ಇತಿಹಾಸದ ಪುಟ ಸೇರಿದ ಐತಿಹಾಸಿಕ ಸಿನಿಮಾ ಟಾಕೀಸ್ಗಳು
ದಾವಣಗೆರೆಯಲ್ಲಿ ಸಿಂಗಲ್ ಥಿಯೇಟರ್ಗಳ ಕಾಲ ಮುಗಿಯುತ್ತಾ ಬಂದಿದೆ. ಮೊದಲಿಗೆ ಮಲ್ಟಿಫ್ಲೆಕ್ಸ್ಗಳಿಂದಾಗಿ ಆಘಾತಕ್ಕೊಳಗಾಗಿ, ಇದೀಗ `ಓಟಿಟಿ’ ಹಾವಳಿಯಿಂದಾಗಿ ಬಹುತೇಕ ಚಿತ್ರಮಂದಿರಗಳು ತಮ್ಮ `ಆಟ’ ನಿಲ್ಲಿಸಿವೆ.
ರಂಗಭೂಮಿ ಕಲಾವಿದರನ್ನೂ ಪೋಷಿಸುತ್ತಿದ್ದ ದೇವನಗರಿಯಲ್ಲಿ ಹತ್ತಾರು ಚಿತ್ರಮಂದಿರಗಳಿದ್ದವು. ಶತಕಗಳ ಕಾಲ ಮನೋರಂಜನಾ ಕೇಂದ್ರವಾಗಿದ್ದವು. ತಾವಿದ್ದ ಸ್ಥಳದ ಗುರುತು ಹೆಚ್ಚಿಸಿದ್ದ ಚಿತ್ರಮಂದಿರಗಳು ಈಗ ಗುರುತೇ ಇಲ್ಲದಂತಾಗುತ್ತಿವೆ.
ಪ್ರಸ್ತುತ ದಾವಣಗೆರೆಯಲ್ಲಿರುವ ಅಶೋಕ, ಅರುಣ, ಗೀತಾಂಜಲಿ, ಪುಷ್ಪಾಂಜಲಿ, ಪದ್ಮಾಂಜಲಿ, ತ್ರಿನೇತ್ರ, ತ್ರಿಶೂಲ್, ವಸಂತ, ಶಿವಾಲಿ ಚಿತ್ರಮಂದಿರ ಗಳ ಪೈಕಿ ಸದ್ಯ ಐದು ಚಿತ್ರಮಂದಿರಗಳಲ್ಲಿ ಮಾತ್ರ ಪ್ರದರ್ಶನಗಳು ನಡೆಯುತ್ತಿವೆ.
ಅಂದ ಹಾಗೆ ದಾವಣಗೆರೆಯ ಪ್ರಥಮ ಚಿತ್ರಮಂದಿರದ ಹೆಸರು `ಧನಲಕ್ಷ್ಮಿ’ ಮೂಕಿ ಚಿತ್ರಗಳ ಕಾಲದಲ್ಲಿ ಪ್ರಾಜೆಕ್ಟರ್ ಇಟ್ಟು ಸಿನಿಮಾ ತೋರಿಸುತ್ತಿದ್ದ ಕಾಲವದು. ಇದು ಇದ್ದದ್ದು ಚಾಮರಾಜ ಪೇಟೆಯಲ್ಲಿ. ವ್ಯಾಪಾರಕ್ಕೆಂದು ಬಂದವರು ಧನಲಕ್ಷ್ಮಿಯಲ್ಲಿ ಸಿನಿಮಾ ನೋಡಿ ಪಕ್ಕದಲ್ಲಿಯೇ ಇದ್ದ ದೇವೀ ಭವನದಲ್ಲಿ ತಿಂಡಿ ತಿಂದು ಹೋಗುತ್ತಿದ್ದರು. ನಂತರದ ದಿನಗಳಲ್ಲಿ ಕಾರಣಾಂತರಗಳಿಂದ ಧನಲಕ್ಷ್ಮಿ ಥಿಯೇಟರ್ ಡ್ರಾಮಾ ಥಿಯೇಟರ್ ಆಗಿ ಬದಲಾಗಿ ಮರೆಯಾಯ್ತು.
ವಿನೋದ ಟಾಕೀಸ್ : ಈಗಲೂ ಚಾಲ್ತಿಯಲ್ಲಿರುವ ರಾಜನಹಳ್ಳಿ ಮುದ್ದುರಾಯಪ್ಪ ಲಕ್ಷ್ಮಣ ಶೆಟ್ರು ಕುಟುಂಬಕ್ಕೆ ಸೇರಿದ ಅಶೋಕ ಚಿತ್ರಮಂದಿರ ಇದ್ದ ಜಾಗದಲ್ಲಿ ವಿನೋದ ಹೆಸರಿನ ಟಾಕೀಸ್ ಇತ್ತು. ಅದಕ್ಕೂ ಮುಂಚೆ ಅಲ್ಲಿನ ಜಾಗವನ್ನು ಎಮ್ಮೆ ಹೊಂಡ ಎಂದು ಕರೆಯಲಾಗುತ್ತಿತ್ತು. ಮಳೆನೀರು ನಿಂತು ಕೆಸರಾಗುತ್ತಿದ್ದ ಈ ಜಾಗದಲ್ಲಿ ಎಮ್ಮೆಗಳು ಮಲಗುತ್ತಿದ್ದ ಕಾರಣ. ಅದನ್ನು `ಎಮ್ಮೆ ಹೊಂಡ’ ಎನ್ನಲಾಗುತ್ತಿತ್ತು. ಈ ಜಾಗದಲ್ಲಿಯೇ ವಿನೋದ ಟಾಕೀಸ್ ತಲೆ ಎತ್ತಿತ್ತು. ಈಗಿನ ಅಶೋಕ ರಸ್ತೆಯನ್ನು ಅಂದು ವಿನೋದ ರಸ್ತೆ ಎಂದೂ ಕರೆಯಲಾಗುತ್ತಿತ್ತು ಎಂದು ಹಿರಿಯ ಪತ್ರಕರ್ತ ಹೆಚ್.ಬಿ ಮಂಜುನಾಥ್ ನೆನಪಿಸಿಕೊಂಡರು.
ಶಾಂತಿ: ಚನ್ನಗಿರಿ ರಂಗಪ್ಪ ಅವರ ಕುಟುಂಬಕ್ಕೆ ಸೇರಿದ ಶಾಂತಿ ಚಿತ್ರಮಂದಿರ ಅಂದಿನ ದಿನಗಳಲ್ಲಿ ದೊಡ್ಡ ಚಿತ್ರಮಂದಿರವಾಗಿತ್ತು. ನಗರದ ಕೆ.ಆರ್. ರಸ್ತೆಯಲ್ಲಿತ್ತಾದರೂ, ಆ ರಸ್ತೆಯನ್ನು ಅದಕ್ಕೆ `ಶಾಂತಿ ಟಾಕೀಸ್ ರಸ್ತೆ’ ಎಂದೇ ಕರೆಯಲಾಗುತ್ತಿತ್ತು. ಇತಿಹಾಸ ಪುಟ ಸೇರಿದ ಈ ಚಿತ್ರಮಂದಿರದ ನಂತರ ಕಲ್ಯಾಣ ಮಂಟಪವಾಗಿ ಬದಲಾಯಿತಾದರೂ, ಅದು ಬಹು ದಿನ ಉಳಿಯಲಿಲ್ಲ.
ಮೋತಿ: ನಗರದ ಹೃದಯ ಭಾಗದಲ್ಲಿರುವ ಮೋತಿ ಚಿತ್ರಮಂದಿರ ಒಂದು ಕಾಲದಲ್ಲಿ ಫೇಮಸ್. ಖಾಸಗಿ ಬಸ್ ನಿಲ್ದಾಣದ ಸನಿಹದಲ್ಲಿಯೇ ಇದ್ದುದರಿಂದ ಗ್ರಾಮೀಣರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಮೋತಿಯಲ್ಲಿ ಪ್ರದರ್ಶನಕ್ಕೆ ಬರುತ್ತಿದ್ದ ಎಲ್ಲಾ ಚಿತ್ರಗಳೂ ಮಾಲೀಕರಿಗೆ ಲಾಭ ಮಾಡಿಕೊಡುತ್ತಿದ್ದವು. ಹಳ್ಳಿಗರನ್ನೇ ಆಕರ್ಷಿಸುವ ಧಾರ್ಮಿಕ ಚಿತ್ರಗಳು ಹೆಚ್ಚಾಗಿ ಪ್ರದರ್ಶನಗೊಳ್ಳುತ್ತಿದ್ದವು.
ಕೆಲವು ದೇವೀ ಚಿತ್ರಗಳ ನಡುವೆ ದೇವರಿಗೆಂದು ಮಂಗಳಾರತಿ ಮಾಡಿದ ಉದಾಹರಣೆಗಳೂ ಇಲ್ಲಿದ್ದವು. ನಟಿ ಶೃತಿ ಚಿತ್ರಗಳನ್ನು ನೋಡುತ್ತಿದ್ದವರು ಅಳುತ್ತಲೇ ಹೊರ ಬರುತ್ತಿದ್ದ ದಿನಗಳಿದ್ದವು. ಆದರೆ ಈಗ ಮೋತಿ ಆಟ ನಿಲ್ಲಿಸಿದೆ. ಟಾಕೀಸ್ ಬಳಿ ಮಳಿಗೆಗಳು ತಲೆ ಎತ್ತಿವೆ. ಮೋತಿ ಚಿತ್ರಮಂದಿರ ಇದ್ದ ಜಾಗ ಕಾಯಿಪೇಟೆಯ ಬಾಬುಲಾಲ್ ಹಾಗೂ ದೊಡ್ಡಪೇಟೆ ಧರಮ್ ಚಂದ್ ಲಕುಮಾಜಿ ಕುಟುಂಬದವರಿಗೆ ಸೇರಿತ್ತು. ಅದನ್ನು ಮೋತಿ ವೀರಪ್ಪ ಅವರಿಗೆ 1961ರಲ್ಲಿ ಲೀಜ್ಗೆ ಕೊಟ್ಟಿದ್ದರು. ಆಗ ಅದು ಬಿದಿರಿನ ಬಂಬುಗಳಿಂದ ನಿರ್ಮಿಸಲಾಗಿದ್ದ ಟೂರಿಂಗ್ ಟಾಕೀಸ್ ಆಗಿತ್ತು. ನಂತರ ಮೋತಿ ವೀರಪ್ಪ ಅವರು ಕಟ್ಟಡ ನಿರ್ಮಿಸಿ ಚಿತ್ರಮಂದಿರ ನಿರ್ಮಿಸಿದ್ದರು ಎನ್ನುತ್ತಾರೆ ಹೆಚ್.ಬಿ. ಮಂಜುನಾಥ್ .
ನಗರದ ಬಂಧೀಖಾನೆ ಪಕ್ಕದಲ್ಲಿ ಇರುವ ವಸಂತ ಚಿತ್ರಮಂದಿರವೂ ಮೋತಿ ವೀರಪ್ಪ ಅವರದ್ದು. ಇದರ ಮುಂಭಾಗದ ರಸ್ತೆಯನ್ನು ವಸಂತ ರಸ್ತೆ ಎಂದೇ ಕರೆಯಲಾಗುತ್ತಿದೆ. ಅನೇಕ ಏಳು-ಬೀಳುಗಳ ನಡುವೆಯೂ ವಸಂತ ಚಿತ್ರಮಂದಿರದಲ್ಲಿ ಈಗಲೂ ಚಿತ್ರಗಳು ಪ್ರದರ್ಶನವಾಗುತ್ತಿವೆ. ಕಂದನಕೋವಿ ಬೆಳ್ಳೂಡಿ ರುದ್ರಪ್ಪ ಅವರ ಕುಟುಂಬದ ತ್ರಿಶೂಲ್- ತ್ರಿನೇತ್ರಗಳಲ್ಲೂ ಪ್ರದರ್ಶನಗಳು ನಡೆಯುತ್ತಿವೆ.
ಇವುಗಳಲ್ಲದೆ, ವಿನೋಬನಗರದಲ್ಲಿ ಅಮಿತ್ ಚಿತ್ರಮಂದಿರವಿತ್ತು. ಇದು ರಾಜನಹಳ್ಳಿ ಲಕ್ಷ್ಮಣ ಶೆಟ್ಟಿಯವರ ಮಗ ಆರ್.ಎಲ್. ಪ್ರಭಾಕರ್ ಅವರಿಗೆ ಸೇರಿತ್ತು. ಇಳಕಲ್ ಜಯಣ್ಣ ಶಿವಾಲಿ ಚಿತ್ರಂದಿರದ ನಿರ್ಮಿಸಿದ್ದರು. ಈಗ ಅದೂ ಚಾಲ್ತಿಯಲ್ಲಿಲ್ಲ. ಕಂಬಿಗನೂಲು ಕುಟುಂಬದವರ ಅರುಣ ಚಿತ್ರಮಂದಿರದಲ್ಲೂ ಸದ್ಯ ಪ್ರದರ್ಶನಗಳು ನಡೆಯುತ್ತಿಲ್ಲ.
ಯಜಮಾನ್ : ಮನರಂಜನೆ ಅಂದಾಕ್ಷಣ ನಿಟುವಳ್ಳಿ ಭಾಗದ ಜನತೆಗೆ ನೆನಪಾಗುತ್ತಿದ್ದುದು ಯಜಮಾನ್ ಥಿಯೇಟರ್. ಇದು ಡಾಂಗೆ ಪಾರ್ಕ್ ಸನಿಹ ಇತ್ತು. ಇಲ್ಲಿ ರವಿಚಂದ್ರನ್, ವಿಷ್ಣುವರ್ಧನ್ ಸೇರಿದಂತೆ ಹಿರಿಯ ನಾಯಕರು ಚಿತ್ರಗಳು ಚೆನ್ನಾಗಿಯೇ ಪ್ರದರ್ಶನಗೊಳ್ಳುತ್ತಿದ್ದವು. ಆದರೆ ದಿನ ಕಳೆದಂತೆ ಪ್ರೇಕ್ಷಕರ ಕೊರತೆ ಕಾಡತೊಡಗಿತ್ತು. ಕೊನೆಗೆ 1992ರಲ್ಲಿ ಚಿತ್ರಮಂದಿರ ಸ್ಥಗಿತಗೊಂಡಿತು.
ಇಂಗ್ಲಿಷ್ ಚಿತ್ರಗಳಿಗೆ ಹೆಸರಾಗಿದ್ದ ವಿನಾಯಕ ವೀಡಿಯೋ: ವಸಂತ ರಸ್ತೆ ಬಳಿ ಇದ್ದ ವಿನಾಯಕ ವಿಡಿಯೋ ಇಂಗ್ಲೀಷ್ ಆಕ್ಷನ್ ಚಿತ್ರಗಳಿಗೆ ಹೆಸರಾಗಿತ್ತು. 1994ರಲ್ಲಿ ಆರಂಭವಾಗಿದ್ದ ಈ ಚಿತ್ರಮಂದಿರದಲ್ಲಿ ಇಂಗ್ಲಿಷ್ ಚಿತ್ರಗಳ ವೀಕ್ಷಣೆಗೆ ಯುವ ಸಮೂಹವೇ ಹೆಚ್ಚಾಗಿ ಬರುತ್ತಿತ್ತು. ಈ ಸ್ಥಳದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದ ಹಿನ್ನೆಲೆಯಲ್ಲಿ ಥಿಯೇಟರ್ಗೆ ವಿನಾಯಕ ವೀಡಿಯೋ ಎಂದೇ ಹೆಸರಿಡಲಾಗಿತ್ತು. ಈಗಲೂ ವೀಡಿಯೋ ಚಾಲ್ತಿಯಲ್ಲಿರುವುದು ವಿಶೇಷ.
ಆಜಾದ್ ನಗರ ರಸ್ತೆಯಲ್ಲಿ ವೆಂಕಟೇಶ್ವರ, ಬೇತೂರು ರಸ್ತೆಯಲ್ಲಿ ಗಿರಿ ಟಾಕೀಸ್, ನಿಟುವಳ್ಳಿಯಲ್ಲಿದ್ದ ಆರ್.ಎಲ್. ಹನುಮಂತಪ್ಪನವರ ಶ್ರೀ ಚಾಮುಂಡೇಶ್ವರಿ ಚಿತ್ರಮಂದಿರಗಳೂ ಸಿನಿ ರಸಿಕರನ್ನು ರಂಜಿಸುತ್ತಿದ್ದವು. ಪೋಸ್ಟರ್ ಮೂಲಕವೇ ಪಡ್ಡೆ ಹುಡುಗರನ್ನು ಕೆಣಕುತ್ತಿದ್ದ ಬಂಬೂ ಬಜಾರ್ ರಸ್ತೆಯಲ್ಲಿ ವಿನಾಯಕ ಟಾಕೀಸ್ ಬಹುಬೇಗ ಮರೆಯಾಯ್ತು.
ಡಾ. ರಾಜ್ ಚಿತ್ರಗಳಿಗೆ ಫೇಮಸ್ ಆಗಿದ್ದ ಗೀತಾಂಜಲಿ ಟಾಕೀಸ್
ಒಂದು ಕಾಲದಲ್ಲಿ ದಾವಣಗೆರೆಯಲ್ಲಿ ಗೀತಾಂಜಲಿ ಚಿತ್ರಮಂದಿರ ಫೇಮಸ್ ಎಂದೇ ಹೇಳಲಾಗುತ್ತಿತ್ತು. ಡಾ.ರಾಜ್ ಕುಮಾರ್ ಅವರ ಚಿತ್ರಗಳೆಲ್ಲವೂ ಇದೇ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದವು. ಹಲವಾರು ಚಿತ್ರಗಳು 25 ವಾರಗಳನ್ನು ಪೂರೈಸಿವೆ.
ಈ ಚಿತ್ರಮಂದಿರ ಸ್ಥಾಪನೆಯಾದದ್ದು 1963ರಲ್ಲಿ ಶ್ರೀ ರಾಮಾಂಜನೇಯ ಯುದ್ಧ ಇಲ್ಲಿ ಪ್ರದರ್ಶನ ಕಂಡ ಪ್ರಥಮ ಚಿತ್ರವಾಗಿತ್ತು. ಗೀತಾಂಜಲಿ ಸೇರಿದಂತೆ ಸನಿಹದಲ್ಲಿಯೇ ಇರುವ ಪುಷ್ಪಾಂಜಲಿ, ಪದ್ಮಾಂಜಲಿ ಚಿತ್ರಮಂದಿರಗಳು ರಾಜನಹಳ್ಳಿ ಶ್ರೀನಿವಾಸ ಮೂರ್ತಿ ಅವರ ಮಾಲೀಕತ್ವದಲ್ಲಿದ್ದವು.
ಗೀತಾಂಜಲಿ ಚಿತ್ರಮಂದಿರದ ಆರಂಭದ ದಿನ ಜನರು ಥಿಯೇಟರ್ ಒಳ ಹೋಗಲು ಹೆದರುತ್ತಿದ್ದರು. ಹೀಗಾಗಿ ಸಿನಿಮಾ ನೋಡಿ ಬಂದವರಿಗೆ ಬಹುಮಾನ ಕೊಡಲಾಗಿತ್ತು. ಜೀವನಚೈತ್ರ, ಒಡ ಹುಟ್ಟಿದವರು, ಅನುರಾಗ ಸಂಗಮ, ಶಿವರಾಜ್ ಕುಮಾರ್ ಅವರ ಸಿಂಹದ ಮರಿ, ರವಿಚಂದ್ರನ್ ಅವರ ರಾಮಾಚಾರಿ ಸೇರಿದಂತೆ ಹಲವು ಚಿತ್ರಗಳು 25 ವಾರಗಳನ್ನು ಪೂರೈಸಿದ್ದವು.
ಮಲ್ಪಿಫ್ಲೆಕ್ಸ್ಗಳ ಹೊಡೆತವನ್ನು ಹಾಗೋ-ಹೀಗೋ ತಾಳಿಕೊಂಡಿದ್ದ ಕೆಲವು ಚಿತ್ರಮಂದಿರಗಳು ಕೊರೊನಾ ಹೊಡೆತಕ್ಕೆ ಇನ್ನಷ್ಟು ಬಡಕಲಾಗಿದ್ದವು. ಆದರೆ ಮತ್ತೆ ಗಟ್ಟಿತನ ತೋರಿಸಲು ಸಾಧ್ಯವಾಗದೇ ಆಗಲೋ-ಈಗಲೋ ಧರೆಗುರುಳಲು ಸಜ್ಜಾಗಿ ನಿಂತಿವೆ. ದಶಕಗಳ ಕಾಲ ಜನರನ್ನು ಮನರಂಜಿಸಿ ಜನರಲ್ಲಿ ಮನೆಮಾತಾಗಿದ್ದ ಚಿತ್ರಮಂದಿರಗಳು ಈಗ ಇತಿಹಾಸದ ಪುಟ ಸೇರುತ್ತಿರುವುದು ವಿಪರ್ಯಾಸ.
ಮೊದಲಿನಂತೆ ಆದಾಯ ಬರುತ್ತಿಲ್ಲ. ವಿದ್ಯುತ್ ಶುಲ್ಕ, ನಿರ್ವಹಣೆ ಶುಲ್ಕ ಮತ್ತಿತರೆ ಶುಲ್ಕಗಳನ್ನು ಪಾವತಿಸಲು ಹಣ ಸಾಲುತ್ತಿಲ್ಲ. ಸಿಬ್ಬಂದಿಗೆ ಸಂಬಳ, ಚಿತ್ರಮಂದಿರದ ನಿರ್ವಹಣೆ, ಬಾಡಿಗೆ, ಕಂದಾಯ ಕಟ್ಟಲು ಹಣದ ಕೊರತೆ ಎದುರಾಗಿದೆ ಮಾಲೀಕರಿಗೆ.
ನೆಚ್ಚಿನ ನಾಯಕ ನಟನ ಚಿತ್ರಗಳಿಗಾಗಿ ಬೆಳ್ಳಂ ಬೆಳಿಗ್ಗಿಯೇ ಸರದಿಯಲ್ಲಿ ನಿಂತು ಟಿಕೆಟ್ ಖರೀದಿಸಿ, ಅಥವಾ ದುಪ್ಪಟ್ಟು ಹಣ ನೀಡಿ ಬ್ಲಾಕ್ ನಲ್ಲಿ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದ ದಿನಗಳು ಈಗ ಮರೆಯಾಗಿವೆ.
ಈ ಸಿನಿಮಾ ಮಂದಿರಗಳು ಸಿನಿ ರಸಿಕರನ್ನು ಆಕರ್ಷಿಸುವ ಜೊತೆಗೆ ನಗರದ ಆರ್ಥಿಕ ವಹಿವಾ ಟಿಗೂ ತಮ್ಮ ಕೊಡುಗೆ ನೀಡುತ್ತಿದ್ದವು. ಸಿನಿಮಾ ನೋಡಲೆಂದು ಬಂದವರು ಜೊತೆಗೆ ಊಟ-ತಿಂಡಿ ಸವಿಯುತ್ತಿದ್ದುದರಿಂದ ಸನಿಹದ ಹೋಟೆಲ್ಗಳಿಗೂ ವ್ಯಾಪಾರವಾಗುತ್ತಿತ್ತು. ಮಾರುಕಟ್ಟೆಗೆ ಹೋಗಿ ಬೇಕಾದ ವಸ್ತುಗಳನ್ನು ಕೊಂಡೇ ಹೋಗುತ್ತಿದ್ದರು. ಪ್ರತಿ ಚಿತ್ರಮಂದಿರವೂ ಹತ್ತಾರು ಜನರಿಗೆ ಉದ್ಯೋಗ ನೀಡಿದ್ದವು. ಇದೀಗ ಇವುಗಳನ್ನೇ ನೆಚ್ಚಿಕೊಂಡಿದ್ದ ಕುಟಂಬಗಳೂ ಸಂಕಷ್ಟಕ್ಕೊಳಗಾಗಿವೆ.
– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, [email protected]