ಬೇಕು ಎಂಬುದು ನೋವುಂಟು ಮಾಡಿದರೆ, ಸಾಕು ಎಂಬುದು ನಲಿವುಂಟು ಮಾಡುತ್ತದೆ

ಬೇಕು ಎಂಬುದು ನೋವುಂಟು ಮಾಡಿದರೆ, ಸಾಕು ಎಂಬುದು ನಲಿವುಂಟು ಮಾಡುತ್ತದೆ

ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಮತ

ದಾವಣಗೆರೆ, ನ. 5- ಲಿಂ. ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಭವರೋಗ ವೈದ್ಯರಾಗಿ ಸಮಾಜಕ್ಕೆ ನೀಡಿದ ಕೊಡುಗೆ ಅನನ್ಯ. ಅವರೊಬ್ಬ ಸಮನ್ವಯ ಮೂರ್ತಿಗಳಾಗಿದ್ದರು. ಅಧಾತ್ಮ, ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿ ಮಾಡಿದವರಾಗಿದ್ದಾರೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ವಾಗೀಶ ಶ್ರೀಗಳ ಸೇವೆಯನ್ನು ಸ್ಮರಿಸಿದರು.

ನಗರದ ಡಾ. ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರ ಹಿರೇಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 38 ನೇ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ 13 ನೇ ಪುಣ್ಯಾರಾಧನೆ, ಜನಜಾಗೃತಿ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಶ್ರೀಶೈಲ ಕ್ಷೇತ್ರವನ್ನು ಜಗತ್‌ ಪ್ರಸಿದ್ಧಿ ಮಾಡಿದ ಕೀರ್ತಿ ವಾಗೀಶ ಶ್ರೀಗಳಿಗೆ ಸಲ್ಲುತ್ತದೆ. ಏಳು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಶಕ್ತಿ ಅವರಲ್ಲಿತ್ತು. ವೀರಶೈವ ಪರಂಪರೆ ಕುರಿತು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಆದರೆ ಪಟ್ಟಭದ್ರ ಹಿತಾಸಕ್ತಿಗಳ ಕುಯುಕ್ತಿಯಿಂದಾಗಿ ಕೆಲವು ಪುಟಗಳು ಮಾಯವಾಗಿದ್ದು, ಇತಿಹಾಸ ಮರೆಯಾದ ಸತ್ಯ ಎಂದು ವಿಷಾದಿಸಿದರು.

ಆರು ಆಯುರ್ವೇದ ಗ್ರಂಥಗಳನ್ನು ಬರೆದಿದ್ದು, ಅದರಲ್ಲಿ ಈಗಾಗಲೇ ಎರಡು ಗ್ರಂಥಗಳು ಬಿಡುಗಡೆಯಾಗಿದ್ದು, ಉಳಿದ ನಾಲ್ಕು ಗ್ರಂಥಗಳನ್ನು ಪರಿಷ್ಕರಣೆ ಮಾಡಿ ಪ್ರಕಟ ಮಾಡುವಂತೆ ಪ್ರಸ್ತುತು ಜಗದ್ಗುರುಗಳಲ್ಲಿ ಭಿನ್ನವಿಸಿಕೊಂಡರು.

ಅಥಣಿಯ ಮುರುಗೇಂದ್ರ ಶಿವಯೋಗಿಗಳ ಬಗ್ಗೆ ಸುಪ್ರಭಾತ ಬರೆಯುವ ಮೂಲಕ ಗುರು-ವಿರಕ್ತ ಪರಂಪರೆ ಎಷ್ಟು ಗಟ್ಟಿಯಾಗಿತ್ತೆಂದು ತೋರಿಸಿಕೊಟ್ಟವರು. ಸ್ವಸ್ಥ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ಶ್ರೀಗಳ ಸೇವಾ ಕಾರ್ಯಗಳನ್ನು ಕೊಂಡಾಡಿದರು.

ಉಮಾಪತಿ ಪಂಡಿತಾರಾಧ್ಯ ಶ್ರೀಗಳು  ಶ್ರೀಶೈಲ ಪೀಠಕ್ಕೆ ನೇರವಾಗಿ ಜಗದ್ಗುರುಗಳಾದವರು. ನೇರ ನುಡಿಯ, ವಿಶೇಷ ವ್ಯಕ್ತಿತ್ವವುಳ್ಳವರಾಗಿದ್ದರು. ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ್ದರು  ಎಂದು ಹೇಳಿದರು.

ಪ್ರಸ್ತುತ ಡಾ. ಚನ್ನಸಿದ್ಧರಾಮ ಶ್ರೀಗಳು ಸಹ ಶ್ರೀಶೈಲ ಪೀಠವನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಾ ಬಂದಿದ್ದಾರೆ. ಶಿರಾಳಕೊಪ್ಪ ಮತ್ತು ಸಿರಗುಪ್ಪ ಪಟ್ಟಣಗಳಲ್ಲಿನ ನಿರುಪಯುಕ್ತ ಜಾಗದಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಾಣ ಮಾಡುವ ಮೂಲಕ ಉತ್ತಮ ಸೇವಾ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ. ಅವರು `ಅಭಿನವ ಪಂಡಿತಾರಾಧ್ಯರು’ ಎಂದು ಬಣ್ಣಿಸಿದರು.

ಯಾವುದೇ ಬಿಟ್ಟಿ ಭಾಗ್ಯಗಳಿಗೆ ಮನಸೋಲದೇ, ಸತ್ಯ ಶುದ್ಧ ಕಾಯಕ ಮಾಡಿ ದುಡಿಮೆಯ ಹಣದಿಂದ ಬದುಕು ಸಾಗಿಸುವವರೇ ನಿಜವಾದ ಶಕ್ತಿ ಸ್ವರೂಪಿಣಿಯರು. ಬೇಕು ಎಂಬುದು ನೋವುಂಟು ಮಾಡಿದರೆ, ಸಾಕು ಎಂಬುದು ನಲಿವುಂಟು ಮಾಡುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

`ಆರೋಗ್ಯ ಮತ್ತು ಅಧ್ಯಾತ್ಮ’ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರು, ಶರೀರದ ಆರೋಗ್ಯ ಉತ್ತಮವಾಗಿರಬೇಕಾದರೆ ಅಧ್ಯಾತ್ಮ ಅತಿ ಮುಖ್ಯ. ಅಧ್ಯಾತ್ಮ ಮತ್ತು ಆರೋಗ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಆಧ್ಯಾತ್ಮದ ದೀಕ್ಷೆ ನೀಡಬೇಕು. ಪಂಚೇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು  ಮತ್ತು ಸದಾ ಸುಖಿ, ಸದಾ ಹಸನ್ಮುಖಿಯಾಗಿರಲು ಅಧ್ಯಾತ್ಮ ತೀರಾ ಅವಶ್ಯ ಎಂದು ಒತ್ತಿ ಹೇಳಿದರು.

ಕ್ರೋಧ ಹೆಚ್ಚಾದವರಿಗೆ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಂಬಾಕು, ಆಲ್ಕೋಹಾಲ್, ಡ್ರಗ್ಸ್ ಮೋಹದಿಂದ ಬದುಕು ನರಕ ಸದೃಶ್ಯವಾಗುತ್ತಿದೆ. ಗುಟಕಾ ಯುವ ಸಮೂಹವನ್ನೇ ನಾಶ ಮಾಡುತ್ತಿದೆ. ಆಧ್ಯಾತ್ಮದ ಒಲವು ಇಲ್ಲದವರು ವ್ಯಸನಿಗಳಾಗುತ್ತಿದ್ದಾರೆಂದು ಹಿತ ನುಡಿದರು.

ಲೋಭದ ಅತಿರೇಕ ಕಡಿಮೆ ಮಾಡಲು ಅಧ್ಯಾತ್ಮ ಅಗತ್ಯ. ಕೋವಿಡ್ ನಂತರ ಶೇ. 30 ರಷ್ಟು ಜನರಿಗೆ ಬೊಜ್ಜು ಹೆಚ್ಚಾಗಿದೆ. ಸಾಂಕ್ರಾಮಿಕಕ್ಕಿಂತ ಅಸಾಂಕ್ರಾಮಿಕ ರೋಗ ಹೆಚ್ಚಾಗಿವೆ. ಪ್ರತಿಯೊಬ್ಬರೂ ಆರೋಗ್ಯವಂತರಾಗುವ ಮೂಲಕ ಸತ್ಯ ಶುದ್ಧ ಕಾಯಕದಲ್ಲಿ ತೊಡಗುವಂತೆ ಕರೆ ನೀಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೂ ಒತ್ತಡ ಹೆಚ್ಚಾಗಿದೆ. ಮೂರರಿಂದ ಆರು ಗಂಟೆ ಒಂದೇ ಕಡೆ ಕುಳಿತರೆ ಹೃದಯಾಘಾತ ಸಾಧ್ಯತೆ ಹೆಚ್ಚು. ನಿದ್ದೆ ಕಡಿಮೆಯಾಗುವುದು ಸಹ ಹೃದಯ ಸ್ತಂಭನಕ್ಕೆ ಕಾರಣ. ಕಡಿಮೆ ತಿನ್ನಬೇಕು, ಹೆಚ್ಚು ಚಟುವಟಿಕೆ ಯಿಂದ ಇದ್ದರೆ ಜೀವನ ಸುಖಮಯವಾಗಿರುತ್ತದೆ ಎಂದರು.

ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಲಿಂಗೈಕ್ಯ ಉಭಯ ಜಗದ್ಗುರುಗಳ ಸೇವೆಯನ್ನು ಸ್ಮರಿಸಿದರು.

ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಮಳೆಮಠದ ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಅಂಬಿಕಾನಗರದ ಶ್ರೀ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಣಕೂರು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ, ತಾವರಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ, ಮುಸ್ಟೂರು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಲೆಕ್ಕಪರಿಶೋಧಕರಾದ ಡಾ. ಅಥಣಿ ಎಸ್. ವೀರಣ್ಣ ಮಾತನಾಡಿದರು. ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಇದೇ ವೇಳೆ ಹಿರಿಯ ಪತ್ರಕರ್ತರೂ, ಸಾಹಿತಿಗಳಾದ ಬಾ.ಮ. ಬಸವರಾಜಯ್ಯ ಅವರನ್ನು ಗೌರವಿಸಲಾಯಿತು.

ದೂಡಾ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಕೆ.ಬಿ.ಹನುಮಂತಪ್ಪ, ಎ.ಹೆಚ್. ಕುಬೇರಪ್ಪ, ಡಾ.ಬಿ.ಪಿ. ರಾಜೇಶ್,  ಉಳುವಯ್ಯ,  ಬನ್ನಯ್ಯಸ್ವಾಮಿ, ವಾಗೀಶ ಸ್ವಾಮಿ, ಟಿ.ಎಂ. ಪಂಚಾಕ್ಷರಯ್ಯ ನಾಗರಾಜ್, ಜ್ಯೋತಿ ಪ್ರಕಾಶ್, ಪರಮೇಶ್ವರಯ್ಯ ಮುಂತಾದವರಿದ್ದರು.

ಟಿ.ಹೆಚ್.ಎಂ. ಶಿವಕುಮಾರಸ್ವಾಮಿ, ಮಂಜುಳಾ ಬಸವಲಿಂಗಪ್ಪ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಭಾರ್ಗವಿ ಮತ್ತು ಸೌಂದರ್ಯ ಭರತನಾಟ್ಯ ಪ್ರದರ್ಶಿಸಿದರು. ರಾಧೇಶ್ ಜಂಬಗಿ ಸ್ವಾಗತಿಸಿದರು. ಶಿವ ಯೋಗಿ ಹಿರೇಮಠ, ಸೌಭಾಗ್ಯ  ನಿರೂಪಿಸಿದರು. ಶಿವಕುಮಾರ್ ಶೆಟ್ಟರ್ ಧ್ವಜವಂದನೆ ಕಾರ್ಯಕ್ರಮ ನಡೆಸಿಕೊಟ್ಟರು.

error: Content is protected !!