ಪ್ರೊ. ಸಿ.ಕೆ. ರಮೇಶ್
ದಾವಣಗೆರೆ, ಅ. 25- ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ಚೆನ್ನಾಗಿ ರೂಪಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿ ದೆಸೆಯಲ್ಲಿಯೇ ಸಂಶೋಧನಾ ಪ್ರವೃತ್ತಿ ರೂಢಿಸಿಕೊಳ್ಳಬೇಕೆಂದು ದಾವಣಗೆರೆ ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ. ಸಿ.ಕೆ. ರಮೇಶ್ ತಿಳಿ ಹೇಳಿದರು.
ನಗರದ ಧ.ರಾ.ಮ. ವಿಜ್ಞಾನ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಸಹ ಪಠ್ಯ ಚಟುವಟಿಕೆಗಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದರು.
ಕರ್ನಾಟಕ ರಾಜ್ಯ ವಿವಿ ಹಾಗೂ ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ.ಸಿ.ಹೆಚ್.ಮುರುಗೇಂದ್ರಪ್ಪ ಅವರು ಕಾಲೇಜಿನ ಐ.ಕ್ಯು.ಎ.ಸಿ. ಬುಲೆಟಿನ್ ಬಿಡುಗಡೆ ಮಾಡಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಮಹತ್ವ ಕೊಟ್ಟು ಜಯಶೀಲರಾಗಿ ಚೆನ್ನಾಗಿ ಬದುಕು ರೂಪಿಸಿಕೊಳ್ಳಬೇಕೆಂದು ತಮ್ಮ ಬದುಕಿನ ಹೋರಾಟದ ಹಾದಿಯನ್ನು ಹೇಳುತ್ತಾ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ.ಪಿ. ರೂಪಶ್ರೀ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದಷ್ಟೇ ಸಹ ಪಠ್ಯಗಳಿಗೆ ಮಹತ್ವ ಕೊಟ್ಟು ಸೃಜನ ಶೀಲತೆ ಅಳವಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿನಿ ಪುಷ್ಪ ಪ್ರಾರ್ಥಿಸಿದರು. ಸಾಂಸ್ಕೃತಿಕ ಚಟುವಟಿಕೆ ಸಮಿತಿ ಸಂಚಾಲಕ ಶಿವಪ್ಪ ಮುಳ್ಳೂರ ಸ್ವಾಗತಿಸಿದರು.
ಡಾ. ಹೆಚ್.ಬಿ. ಸೌಮ್ಯ ನಿರೂಪಿಸಿದರು. ಡಾ. ಮೊಹಮ್ಮದ್ ಇಮದಾದುಲ್ಲಾ ವಂದಿಸಿದರು.
ಐ.ಕ್ಯು.ಎ.ಸಿ ಸಂಯೋಜಕ ಡಾ. ಟಿ. ಮಂಜುರಾಜ್, ಸಹ ಸಂಯೋಜಕರಾದ ಡಾ. ಟಿ.ಎಸ್. ಹರೀಶ್ ಕುಮಾರ್, ಮಂಜುನಾಥ್, ಬಸಪ್ಪ ಚನ್ನಿ ಅವರು ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಸಿರಿಗೌರಿ ಮತ್ತು ಜಿ.ಆರ್. ಮಧು ಉಪಸ್ಥಿತರಿದ್ದರು.