ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಡಾ.ಬಿ.ಎಂ ವಿಶ್ವನಾಥ್ ಅಭಯ
ಬಿಪಿ ಹತೋಟಿ ಸಾಧ್ಯ
`ಉಪ್ಪು, ಕೊಬ್ಬು ಹೆಚ್ಚಿರುವ ಆಹಾರ ಸೇವನೆ, ದೈಹಿಕ ಶ್ರಮದ ಕೊರತೆ, ಬೊಜ್ಜು, ಮಾನಸಿಕ ಒತ್ತಡ, ಧೂಮಪಾನ, ಮದ್ಯ, ಮಾದಕ ವಸ್ತುಗಳ ಸೇವನೆ ಮತ್ತು ಅನುವಂಶಿಕತೆ ಅಧಿಕ ರಕ್ತದೊತ್ತಡ ಬರಲು ಪ್ರಮುಖ ಕಾರಣ. ಉತ್ತಮ ಜೀವನ ಶೈಲಿ ಯಿಂದ ಬಿ.ಪಿ ಇದ್ದರೆ ಕಡಿಮೆ ಪ್ರಮಾಣದ ಮಾತ್ರೆ ಗಳಿಂದಲೇ ಕಾಯಿಲೆ ಹತೋಟಿಗೆ ತರಬಹುದು’
– ಡಾ.ಬಿ.ಎಂ ವಿಶ್ವನಾಥ್, ನಿವೃತ್ತ ಪ್ರಾಧ್ಯಾಪಕರು, ಜೆಜೆಎಂಎಂಸಿ.
ದಾವಣಗೆರೆ, ಅ.27- ಅಧಿಕ ರಕ್ತದೊತ್ತಡ ಅಥವಾ ಬಿ.ಪಿ. ಕಾಯಿಲೆಗೆ ಈಗ ನಮ್ಮಲ್ಲಿ ಲಭ್ಯವಿರುವ ಔಷಧಿಗಳು ತುಂಬಾ ಪರಿಣಾಮಕಾರಿಯಾಗಿವೆ. ಅಲ್ಲದೇ ಯಾವುದೇ ದುಷ್ಪರಿಣಾಮವೂ ಇರುವುದಿಲ್ಲ ಎಂದು ಜೆಜೆಎಂಎಂಸಿ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಎಂ ವಿಶ್ವನಾಥ್ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಮೊನ್ನೆ ಏರ್ಪಾಡಾಗಿದ್ದ ವಿವೇಕ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ಅವರು ಅಧಿಕ ರಕ್ತದೊತ್ತಡ ಕಾಯಿಲೆ ಕುರಿತಂತೆ ಅವರು ವಿಶೇಷ ಉಪನ್ಯಾಸ ನೀಡಿದರು.
ಮಾತ್ರೆಗಳು ಅಪಾಯಕಾರಿ ಎಂದು ಎಷ್ಟೋ ಜನ ಬಿ.ಪಿ ಕಾಯಿಲೆಯಿಂದ ಉಂಟಾಗುವ ಮೂತ್ರಪಿಂಡ, ಹೃದಯ ಮತ್ತು ಪಾರ್ಶ್ವವಾಯು ಕಾಯಿಲೆಗಳಿಂದ ನರಳುತ್ತಿದ್ದಾರೆ ಎಂದು ತಿಳಿಸಿದ ಅವರು ಗುಳಿಗೆ ಸೇವನೆಗೆ ಹೆದರಬೇಕಾಗಿಲ್ಲ ಎಂದು ತಿಳಿಸಿದರು.
ನಮ್ಮ ದೇಶದಲ್ಲಿ ಶೇ. 10 ರಿಂದ 30 ಜನರಿಗೆ ಬಿಪಿ ಕಾಯಿಲೆ ಇದ್ದು, ಪ್ರಪಂಚದಾದ್ಯಂತ 1 ಬಿಲಿಯನ್ ಜನರಿಗೆ ಈ ಕಾಯಿಲೆ ಇದೆ, ಮುಂದಿನ 5 ರಿಂದ 10 ವರ್ಷಗಳಲ್ಲಿ 1.5 ಬಿಲಿಯನ್ ಜನರಿಗೆ ಈ ಕಾಯಿಲೆ ಬರಬಹುದು ಎಂದು ಅಂದಾಜಿದೆ.
ನಮ್ಮ ಹೃದಯ ನಿಮಿಷಕ್ಕೆ 70 ರಿಂದ 80 ಬಾರಿ ಬಡಿದುಕೊಳ್ಳುತ್ತದೆ. ಪ್ರತಿಯೊಂದು ಬಡಿತದಲ್ಲಿ ಹೃದಯ ಹಿಗ್ಗುತ್ತದೆ ಮತ್ತು ಕುಗ್ಗುತ್ತದೆ. ಅಂದರೆ ಸಂಕುಚಿತಗೊಳ್ಳುತ್ತದೆ. ಹಿಗ್ಗಿದಾಗ ಹೃದಯಕ್ಕೆ ರಕ್ತ ಬಂದು ಸೇರುತ್ತದೆ ಮತ್ತು ಸಂಕುಚಿತಗೊಂಡಾಗ ರಕ್ತ ಹೃದಯದಿಂದ ರಕ್ತನಾಳಗಳ ಮೂಲಕ ದೇಹದ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕ ಒದಗಿಸುತ್ತದೆ. (ಆಮ್ಲಜನಕ ರಕ್ತದ ಹಿಮೋಗ್ಲೋಬಿನ್‌ನಲ್ಲಿ ಇರುತ್ತದೆ). ರಕ್ತನಾಳಗಳಲ್ಲಿ ರಕ್ತ ಹರಿಯುವಾಗ ರಕ್ತನಾಳಗಳ ಗೋಡೆಗಳ ಮೇಲೆ ಬೀಳುವ ಒತ್ತಡಕ್ಕೆ ರಕ್ತದ ಒತ್ತಡವೆಂದು ಕರೆಯುತ್ತೇವೆ.
ಬಿ.ಪಿ. ಕಾಯಿಲೆಯಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಎಂದು ಎರಡು ವಿಧಗಳಿವೆ. ಶೇ. 90 ಜನರಿಗೆ ಪ್ರೈಮರಿ ಬಿ.ಪಿ. ಕಾಯಿಲೆ ಇದ್ದರೆ ಇನ್ನು ಶೇ. 10 ಜನರಿಗೆ ಸೆಕೆಂಡರಿ ಬಗೆಯ ಬಿ.ಪಿ. ಕಾಯಿಲೆ ಇರುತ್ತದೆ. ಪ್ರೈಮರಿ ವಿಧದ ಬಿ.ಪಿ. ಕಾಯಿಲೆಗೆ ಯಾವ ಕಾರಣಗಳನ್ನು ಗುರುತಿಸಲಾಗುವುದಿಲ್ಲ. ಸೆಕೆಂಡರಿ ವಿಧದ ಬಿ.ಪಿ. ಕಾಯಿಲೆ ಮೂತ್ರಪಿಂಡ, ಹಾರ್ಮೋನ್ ಗಳ ಕಾಯಿಲೆ, ರಕ್ತನಾಳದ ಕಾಯಿಲೆ, ಕೆಲವು ಹಾರ್ಮೋನ್ ಮಾತ್ರೆಗಳು ಈ ಕಾಯಿಲೆ ಬರಲು ಕಾರಣವಾಗಬಹುದು. ಹಾಗೂ ಕೆಲವು ಬಾರಿ ಸೆಕೆಂಡರಿ ಬಿ.ಪಿ. ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಾಗುತ್ತದೆ. ಆದರೆ ಪ್ರೈಮರಿ ವಿಧದ ಬಿ.ಪಿ ಕಾಯಿಲೆಗೆ ಜೀವನ ಪೂರ್ತಿ ಮಾತ್ರೆ ನುಂಗಬೇಕಾಗುತ್ತದೆ.
ಬಿ.ಪಿ ಪ್ರಾರಂಭದ ಹಂತದಲ್ಲಿ ಯಾವ ಲಕ್ಷಣಗಳು ಇರುವುದಿಲ್ಲ, ಯಾವುದೋ ಕಾರಣಕ್ಕೆ ವೈದರಲ್ಲಿ ಹೋದಾಗ ನಿಮಗೆ ಬಿ.ಪಿ. ಇದೆ ಎಂದು ಹೇಳಬಹುದು, ಅದಕ್ಕೆ ಈ ಕಾಯಿಲೆಗೆ `ಸೈಲೆಂಟ್ ಕಿಲ್ಲರ್’ ಎಂಬ ಹೆಸರಿದೆ. ರಕ್ತದ ಒತ್ತಡ ಏರುತ್ತಾ ಹೋದಾಗ ತಲೆಸುತ್ತು, ತಲೆನೋವು, ಆಯಾಸ, ಕಣ್ಣು ಮಂಜಾಗುವುದು, ಎದೆಬಡಿತ, ಎದೆನೋವು ಕಾಣಿಸಿಕೊಳ್ಳಬಹುದು.
ನಡಿಗೆ, ಯೋಗ, ಆಟಗಳಲ್ಲಿ ಭಾಗವಹಿಸು ವುದು ಈಜು, ಮುಂತಾದ ಚಟುವಟಿಕೆಗಳಲ್ಲಿ ತೊಡಗುವುದು. ಆಹಾರದಲ್ಲಿ ಉಪ್ಪಿನ ಅಂಶ ಮತ್ತು ಕೊಬ್ಬಿನ ಅಂಶ ಕಡಿಮೆ, ಕರಿದ ಪದಾರ್ಥಗಳ ಸೇವನೆಗೆ ಮಿತಿ, ಹಸಿರು ತರಕಾರಿ ಹಾಗೂ ಹಣ್ಣುಗಳಲ್ಲಿ ಪೊಟ್ಯಾಸಿಯಂ ಮತ್ತು ನಾರಿನ ಅಂಶ ಹೆಚ್ಚಿರುವುದರಿಂದ ಬಿ.ಪಿ. ಕಾಯಿಲೆ ಹತೋಟಿಗೆ ಸಹಾಯ ಮಾಡುತ್ತದೆ. ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳಬೇಕು
ಬಿ.ಪಿ. ಕಾಯಿಲೆ ಜೊತೆಗೆ ಸಕ್ಕರೆ ಕಾಯಿಲೆ, ಹೃದಯದ ಕಾಯಿಲೆ, ಕೊಲೆಸ್ಟ್ರಾಲ್ ಹೆಚ್ಚಿರುವುದು ಇನ್ನು ಮುಂತಾದ ಕಾಯಿಲೆಗಳ್ಳಿದ್ದರೆ ಅದಕ್ಕೆ ಅನುಗುಣವಾಗಿ ಮಾತ್ರೆಗಳನ್ನು ನಿರ್ಧರಿಸಬೇಕಾಗುತ್ತದೆ.
ನಿಯಮಿತವಾಗಿ ಪ್ರತಿದಿನ ಅದೇ ಸಮಯಕ್ಕೆ ಮಾತ್ರೆ ತೆಗೆದು ಕೊಳ್ಳಬೇಕು. ತಿಂಗಳಿಗೆ ಎರಡು ಅಥವಾ ಮೂರು ಬಾರಿ ಬಿ.ಪಿ. ಪರೀಕ್ಷೆ ಮಾಡಿಕೊಳ್ಳಬೇಕು.
ಇದ್ದಕ್ಕಿದ್ದಂತೆ ಬಿ.ಪಿ ಮಾತ್ರೆ ನಿಲ್ಲಿಸುವುದು ಅಪಾಯಕರ, ಮಾತ್ರೆ ಕಡಿಮೆ ಮಾಡುವ ಅವಕಾಶ ಇದ್ದಲ್ಲಿ ವೈದ್ಯರು ನಿಧಾನವಾಗಿ ಕಡಿಮೆಗೊಳಿಸುತ್ತಾರೆ.
ನೋವಿನ ಮಾತ್ರೆ, ಹಾರ್ಮೋನ್ ಮಾತ್ರೆಗಳಿಂದ ಬಿ.ಪಿ ಹೆಚ್ಚಾಗಬಹುದು. ವೈದ್ಯರ ಸಲಹೆ ಇಲ್ಲದೇ ಮಾತ್ರೆ ಉಪಯೋಗಿಸಬಾರದು.
ವರ್ಷಕ್ಕೆ ಒಂದು ಅಥವಾ ಎರಡು ಬಾರಿ ರಕ್ತ, ಮಾತ್ರೆ, ಇಸಿಜಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮೂತ್ರಪಿಂಡ, ಹೃದಯದ ಕಾಯಿಲೆ, ಕೊಲೆಸ್ಟ್ರಾಲ್ ಮತ್ತು ಥೈರಾಯ್ಡ್ ಕಾಯಿಲೆ ಇದ್ದರೆ ಗುರುತಿಸಬಹುದು ಮತ್ತು ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬಹುದು. ಅಲ್ಲದೆ ಈ ಪರೀಕ್ಷೆ ಗಳಿಂದ ಔಷಧಿಗಳ ದುಷ್ಪರಿಣಾಮಗಳನ್ನು ಸಹ ಗುರುತಿಸ ಬಹುದು ಎಂದು ಡಾ.ಬಿ.ಎಂ ವಿಶ್ವನಾಥ್ ವಿವರಿಸಿದರು.
ಬಾಪೂಜಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ.ಜಿ.ಗುರುಪ್ರಸಾದ್, ಡಾ.ಸುರೇಶ್‌ಬಾಬು, ಡಾ.ರೇವಪ್ಪ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು. ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರು ಹಾಜರಿದ್ದರು.