ಭಿನ್ನಮತಕ್ಕೆ ಕಾರಣವಾಗುತ್ತಿರುವ ಸ್ವಾರ್ಥ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ, ರಾಷ್ಟ್ರ ನಾಯಕರಿಗೆ ಒತ್ತಾಯಿಸಲು ತೀರ್ಮಾನ
ರಾಜ್ಯದ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಲು ನಿರ್ಧಾರ
ದಾವಣಗೆರೆ, ಅ.27- ಜಿಲ್ಲೆಯ ಬಿಜೆಪಿಯಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ಹಿನ್ನೆಲೆಯಲ್ಲಿ ಆ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಗರದ ಖಾಸಗಿ ಹೋಟೆಲ್ಲೊಂದರ ಸಭಾಂಗಣದಲ್ಲಿ ಇಂದು ಸಭೆ ನಡೆಸಿ, ಪಕ್ಷದ ಕೆಲ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಪಕ್ಷದ ಸಂಘಟನೆಗೆ ನಿರ್ಧಾರ ಕೈಗೊಂಡರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಎಲ್ಲರೂ ಗುಂಪುಗಾರಿಕೆಯನ್ನು ಖಂಡಿಸಿದರು. ಜಿಲ್ಲೆಯಲ್ಲಿ ಗುಂಪು ಗಾರಿಕೆ ನಡೆಸುತ್ತಿರುವ ಪ್ರಮುಖರಲ್ಲಿ ಎಲ್ಲರೂ 10 ರಿಂದ 25 ವರ್ಷ ಅಧಿಕಾರ ಅನುಭವಿಸಿದವರೇ ಆಗಿದ್ದಾರೆ.
ವೈಯಕ್ತಿಕ ಜೀವನ ಮತ್ತು ದುಡಿಮೆಯನ್ನು ಬದಿಗಿರಿಸಿ ಪಕ್ಷದ ಏಳಿಗೆಗಾಗಿ ಇವರನ್ನು ಬೆಂಬಲಿಸಿ ಇವರು ಅಧಿಕಾರಕ್ಕೇರಲು ಕಾರಣರಾದ ಕಾರ್ಯಕರ್ತರ ಬಗ್ಗೆ ಗಮನಹರಿಸದೆ ಸ್ವಾರ್ಥ ಕ್ಕೋಸ್ಕರ ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಮತದಾರರು ಬಿಜೆಪಿ ಪರವಾಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯದಲ್ಲಿಯೇ ಅತೀ ಕಡಿಮೆ ಅಂತರದಲ್ಲಿ ಸೋತರೂ ಹೆಚ್ಚಿನ ಮತಗಳನ್ನು ಗಳಿಸಿದ್ದು ಮತ್ತು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 25,000 ಮತಗಳ ಮುನ್ನಡೆ ಪಡೆದಿದ್ದು ಎಂದು ಹೇಳಬಹುದು.
ಆದರೆ, ಗುಂಪುಗಾರಿಕೆ ನಡೆಸುತ್ತಿರುವವರು ಮತದಾರರಿಗೆ ಜಿಗುಪ್ಸೆಯಾಗುವಂತೆ ವರ್ತಿಸುತ್ತಿದ್ದಾರೆ. ಜಿಲ್ಲೆಯ ಇಬ್ಬರು ಹಿರಿಯ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ಮತ್ತೆ ಮತ್ತೆ ಅವರಿಬ್ಬರ ನಡುವೆ ತಂದಿಡುವ ಕೆಲಸ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪತ್ರಿಕಾಗೋಷ್ಠಿ ಮೂಲಕ ಮಾಧ್ಯಮಗಳಲ್ಲಿ ಹೇಳಿಕೆ ಕೊಡುವುದು, ತಾವಿದ್ದರೆ ಮಾತ್ರ ಪಕ್ಷ, ತಾವು ಇಲ್ಲದಿದ್ದರೆ ಪಕ್ಷವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಅಧಿಕಾರಕ್ಕೇರಲು ಕಾರಣವಾದ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ದರ ಏರಿಕೆ ಕ್ರಮ ಅನುಸರಿಸುತ್ತಿದೆ ಎಂಬಂತೆ ಹಾಲು, ಬಸ್ಸು, ವಿದ್ಯುತ್, ಪೆಟ್ರೋಲ್, ಅಬಕಾರಿ ಸುಂಕ, ಮನೆ ಕಂದಾಯ, ದೃಢೀಕೃತ ನಕಲು ಪ್ರತಿಗಳ ದರ, ಛಾಪಾ ಕಾಗದಗಳ ಬೆಲೆ ಸೇರಿದಂತೆ ರೈತರ ಪಂಪ್‌ಸೆಟ್‌ಗಳಿಗೆ ಬೇಕಾಗುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಬೆಲೆ ಏರಿಕೆ, ಹೀಗೆ ಎಲ್ಲಾ ರೀತಿಯ ಬೆಲೆ ಏರಿಕೆಯ ಬರೆ ನೀಡುತ್ತಾ ರಾಜ್ಯದ ಜನತೆಗೆ ಹಿಂಸೆ ನೀಡುತ್ತಿದೆ.
ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಅತಿವೃಷ್ಟಿ ಯಿಂದಾಗಿ ರೈತರಿಗೆ ತಾವು ಬೆಳೆದ ಬೆಳೆ ಕೈಗೆ ಬಂದರೂ ಬಾಯಿಗೆ ಬಾರದಂತಾಗಿದೆ. ರೈತರ ನೆರವಿಗೆ ಬಾರದ ಸರ್ಕಾರ, ಅಭಿವೃದ್ಧಿ ಶೂನ್ಯ ಸರ್ಕಾರದ ವಿರುದ್ಧ ಜನಪರ ಹೋರಾಟಕ್ಕೆ ನಿರ್ಧರಿಸಲಾಯಿತು. ಅದಕ್ಕಾಗಿ ಎಲ್ಲಾ ವಾರ್ಡ್‌ಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಬಳಿ ತೆರಳಿ ಪಕ್ಷದ ಸಂಘಟನೆಗೆ ನಿರ್ಧರಿಸಲಾಯಿತು.
ಭಿನ್ನಮತಕ್ಕೆ ಕಾರಣವಾಗುತ್ತಿರುವ ಸ್ವಾರ್ಥ ಮುಖಂಡರ ವಿರುದ್ಧ ರಾಜ್ಯ ನಾಯಕರಿಗೆ ಮತ್ತು ರಾಷ್ಟ್ರ ನಾಯಕರಿಗೆ ನಿಯೋಗದ ಮೂಲಕ ಮನವಿ ಪತ್ರ ಸಲ್ಲಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಲು ನಿರ್ಧರಿಸಲಾಯಿತು.
ಮಾಜಿ ಉಪಮಹಾಪೌರರು ಹಾಗೂ ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಪಿ.ಎಸ್. ಜಯಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮಹಾಪೌರರಾದ ಕೆ.ಆರ್. ವಸಂತ್ ಕುಮಾರ್, ಎಚ್.ಎನ್. ಗುರುನಾಥ್ ಪಾಲಿಕೆಯ ಮಾಜಿ ಸದಸ್ಯರುಗಳಾದ ಹೆಚ್.ಎನ್. ಶಿವಕುಮಾರ್, ಸಂಕೋಳ್ ಚಂದ್ರಶೇಖರ್, ಜಿ. ಸುರೇಶ್, ಶಿವನಹಳ್ಳಿ ರಮೇಶ್, ದೂಡಾ ಮಾಜಿ ಅಧ್ಯಕ್ಷ ಎ.ವೈ. ಪ್ರಕಾಶ್, ಮುಖಂಡರುಗಳಾದ ಕೊಂಡಜ್ಜಿ ಜಯಪ್ರಕಾಶ್, ಶಿವರಾಜ್ ಪಾಟೀಲ್, ಬಿ.ಜಿ. ಸಿದ್ದೇಶ್, ಬೇತೂರು ಬಸವರಾಜ್, ರಘು, ಆದಿನಾಥ್, ಮುಪ್ಪಣ್ಣ, ಗುಡ್ಡಪ್ಪ, ಸಿದ್ದರಾಮಪ್ಪ, ಹನುಮಂತರಾವ್, ಅಮರೇಶ್ ಮತ್ತಿತರರು ಇದ್ದರು