆಯಿಂದಾಗಿ ನಗರದ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಹಳಷ್ಟು ಇದ್ದು ಅವುಗಳನ್ನು ದುರಸ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ನಗರಸಭೆ ಸದಸ್ಯರಾದ ಬಾಬುಲಾಲ್, ಶಾಹಿನಾ ದಾದಾಪೀರ್, ಅಬ್ದುಲ್ ಅಲಿಂ, ಮುಖಂಡರಾದ ಸಂತೋಷ ನೋಟದರ್, ಸಂತೋಷ ದೊಡ್ಡಮನೆ, ನಜೀರ್ ಹುಸೇನ್, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ,ಗುತ್ತಿಗೆದಾರ ರಾದ ಮಂಜುನಾಥ್ ಕಾಳೇರ್, ಬಾಷಾ , ಹರೀಶ್ ಬಸಾಪುರ, ಮಂಜುನಾಥ್ ಹಾಗೂ ಇತರರು ಹಾಜರಿದ್ದರು.

error: Content is protected !!