ಮಾಗನೂರು ಬಸಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಹಾಸನ – ಕೊಡಗು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ
ದಾವಣಗೆರೆ, ಅ. 30- ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದುದು. ಅದನ್ನು ಸಾರ್ಥಕಪಡಿಸಿಕೊಳ್ಳದಿದ್ದರೆ ಬದುಕು ವ್ಯರ್ಥವಾಗುತ್ತದೆ. ಕಾಯಕ ಮತ್ತು ದಾಸೋಹ ತತ್ವವನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಂಡ ಮಹಾನ್ ಶರಣರ ಸಾಲಿಗೆ ಲಿಂ. ಮಾಗನೂರು ಬಸಪ್ಪ ಕೂಡ ಸೇರುತ್ತಾರೆಂದು ಹಾಸನ-ಕೊಡಗು ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಶಿವಕುಮಾರಸ್ವಾಮಿ ಮಹಾಮಂಟಪದ ಆವರಣದಲ್ಲಿ ಆರೂಢ ದಾಸೋಹಿ, ಮಹಾಶರಣ ಲಿಂ. ಮಾಗನೂರು ಬಸಪ್ಪನವರ 29 ನೇ ಹಾಗೂ ಶರಣೆ ಲಿಂ. ಸರ್ವಮಂಗಳಮ್ಮ ಮಾಗನೂರು ಬಸಪ್ಪ ಅವರ 16 ನೇ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಪೂಜೆಗಿಂತ ಕಾಯಕ ದೊಡ್ಡದು ಎಂಬುದನ್ನು ಮಾಗನೂರು ಬಸಪ್ಪ ಅವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಮನುಷ್ಯನಾಗಿ ಹುಟ್ಟಿದ ಮೇಲೆ ಪುಣ್ಯದ ಕೆಲಸ ಮಾಡಲು ಸಾಧ್ಯವಾಗದಿದ್ದರೆ ಇನ್ನೊಬ್ಬರಿಗೆ ಕೆಡುಕು ಉಂಟು ಮಾಡುವ, ತೊಂದರೆ ಕೊಡುವ ಕೆಲಸ ಮಾಡಬಾರದು ಎಂಬುದೇ ಎಲ್ಲಾ ಧರ್ಮಗಳ ಮೂಲ ಉದ್ದೇಶ ಎಂದರು.
ಭಗವಂತ ಕೊಟ್ಟ ಅವಕಾಶಗಳನ್ನು ಸುಂದರವಾಗಿ ಸಾರ್ಥಕಪಡಿಸಿಕೊಳ್ಳದಿದ್ದರೆ ಬದುಕು ವ್ಯರ್ಥವಾಗುತ್ತದೆ. ಮಾಗನೂರು ಬಸಪ್ಪ ಅವರ ಕೆಲಸಗಳು ಸ್ಮರಣೀಯವಾದವು. ಇಂತಹ ವ್ಯಕ್ತಿಗಳು ಪ್ರಾತಃಸ್ಮರಣೀಯರು ಎಂದು ಕರೆಯಲ್ಪಡುತ್ತಾರೆ. ಜನ ಮಾನಸದಲ್ಲಿ ಉಳಿಯುವಂತಹ ಕಾರ್ಯಗಳನ್ನು ಮಾಗನೂರು ಬಸಪ್ಪ ಮಾಡಿದ್ದಾರೆಂದು ಹೇಳಿದರು.
ಹುಟ್ಟು – ಸಾವಿನ ನಡುವಿನ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕಾಗಿದೆ. ಧರ್ಮದ ಬುತ್ತಿಯನ್ನು ಪರಲೋಕಕ್ಕೆ ಹೋಗುವಾಗ ಕಟ್ಟಿಕೊಂಡು ಹೋಗಬೇಕಾಗಿದೆ. ಪರರಿಗೆ ಉಪಕಾರ ಮಾಡುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರ ಕೊಡುವ ಅಗತ್ಯತೆ ಇದೆ ಎಂದು ಹಿತ ನುಡಿದರು.
ತಾಯಿ-ಮಗಳ ಸಂಬಂಧ: ಆದಿಚುಂಚನ ಗಿರಿ ಮಹಾಸಂಸ್ಥಾನ ಮಠದ ಲಿಂ. ಬಾಲಗಂಗಾಧರ ಶ್ರೀಗಳ ಹಾಗೂ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರ ಸಂಬಂಧ ತಾಯಿ-ಮಗಳ ಸಂಬಂಧ ಎಂದು ಧಾರ್ಮಿಕ ಸಮ್ಮೇಳನದ ಸಂದರ್ಭದಲ್ಲಿ ಮಾತನಾಡಿದ ತುಣಕನ್ನು ಶಂಭುನಾಥ ಶ್ರೀ ನೆನಪಿಸಿಕೊಂಡರು.
ಆದಿಚುಂಚನಗಿರಿ ಮಠಕ್ಕೂ ತರಳಬಾಳು ಬೃಹನ್ಮಠಕ್ಕೂ ಅವಿನಾಭಾವ ಸಂಬಂಧ ಇದೆ. ಅದರಂತೆ ಮಾಗನೂರು ಬಸಪ್ಪ ಅವರು ತರಳಬಾಳು ಹಿರಿಯ ಜಗದ್ಗುರುಗಳೊಡನೆ ಇರುವ ನಿಕಟ ಸಂಪರ್ಕವನ್ನೂ ಸಹ ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಧು ಸದ್ಧರ್ಮ ವೀರಶೈವ ಸಮಾಜದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಅತ್ಯಂತ ಕಡು ಬಡತನದಲ್ಲಿ ಜನಿಸಿದರೂ ಸಹ ಬದುಕಿನ ಸಾರ್ಥಕತೆಯನ್ನು ಹೇಗೆ ಮಾಡಿಕೊಂಡರು ಎನ್ನುವುದಕ್ಕೆ ಲಿಂ. ಮಾಗನೂರು ಬಸಪ್ಪ ಜೀವಂತ ಉದಾಹರಣೆ ಎಂದು ಹೇಳಿದರು.
ಇಂದಿನ ಯುವ ಪೀಳಿಗೆ ಎತ್ತ ಸಾಗುತ್ತಿದೆ ಎಂದು ಯೋಚಿಸಬೇಕಾದ ಅನಿವಾರ್ಯತೆ ಇದೆ. ದೊಡ್ಡ ದೊಡ್ಡ ಮನುಷ್ಯರ ಅನುಕರಣೆ ಮಾಡುತ್ತಿರುವುದು ಭವಿಷ್ಯದ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆಯೋ ಎಂಬುದು ತಿಳಿಯದು. ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡದಿದ್ದರೆ ಎಲ್ಲವೂ ಕೊಚ್ಚಿ ಹೋಗಲಿದೆ ಎಂದರು.
ದಾವಣಗೆರೆಯ ಸಮಗ್ರ ಅಭಿವೃದ್ಧಿಯಲ್ಲಿ ಮಾಗನೂರು ಬಸಪ್ಪ ಅವರ ಪಾತ್ರ ಮಹತ್ತರವಾದುದು. ಅವರ ಕಾಯಕ ನಿಷ್ಠೆ, ದಾಸೋಹ ಮನೋಭಾವನೆ ಮತ್ತು ನಿಸ್ವಾರ್ಥ ಸೇವೆ ಅವರನ್ನು ಪ್ರಾತಃಸ್ಮರಣೀಯರನ್ನಾಗಿಸಲು ಕಾರಣವಾಗಿದೆ ಎಂದು ಹೇಳಿದರು.
ನುಡಿ ನಮನ ಸಲ್ಲಿಸಿದ ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್. ಮಂಜುನಾಥ್ ಕುರ್ಕಿ ಅವರು, ಮಾಗನೂರು ಬಸಪ್ಪ ಅವರು ಹುಟ್ಟಿನಿಂದ ದೊಡ್ಡವರಾದವರಲ್ಲ. ಬದಲಾಗಿ ವ್ಯಕ್ತಿತ್ವದಿಂದ ದೊಡ್ಡವರಾದವರು. ಜೀವನದಲ್ಲಿನ ನಡೆ-ನುಡಿ ಸಮನಾಗಿದ್ದುದರಿಂದ ಮಹಾ ಶರಣರಾಗಿ ಹೊರ ಹೊಮ್ಮಲು ಸಾಧ್ಯವಾಯಿತು ಎಂದರು.
ಕಾಲ, ಕಾಸು, ಕಾಯಕದ ಮಹತ್ವ ಅರಿತಿದ್ದರಿಂದ ಜೀವನದ ಕೊನೆಯ ಉಸಿರು ಇರುವವರೆಗೂ ಸಮಾಜದ ಚಿಂತನೆಯನ್ನು ಮಾಡುವ ಮೂಲಕ ಸಮಾಜಕ್ಕಾಗಿ ದುಡಿದವರು. ಅವರಲ್ಲಿದ್ದ ಗುರುಭಕ್ತಿ, ಸಮಾಜ ಸೇವೆ ಅನನ್ಯ ಸದೃಶವಾದುದು. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಮತ್ತು ಗುರುಗಳನ್ನು ಎಂದೂ ದುರ್ಬಳಕೆ ಮಾಡಿಕೊಂಡವರಲ್ಲ ಎಂದು ಹೇಳಿದರು.
29 ವರ್ಷಗಳ ಸುದೀರ್ಘ ಅವಧಿಯವರೆಗೆ ಸಾಧು ಸದ್ಧರ್ಮ ವೀರಶೈವ ಸಮಾಜವನ್ನು ಅಧ್ಯಕ್ಷರಾಗಿ ಮುನ್ನಡೆಸಿದ ಮೇರು ವ್ಯಕ್ತಿತ್ವ ಮಾಗನೂರು ಬಸಪ್ಪ ಅವರದು. ವಾಣಿಜ್ಯ, ಸಹಕಾರಿ, ಶಿಕ್ಷಣ ಕ್ಷೇತ್ರದಲ್ಲಿ ಸೇವೆಗೈದು ಆದರ್ಶಪ್ರಾಯರಾಗಿದ್ದರು ಎಂದರು.
1946 ರಲ್ಲಿಯೇ 15 ಎಕರೆ, 23 ಗುಂಟೆ ಜಮೀನನ್ನು ನಗರದ ಅನುಭವ ಮಂಟಪ ಶಾಲೆಗೆ ದಾನವಾಗಿ ನೀಡುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ಎಂದಿಗೂ ಯಾವ ಪದವಿಯನ್ನು ಬಯಸಿದವರಲ್ಲ. ಮನಸ್ಸು ಮಾಡಿದ್ದರೆ ಎಂದೋ ಶಾಸಕ, ಸಚಿವ, ಸಂಸದರಾಗಬಹುದಿತ್ತು. ಆದರೆ ಪದವಿ ಬೆನ್ನತ್ತಿ ಹೋದವರಲ್ಲ ಎಂದು ಬಸಪ್ಪನವರ ಸೇವಾ ಕಾರ್ಯವನ್ನು ಶ್ಲ್ಯಾಘಿಸಿದರು.
ಬಿಜೆಪಿ ಮಹಿಳಾ ಮುಖಂಡರಾದ ಗಾಯತ್ರಿ ಜಿ.ಎಂ. ಸಿದ್ದೇಶ್ವರ ಮಾತನಾಡಿ, ದಾನ-ಧರ್ಮ ಎಂದಾಕ್ಷಣ ನೆನಪಾಗುವುದು ಮಾಗನೂರು ಬಸಪ್ಪನವರು. ಸಿರಿಗೆರೆ ತರಳಬಾಳು ಮಠಕ್ಕೆ ಬಸಪ್ಪನವರ ಕೊಡುಗೆ ಅನನ್ಯವಾದುದು. ಅವರು ಆರಂಭಿಸಿರುವ ಶಿಕ್ಷಣ ಸಂಸ್ಥೆಗಳು ಕೂಡ ಉತ್ತಮ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುತ್ತಿವೆ. ಪ್ರತಿಯೊಬ್ಬರೂ ಸಹ ಬಸಪ್ಪ ಅವರ ಮಾರ್ಗದಲ್ಲಿ ಮುನ್ನಡೆಯಬೇಕೆಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ನಾಡಿಗ ಜಯಸ್ವಾಮಿ, ಶರಣ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಟ್ಯಾಕ್ಸ್ ಪ್ರಾಕ್ಟೀಷನರ್ ಟಿ. ಕೊಟ್ರೇಶ್, ನಿವೃತ್ತ ವೈದ್ಯಾಧಿಕಾರಿ ಡಾ. ಪಿ. ನಾಗರಾಜ್, ನಿವೃತ್ತ ಯೋಧ ಡಾ. ನಾಗಲಿಂಗಪ್ಪ, ಶುಶ್ರೂಷಾಧಿಕಾರಿ ಫ್ಲಾರೆನ್ಸ್ ಕೆ. ಮೇಸ್ತ್ರಿ, ಹೆಡ್ ಕಾನ್‌ಸ್ಟೇಬಲ್ ಜೆ.ಎಂ. ಮಂಜುನಾಥ್ ಅವರುಗಳು ಮಾಗನೂರು ಬಸಪ್ಪ ಅವರ ದಾನ-ಧರ್ಮ, ಸಮಾಜ ಸೇವೆಯನ್ನು ಕೊಂಡಾಡಿದರು.
ರಜನಿ (ಪ್ರಗತಿ ಪರ ರೈತರಾದ ಸರೋಜಮ್ಮ ಪಾಟೀಲ್ ಅವರ ಸೊಸೆ), ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಮಾಗನೂರು ಸಂಗಮೇಶ್ವರ ಗೌಡ್ರು ಮತ್ತಿತರರು ಉಪಸ್ಥಿತರಿದ್ದರು.
ಮಾಗನೂರು ಬಸಪ್ಪ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಎಂ.ಆರ್. ಪ್ರಭುದೇವ್ ಸ್ವಾಗತಿಸಿದರು. ಹೆಚ್.ಎಂ. ಅನ್ನಪೂರ್ಣ, ಟಿ.ಜಿ. ಲೀಲಾವತಿ ನಿರೂಪಿಸಿದರು. ಯುಕ್ತಾ ಎಂ. ಮಾಗನೂರು ಶರಣು ಸಮರ್ಪಿಸಿದರು.
ಎ.ಎಸ್. ಕುಸುಮಾ ಲಿಂ. ಮಾಗನೂರು ಬಸಪ್ಪ ಅವರ ಹೆಸರಿನ ದಾನ, ದತ್ತಿ ಬಗ್ಗೆ ವರದಿ ವಾಚಿಸಿದರು. ಅನ್ನಪೂರ್ಣ ವಿ. ಕೊಂಡಜ್ಜಿ ಭರತ ನಾಟ್ಯ ಪ್ರದರ್ಶಿಸಿದರು. ಮಾಗನೂರು ಬಸಪ್ಪ ಸಂಯುಕ್ತ ಶಾಲಾ ಮಕ್ಕಳು ನೃತ್ಯ ರೂಪಕ ಪ್ರದರ್ಶಿಸಿದರು.