ಜಿಲ್ಲಾ ಛಲವಾದಿ ಮಾದಿಗ ಸಮುದಾಯಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ
ದಾವಣಗೆರೆ, ಅ.23- ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಆದೇಶದ ಅನ್ವಯ ಕೂಡಲೇ ಒಳ ಮೀಸಲಾತಿ ಜಾರಿ ಮಾಡುವಂತೆ ಆಗ್ರಹಿಸಿ ದಾವಣಗೆರೆ ಜಿಲ್ಲಾ ಛಲವಾದಿ, ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ಇಂದು ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಛಲವಾದಿ-ಮಾದಿಗ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಿದರು.
ಜಯದೇವ ವೃತ್ತ, ಅಶೋಕ ರಸ್ತೆ, ಗಾಂಧಿವೃತ್ತದ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ, ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ದಲಿತ ಸಂಘರ್ಷ ಸಮಿತಿ ಮುಖಂಡ ಎಂ. ಗುರುಮೂರ್ತಿ ಮಾತನಾಡಿ, ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಅಸಮಾನತೆ ಕಂಡು ಬರುತ್ತಿದೆ. ಮೀಸಲಾತಿ ಕೆಲವರಿಗೆ ಮಾತ್ರ ಇತ್ತು. ಕರ್ನಾಟಕದಲ್ಲಿ ಮಾದಿಗ ಸಮುದಾಯದ ಜನಸಂಖ್ಯೆ ಆಧಾರದಲ್ಲಿ ಒಳ ಮೀಸಲಾತಿ ವರ್ಗೀಕರಣ ಮಾಡಲು ಒತ್ತಾಯಿಸಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ನಡೆಸಿದ ಹೋರಾಟದ ಫಲವಾಗಿ ಈಗ ಒಳ ಮೀಸಲಾತಿ ಅನುಷ್ಠಾನದ ಸಮಯ ಬಂದಿದೆ. ಸರ್ವೋಚ್ಛ ನ್ಯಾಯಾಲಯದ ಸಾಂವಿಧಾನಿಕ ಪೀಠ ಅ. 1 ರಂದು ಒಳ ಮೀಸಲಾತಿ ಕಲ್ಪಿಸುವ ಅಧಿಕಾರ ಮತ್ತು ಹೊಣೆಗಾರಿಕೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಈ ತೀರ್ಪಿನ ಅನ್ವಯ ಕೂಡಲೇ ಒಳ ಮೀಸಲಾತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಒಳ ಮೀಸಲಾತಿ ಜಾರಿಗೆ ಕೆಲವು ಸಮುದಾಯದ ಮುಖಂಡರು ಅಡ್ಡಿಪಡಿಸುತ್ತಿದ್ದಾರೆ. ಸಿಎಂ ಸಿದ್ಧರಾಮಯ್ಯ ಅವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ತಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇಂತಹ ಒತ್ತಡಗಳಿಗೆ ಮಣಿಯದೇ ಸಿಎಂ ಒಳ ಮೀಸಲಾತಿ ಜಾರಿಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಗಳಲ್ಲಿ ತಕ್ಕ ಪಾಠವನ್ನು ದಲಿತ ಸಮುದಾಯ ಕಲಿಸಲಿದೆ ಎಂದು ಎಚ್ಚರಿಸಿದರು.
ರಾಜಕೀಯ ಪಕ್ಷಗಳಿಂದ ದಿಕ್ಕು ತಪ್ಪಿಸುವ ಕೆಲಸ: ಮಾಜಿ ಸಚಿವ ನಾರಾಯಣಸ್ವಾಮಿ
ದಾವಣಗೆರೆ, ಅ. 23- ಛಲವಾದಿ ಮತ್ತು ಮಾದಿಗ ಸಮುದಾಯಗಳಲ್ಲಿ ಜಾಗೃತಿ ಮೂಡಬೇಕಿದ್ದು, ಕೆಲವು ರಾಜ್ಯಗಳಲ್ಲಿ ಅಸ್ಪೃಶ್ಯ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಛಲವಾದಿ ಮತ್ತು ಮಾದಿಗ ಸಮುದಾಯದ ದಿಕ್ಕು ತಪ್ಪಿಸುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ದೂರಿದರು.
ನಗರದಲ್ಲಿ ಛಲವಾದಿ-ಮಾದಿಗ ಸಮುದಾಯಗಳ ಒಕ್ಕೂಟದ ವತಿಯಿಂದ ಒಳ ಮೀಸಲಾತಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.
ಸರ್ಕಾರ ನೇಮಿಸಿರುವ ಹಲವು ಆಯೋಗಗಳು ಒಳ ಮೀಸಲಾತಿ ಅವಶ್ಯಕತೆಯನ್ನು ಪ್ರತಿಪಾದಿಸಿವೆ. ಈ ದೇಶದ ಶೋಷಿತ ಸಮುದಾಯಕ್ಕೆ ಒಳ ಮೀಸಲಾತಿಯ ಅಗತ್ಯವಿದೆ. ಇದಕ್ಕೆ ಸಂವಿಧಾನದ ಯಾವುದೇ ಪರಿಚ್ಛೇದವೂ ಅಡ್ಡಿಪಡಿಸಿಲ್ಲ. ಈ ವಿಚಾರದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೀಡಿದ್ದ ತೀರ್ಪು ಒಪ್ಪಲು ಸಾಧ್ಯವಿರಲಿಲ್ಲ ಎಂದರು.
ಪಂಚವಾರ್ಷಿಕ ಯೋಜನೆಗಳು ಶೋಷಿತ ಸಮುದಾಯಗಳನ್ನು ತಲುಪಲಿಲ್ಲ. ಛಲವಾದಿ-ಮಾದಿಗ ಸಮುದಾಯ ಒಟ್ಟಾಗಿ ತಮ್ಮ ಹಕ್ಕನ್ನು ಕೇಳಲು ಮುಂದಾಗಿವೆ. ಒಳ ಮೀಸಲಾತಿ ಪಡೆಯಲು ಹೋರಾಟ ಮಾಡಬೇಕಾಗಿದೆ ಎಂದು ಹೇಳಿದರು.
ನಿವೃತ್ತ ಎಸ್ಪಿ ಎನ್. ರುದ್ರಮುನಿ ಮಾತನಾಡಿ, ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹೊರತಾಗಿ ಒಳ ಮೀಸಲಾತಿ ನೀಡದೇ ಇರುವುದರಿಂದ ಅನೇಕ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿ ಮಾಡಲೇಬೇಕು ಎಂದು ಆಗ್ರಹಿಸಿದರು.
ಒಳ ಮೀಸಲಾತಿ ಜಾರಿಗೆ ಬರುವವರೆಗೂ ರಾಜ್ಯದಲ್ಲಿ ನಡೆಯುವ ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ನೇಮಕಾತಿ ಸ್ಥಗಿತಗೊಳಿಸಬೇಕು. ಹಣಕಾಸಿನ ಮತ್ತು ಇತರೆ ಸೌಲಭ್ಯಗಳನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ಈ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಒಳಗೊಂಡಂತೆ ವಿವಿಧ ಸ್ವರೂಪದ ಹೋರಾಟಗಳನ್ನು ಮಾಡುವುದಾಗಿ ಎಚ್ಚರಿಸಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ಹಾಲೇಶ್ ಮಾತನಾಡಿ, ಶಾಂತಿಯುತ ಹೋರಾಟ ನಡೆಸಿದರೆ ಸಾಲದು, ಇಡೀ ರಾಜ್ಯಾದ್ಯಂತ ಉಗ್ರವಾದ ಹೋರಾಟ ನಡೆಸಬೇಕಾಗಿದೆ. ರೈಲು, ಬಸ್ ತಡೆ ಚಳವಳಿ ಸೇರಿದಂತೆ ವಿವಿಧ ಹಂತದ ಹೋರಾಟಗಳನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಒಕ್ಕೂಟದ ಮುಖಂಡರಾದ ಶ್ರೀಧರ್ ಕಲಿವೀರ, ರವಿನಾರಾಯಣ್, ಬಿ.ಹೆಚ್.ವೀರಭದ್ರಪ್ಪ, ಹೆಚ್.ಮಲ್ಲೇಶ್, ಮಲ್ಲಿಕಾರ್ಜುನ್ ಹಲಸಂಗಿ, ಆಲೂರು ನಿಂಗರಾಜ್, ಬಿ.ಎಸ್.ಪುರುಷೋತ್ತಮ್, ಸಿ.ಎಂ.ಬಸವರಾಜ್, ಎಲ್.ಹೆಚ್. ಸಾಗರ್, ಬಿ.ಹೆಚ್.ಉದಯಕುಮಾರ್, ಕೆ.ಎಸ್. ಗೋವಿಂದರಾಜ್, ಹೆಗ್ಗೆರೆ ರಂಗಪ್ಪ, ಎಸ್.ಶೇಖರಪ್ಪ, ಕುಂದುವಾಡ ಮಂಜುನಾಥ್, ಎಸ್. ಮಲ್ಲಿಕಾರ್ಜುನ್, ಶಂಕರಪ್ಪ, ನಿಜಗುಣ, ಹೆಚ್.ಸಿ. ಗುಡ್ಡಪ್ಪ, ಕೆ.ಏಕಾಂತಪ್ಪ, ನಾಗಭೂಷಣ್, ಎಂ.ನೀಲಗಿರಿಯಪ್ಪ, ಶಂಭುಲಿಂಗಪ್ಪ, ಓಂಕಾರಪ್ಪ, ಸೋಮಲಾಪುರದ ಹನುಮಂತಪ್ಪ, ಮಂಜುನಾಥ್ ಕಣಿವೆಹಳ್ಳಿ, ಆರ್. ನಾಗಪ್ಪ, ಶಿವಣ್ಣ, ಹೆಚ್.ಕೆ.ಬಸವರಾಜ್ ಸೇರಿದಂತೆ ಅನೇಕರಿದ್ದರು.