ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ, ಅ. 23 – ಶೀಘ್ರದಲ್ಲೇ ನಗರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಹಾಗೂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ಥಳೀಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ (ಅರುಣ ಸರ್ಕಲ್) ಸ್ಥಾಪಿಸಲು ಉದ್ದೇಶಿಸಿರುವ ರಾಣಿ ಚೆನ್ನಮ್ಮ ಪ್ರತಿಮೆ ಈಗಾಗಲೇ ಸಿದ್ಧವಾಗಿದೆ. ಆದರೆ, ಮೂರ್ತಿಯ ಕೆತ್ತನೆ ಸರಿಯಾಗಿ ಆಗಿಲ್ಲ ಎಂಬ ದೂರಿದೆ. ಎಲ್ಲರೂ ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಶೀಘ್ರದಲ್ಲೇ ಪ್ರತಿಮೆ ಸ್ಥಾಪನೆಯಾಗಲಿದೆ ಎಂದರು.
ರಾಣಿ ಚೆನ್ನಮ್ಮ ಸ್ವಾರ್ಥ ಮರೆತು ರಾಜ್ಯ ರಕ್ಷಣೆಗೆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಅವರ ಜೀವನ ಶೋಷಣೆ ವಿರುದ್ಧ ಹೋರಾಟ ನಡೆಸುವವರಿಗೆ ಸ್ಫೂರ್ತಿಯಾಗಿದೆ. ಪ್ರತಿಯೊಬ್ಬ ಮಹಿಳೆಗೂ ಚೆನ್ನಮ್ಮನ ವೀರ ವನಿತಾ ಸ್ಫೂರ್ತಿ, ಮಾರ್ಗದರ್ಶಕವಾಗಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, 1824ರಲ್ಲಿ ಕಿತ್ತೂರಿನ ಪುಟ್ಟ ಸಂಸ್ಥಾನದ ರಾಣಿ ಚೆನ್ನಮ್ಮ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದು ಭಾರತದ ಇತಿಹಾಸದಲ್ಲಿ ಮಹತ್ವದ ಘಟನೆಗಳಲ್ಲಿ ಒಂದಾಗಿದೆ. ಚೆನ್ನಮ್ಮನ ಇತಿಹಾಸವನ್ನು ಸರಿಯಾಗಿ ಅಧ್ಯಯನ ಮಾಡಬೇಕಿದೆ ಹಾಗೂ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು.
ಮೀಸಲಾತಿಗೆ ಕುಂಟು ನೆಪ: ಅಜಯ್
ಪಂಚಮಸಾಲಿ ಸಮುದಾಯದವರು 1994ರಿಂದಲೂ 2ಎ ಮೀಸಲಾತಿಗೆ ಹೋರಾಟ ನಡೆಸುತ್ತಿದ್ದಾರೆ. ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ವಿಷಾದಿಸಿದರು.
ಮೀಸಲಾತಿಗಾಗಿ ಇತ್ತೀಚೆಗೆ ಸಮಾಜದ ವಕೀಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಚುನಾವಣಾ ನೀತಿ ಸಂಹಿತೆ ಇದೆ ಎಂಬ ಕುಂಟು ನೆಪ ಹೇಳಿದ್ದಾರೆ ಎಂದು ಟೀಕಿಸಿದರು.
ಭಾರತ ರತ್ನ – ರಾಷ್ಟ್ರಮಾತೆ
ಕಿತ್ತೂರು ರಾಣಿ ಚೆನ್ನಮ್ಮ ಅವರ ಸಾಹಸ, ಕರುಣೆ, ದಯೆ ಹಾಗೂ ದೇಶಪ್ರೇಮ ಎಲ್ಲರಿಗೂ ಆದರ್ಶ. ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಪಾಲಿಕೆ ಮೇಯರ್ ಚಮನ್ ಸಾಬ್ ಒತ್ತಾಯಿಸಿದರು.
ವಚನಗಾರ್ತಿ ಅಕ್ಕ ಮಹಾದೇವಿ ಅವರನ್ನು ನಾಡಿನ ಜನತೆ ಅಕ್ಕ ಎಂದು ಗೌರವಿಸುತ್ತಾರೆ. ಅದೇ ರೀತಿ ವೀರ ವನಿತೆ ರಾಣಿ ಚೆನ್ನಮ್ಮ ಅವರನ್ನು ಅವ್ವ ಎಂದು ಗೌರವಿಸುತ್ತಾರೆ. ಚೆನ್ನಮ್ಮ ಅವರು ರಾಷ್ಟ್ರಮಾತೆ ಎಂದು ಉಪ ಮೇಯರ್ ಸೋಗಿ ಶಾಂತಕುಮಾರ್ ಹೇಳಿದರು.
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ಮಾತನಾಡಿ, ಚೆನ್ನಮ್ಮ ಉತ್ತರ ಭಾರತದಲ್ಲಿ ರಾಣಿಯಾಗಿದ್ದರೆ ಹೆಚ್ಚು ಪ್ರಚಾರ ಹಾಗೂ ಮಾನ್ಯತೆ ಸಿಗುತ್ತಿತ್ತು. ಆದರೆ, ಈಗ ರಾಣಿ ಚೆನ್ನಮ್ಮನ ಕುರಿತು ಇತಿಹಾಸದ ಪುಟಗಳಲ್ಲಿ ಸಮರ್ಪಕವಾಗಿ ಮಾಹಿತಿ ದಾಖಲಾಗಿಲ್ಲ ಎಂದರು.
ಗೀಗೀ ಪದ, ಲಾವಣಿ ಪದಗಳು, ಜಾನಪದಗಳಲ್ಲಿ ಚೆನ್ನಮ್ಮನ ಇತಿಹಾಸ ಇದೆ. ಬ್ರಿಟನ್ ಹಾಗೂ ಪುಣೆಯ ಪತ್ರಾಗಾರಗಳಲ್ಲಿನ ಮಾಹಿತಿಯನ್ನು ಹೊರ ತೆಗೆಯಬೇಕಿದೆ. ಉತ್ಖನನದ ಮೂಲಕವೂ ಇತಿಹಾಸದ ಮಾಹಿತಿಯ ಹೊರ ತೆಗೆಯುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ಮೇಯರ್ ಹಾಗೂ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಯುವ ಸಂಘದ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, ಪಂಚಮಸಾಲಿ ಸಮಾಜದವರು ರಾಜ್ಯದಲ್ಲಿ 1.3 ಕೋಟಿಯಷ್ಟಿದ್ದಾರೆ. ಸಮಾಜ ಒಂದಾದಾಗ ಮಾತ್ರ ಬೇಡಿಕೆಗಳು ಈಡೇರಲು ಸಾಧ್ಯ ಎಂದರು.
ಜವಳಿ ಉದ್ಯಮಿ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ. ಉಮಾಪತಿ ಮಾತನಾಡಿ, ರಾಜ್ಯ ಸರ್ಕಾರವು ಪಂಚಮಸಾಲಿ ಸಮಾಜಕ್ಕೆ ಒ.ಬಿ.ಸಿ. ಮಾನ್ಯತೆ ನೀಡಿದರೆ, ಕೇಂದ್ರದಲ್ಲೂ ಇದೇ ಮಾನ್ಯತೆ ಸಿಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉಪನ್ಯಾಸ ನೀಡಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪಿ. ವೀಣಾ, ದೇಶದ ಮೊದಲ ಸ್ವಾತಂತ್ರ್ಯ ಹೋರಾಟವಾದ ಸಿಪಾಯಿ ದಂಗೆಗೆ 33 ವರ್ಷ ಮೊದಲೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಗೆಲುವು ಸಾಧಿಸಿದ್ದರು ಎಂದರು.
ವೇದಿಕೆಯ ಮೇಲೆ ಪಾಲಿಕೆ ಮೇಯರ್ ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಅಖಿಲ ಭಾರತ ಲಿಂಗಾಯುತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಬಿ. ಅಶೋಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ತಹಶೀಲ್ದಾರ್ ಅಶ್ವತ್ಥ್, ಎಎಸ್‌ಪಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.