ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಎಸ್ಸೆಸ್ಸೆಂ
ಬೆಂಗಳೂರು, ಅ. 23 – ಗಣಿ ಮಾಲೀಕರು ಸರ್ಕಾರ ಹಾಗೂ ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಸಮರ್ಪಕವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಜಧನವನ್ನು ಸಂಗ್ರಹ ಮಾಡಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿರ್ದೇಶಿಸಿದರು.
ಇಲ್ಲಿನ ತಮ್ಮ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧ ಪಟ್ಟ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎ.ಎಸ್.ಪಿ ಯೋಜನೆಯಿಂದ ತೆರಿಗೆ ಕಟ್ಟಲು ಗಣಿ ಮಾಲೀಕರುಗಳಿಗೆ ಸಮಸ್ಯೆಯಾಗುತ್ತಿದೆ, ಸಿಮೆಂಟ್ ಕಂಪನಿಯವರಿಗೆ ಜಿ.ಎಸ್.ಟಿ.ಯಿಂದ ತೊಂದರೆಯಾಗಿದೆ ಎನ್ನುವ ದೂರು ಕೇಳಿ ಬಂದಿದೆ. ಅಧಿಕಾರಿಗಳು ಸಂಬಂಧ ಪಟ್ಟವರ ಕುಂದು ಕೊರತೆಗಳನ್ನು ಆಲಿಸಬೇಕು ಎಂದರು.
2019-20 ರಿಂದ 2024-25ನೇ ಸೆಪ್ಟೆಂಬರ್ ರವರೆಗೆ ಮುಖ್ಯ ಖನಿಜ ಹಾಗೂ ಉಪ ಖನಿಜಗಳಿಗೆ ಸಂಬಂಧಿಸಿದಂತೆ ವಸೂಲಾಗಿರುವ ರಾಜಧನದ ರಾಜಸ್ವ ಸಂಗ್ರಹಣೆ ತ್ವರಿತಗತಿಯಲ್ಲಿ ಸಾಗಬೇಕು ಎಂದು ತಿಳಿಸಿದ ಸಚಿವರು, ಪರಿಸರ ವಿಮೋಚನಾ ಪ್ರಮಾಣ ಪತ್ರಕ್ಕೆ ಅನುಗುಣವಾಗಿ ಕಲ್ಲು ಗಣಿ ಗುತ್ತಿಗೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಪರಿಸರ ವಿಮೋಚನಾ ಪತ್ರ ಪಡೆದ ಪ್ರಮಾಣಕ್ಕೂ, ಪರ್ಮಿಟ್ ನೀಡಿದ ಪ್ರಮಾಣಕ್ಕೂ ಮತ್ತು ಸರ್ಕಾರಿ ಕಾಮಗಾರಿಗಳಲ್ಲಿ ಬಳಸಬೇಕಾದ ಪ್ರಮಾಣಕ್ಕೂ ಹಾಗೂ ಪರ್ಮಿಟ್ ಪಡೆದ ಪ್ರಮಾಣ ಸಂಗ್ರಹದಲ್ಲಿ ಗಣಿ ಇಲಾಖೆ ವ್ಯಾಪ್ತಿಯ ರಾಜಧನ ಸೋರಿಕೆಯನ್ನು ತಡೆಗಟ್ಟುವುದರ ಜೊತೆ ಜೊತೆಗೆ ಜನಸಾಮಾನ್ಯರಿಗೂ ಕೂಡ ತೊಂದರೆ ಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯದ ಯಾವ ಯಾವ ಭಾಗಗಳಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧ ಪಟ್ಟಂತೆ ಸಮಸ್ಯೆಗಳಿವೆಯೋ ಅವುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ಸಚಿವರು ನೀಡಿದರು.
ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.