ಜಗಳೂರಿನ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವ ವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅಭಿಮತ
ಜಗಳೂರು, ಅ.31- ಶಿಕ್ಷಣ ದಿಂದ ಮಾತ್ರ ಸಮಾಜದ ಆಮೂಲಾಗ್ರ ಬದಲಾವಣೆ ಮತ್ತು ಪ್ರಗತಿ ಸಾಧ್ಯ ಎಂದು ಕುವೆಂಪು ವಿಶ್ವ ವಿದ್ಯಾನಿಲಯದ ಡಾ.ಬಿಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತಮಲೇಹಳ್ಳಿ ಗ್ರಾಮದ ಗಿರಿಜಾ ಸಭಾ ಭವನದಲ್ಲಿ ಶ್ರೀ ದಂಡಿನ ರಾಜಪ್ಪನವರ 4ನೇ ವರ್ಷದ ಪುಣ್ಯ ಸ್ಮರಣೆಯ ಪ್ರಯುಕ್ತ ರಾಜು ಬಿ ಲಕ್ಕಂಪುರ ರಚಿಸಿದ ಮಾರ್ದನಿ ಕೃತಿ ಬಿಡುಗಡೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶ ಬಹು ಸಂಸ್ಕೃತಿಯ ಬಹುತ್ವಸಾರುತ್ತದೆ. ಜ್ಞಾನ ಸರ್ವರ ಸ್ವತ್ತಾಗಬೇಕು ಎಂಬ ಆಶಯದ ದಿ.ದಂಡಿನ ರಾಜಪ್ಪ ಟ್ರಸ್ಟ್ನ ಎ.ಎಸ್.ಪಿ ಶಿವಕುಮಾರ್ ಅವರು ಶಿಕ್ಷಣ, ಕಲೆ, ಸಂಸ್ಕೃತಿಗೆ ಆದ್ಯತೆ ನೀಡಿ ಗ್ರಾಮೀಣ ಸಾಹಿತ್ಯಾಸಕ್ತಿಯ ಪ್ರತಿಭೆಗಳನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಎಂದರು.
ಆದಿಕವಿ ಪಂಪ ಅವರ ಆಶಯದಂತೆ ಮಾನವ ಕುಲ ಒಂದೇ ಎಂಬುವುದನ್ನು ಅರ್ಥೈಸಿಕೊಂಡು ಜಾತ್ಯತೀತವಾಗಿ ಸಾಮರಸ್ಯದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಸಮಾಜದಲ್ಲಿ ಅನ್ಯಾಯ ಕಂಡತಕ್ಷಣವೇ ಶೋಷಿತರ ಧ್ವನಿಯಾಗಬೇಕು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ರಾಯಚೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ.ದಂಡಿನ ಶಿವಕುಮಾರ್ ಮಾತನಾಡಿ, ದಂಡಿನ ರಾಜಪ್ಪ ಟ್ರಸ್ಟ್ ಗ್ರಾಮದಲ್ಲಿ ಬಡವಿದ್ಯಾರ್ಥಿಗಳಿಗೆ ಕೋಚಿಂಗ್, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ. ಗ್ರಾಮದ ಅಭಿವೃದ್ದಿ, ಶೈಕ್ಷಣಿಕ ಪ್ರಗತಿ ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಸೂಲಗಿತ್ತಿ ತೊಳಸಮ್ಮ, ತಮಟೆ ಕಲಾವಿದ ಎ.ಕೆ. ನಾಗಪ್ಪ, ಇಂಜಿನಿಯರ್ ವಿದ್ಯಾರ್ಥಿನಿ ಅನುಷಾರನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಾಹಿತಿ ಯುಗ ಧರ್ಮ ರಾಮಣ್ಣ, ಪ್ರೊ.ಜೆ.ಎಂ.ತಿಪ್ಪೇಸ್ವಾಮಿ, ದಾವಣಗೆರೆ ಜಿಲ್ಲಾ ವಾಣಿಜ್ಯ ತೆರಿಗೆ ಜಿಲ್ಲಾ ಅಧಿಕಾರಿ ಮಂಜುನಾಥ್, ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಗೆಜೆಟೆಡ್ ಮ್ಯಾನೇಜರ್ ಬಿ.ಪಿ.ಜನಾರ್ದನ ರಾಜ ಅರಸ್ ಮಾತನಾಡಿದರು.
ಸಮಾರಂಭದಲ್ಲಿ ದಂಡಿನ ರಾಜಪ್ಪ ಪರಿವಾರ ಪ್ರತಿಷ್ಠಾನ ಟ್ರಸ್ಟ್ ಅಧ್ಯಕ್ಷೆ ಗಿರಿಜಮ್ಮ, ಪಿಡಿಓ ಡಿ.ಪಿ. ಹನುಮಂತಪ್ಪ, ಹೊಸಪೇಟೆ ಸಿಪಿಐ ಗುರುರಾಜ ಆರ್. ಕಟ್ಟಿಮನಿ, ಎಂ.ಶ್ರೀನಿವಾಸ್ ರಾವ್, ಸಿರಾ ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ವಿನಯ್ ಸಿ, ಡಾ.ರೇವಣ್ಣಸ್ವಾಮಿ ಎಂ, ಮಾರ್ದನಿ ಪುಸ್ತಕದ ಲೇಖಕ ರಾಜು ಬಿ.ಲಕ್ಕಂಪುರ, ಪ್ರಹ್ಲಾದ, ಸಂಧ್ಯಾ, ಲತಾ, ಗಾಯತ್ರಿ ಇದ್ದರು.