ಮುರುಘಾಮಠದನ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವ ಪ್ರಭು ಸ್ವಾಮೀಜಿ
ಚಿತ್ರದುರ್ಗ, ನ. 5 – ಬದುಕಲು ಉಸಿರು ಎಷ್ಟು ಮುಖ್ಯವೋ ಹಾಗೆಯೇ ನಮ್ಮ ಬದುಕಿಗೆ ಕನ್ನಡ ಉಸಿರಾಗಬೇಕು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಿಸಿದರು.
ಶ್ರೀ ಮುರುಘರಾಜೇಂದ್ರ ಮಠದಲ್ಲಿ ನಡೆದ 34ನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ನೇತೃತ್ವ ವಹಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿ ಶ್ರೀಗಳು ಮಾತನಾಡಿದರು.
ರಾಜಧಾನಿ ಬೆಂಗಳೂರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದಿದೆ. ಆದರೆ ಕನ್ನಡಿಗರಿಗೆ ಅಲ್ಲಿ ಉದ್ಯೋಗ ಸಿಗುತ್ತಿಲ್ಲ. ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಒತ್ತಾಯಿಸುವ ಸ್ಥಿತಿ ಬಂದಿದೆ. ಕರ್ನಾ ಟಕದ ಎರಡನೇ ರಾಜಧಾನಿಯಾಗಿ ಚಿತ್ರದುರ್ಗ ಅಥವಾ ದಾವಣಗೆರೆಯನ್ನು ಘೋಷಣೆ ಮಾಡಿದರೆ ಕನ್ನಡ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ನಾಣ್ಯದ ಎರಡು ಮುಖಗಳಂತೆ ನೂತನ ದಂಪತಿ ಗಳು ಒಂದಾಗಿರಬೇಕು. ಮನಸ್ಸುಗಳು ಒಂದಾಗಬೇಕು. ಅಹಂಕಾರದಿಂದ ಎಷ್ಟೋ ದಾಂಪತ್ಯ ವಿಚ್ಛೇದನ ವಾಗುತ್ತಿವೆ. ಪ್ರತಿಷ್ಠೆಗಳನ್ನು ಬದಿಗಿಡಬೇಕು. ಪರಸ್ಪರ ಪ್ರೀತಿ, ವಾತ್ಸಲ್ಯದಿಂದ ಜೀವನ ಸಾಗಿಸಬೇಕೆಂದರು.
ಮುಖ್ಯಅತಿಥಿ ಡಾ.ಅಶ್ವಿನಿಕುಮಾರ್ ಪಸಾರದ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಚಿಕ್ಕ ಸಮಸ್ಯೆ ಇದ್ದರೂ ಉದಾಸೀನ ಮಾಡಬಾರದು. ಹಾಗೆಯೇ ಮುಂದೆ ಅದು ದೊಡ್ಡ ಸಮಸ್ಯೆಯಾಗಿಯೇ ಉಳಿಯಬಹುದು ಎಂದರು.
ಡಾ. ಮಲ್ಲಪ್ಪ ಮಾತನಾಡಿ, ಜ್ಞಾನ ಮತ್ತು ಭಾಷೆಗೂ ವ್ಯತ್ಯಾಸ ಇದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ಕನ್ನಡ ಭಾಷೆ ಅನ್ನದ ಭಾಷೆಯಾಗಬೇಕು. ಹೃದಯದ ಭಾಷೆಯಾಗಬೇಕು. ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಭಾಷೆ ನಮ್ಮದು. ನಮಗೆ ಭಾಷೆಗಳ ಕೀಳರಿಮೆಗಳು ತೊಲಗಬೇಕು. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಅನೇಕ ಕವಿಗಳು ಕನ್ನಡ ನಾಡು ನುಡಿ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಬರೆದಿದ್ದಾರೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಸಿ. ಪಾಣಿ, ಪ್ರಪಂಚದಲ್ಲಿ ಅನೇಕ ಭಾಷೆಗಳಿವೆ. ನಮ್ಮಲ್ಲಿ ಸಂಸ್ಕೃತ ಭಾಷೆ ಪ್ರಾಚೀನವಾದುದು. ನಂತರ ಹಿಂದಿ, ಬಂಗಾಳಿ, ಕನ್ನಡ, ತಮಿಳು ಮೊದಲಾದ ವುಗಳು. ಕನ್ನಡಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ ಎಂದರು.
ಕಾರ್ಯಕ್ರಮದಲ್ಲಿ 5 ಜೋಡಿಗಳ ವಿವಾಹ ನೆರವೇರಿತು. 2024ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸ ಲಾಯಿತು. ಶ್ರೀ ಬಸವನಾಗಿ ದೇವ ಸ್ವಾಮಿಗಳು ಇದ್ದರು.
ಗಂಜಿಗಟ್ಟಿ ಕೃಷ್ಣಮೂರ್ತಿ ಜಾನಪದ ಗೀತೆ ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಜ್ಞಾನಮೂರ್ತಿ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.