ಇಸ್ರೋಗಿದೆ ತಂತ್ರಜ್ಞಾನ ಉತ್ತೇಜಿಸುವ ಗುರಿ

ಇಸ್ರೋಗಿದೆ ತಂತ್ರಜ್ಞಾನ ಉತ್ತೇಜಿಸುವ ಗುರಿ

ಸ್ಪೇಸ್ ಆನ್‌ವ್ಹೀಲ್ಸ್ ಪ್ರದರ್ಶನದಲ್ಲಿ ಇಸ್ರೋ ವಿಜ್ಞಾನಿ ಪಿ.ವಿ.ಎನ್.ಮೂರ್ತಿ

ದಾವಣಗೆರೆ, ಅ.23- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ವಿಜ್ಞಾನ ಮತ್ತು ತಂತ್ರಜ್ಞಾನ ಉತ್ತೇಜಿಸುವ ಗುರಿ ಮತ್ತು ಉದ್ದೇಶ ಹೊಂದಿದ್ದು, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಂಡು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬೇ ಕೆಂದು ಇಸ್ರೋ ವಿಜ್ಞಾನಿ ಪಿ.ವಿ.ಎನ್.ಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬುಧವಾರ ಇಸ್ರೋ ಮತ್ತು ಶ್ರೀ ಸತ್ಯಸಾಯಿ ವಿದ್ಯಾವಾಹಿನಿ ಜಂಟಿಯಾಗಿ ಆಯೋಜಿಸಿದ್ದ ಸ್ಪೇಸ್ ಆನ್‌ವ್ಹೀಲ್ಸ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗ್ಗೆ ಹೆಚ್ಚು ಹೆಚ್ಚು ಜ್ಞಾನ ಸಂಪಾದಿಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಬಿ.ಇಟ್ನಾಳ್, ನಮ್ಮ ಸಂವಿಧಾನದ ಮೂಲಭೂತ ಕರ್ತವ್ಯಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ ಕೊಳ್ಳುವುದು ಒಂದಾಗಿದೆ ಎಂದು ಹೇಳಿದರು.

ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷರಾದ  ಕೆ.ಆರ್.ಸುಜಾತಕೃಷ್ಣ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಎಂದು ಕೇಳುವ ಬದಲು ಸಮಾಜಕ್ಕಾಗಿ ನಾವೇನು ಕೊಡುಗೆ ಕೊಟ್ಟಿದ್ದೇವೆ ಎಂದು ಚಿಂತಿಸಬೇಕೆಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಇಸ್ರೋದ ಹಿರಿಯ ವಿಜ್ಞಾನಿ ಪಿ.ವಿ.ಎನ್. ಮೂರ್ತಿ ಅವರನ್ನು ಗೌರವಿಸಲಾಯಿತು.

ಡಿಡಿಪಿಐ ಜಿ.ಕೊಟ್ರೇಶ್, ತಹಶೀಲ್ದಾರ್ ಡಾ.ಅಶ್ವತ್ಥ್‌, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷರಾದ ಎ.ಆರ್.ಉಷಾರಂಗನಾಥ್, ಕಾರ್ಯದರ್ಶಿ ಜಿ.ಆರ್.ವಿಜಯಾನಂದ್, ಈಶ್ವರಮ್ಮ ಶಾಲಾಡಳಿತ ಮಂಡಳಿ ಖಜಾಂಚಿ ಎ.ಪಿ.ಸುಜಾತ, ಖಾಸಗಿ ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ಶ್ರೀ ಸತ್ಯಸಾಯಿ ವಿದ್ಯಾ ವಾಹಿನಿಯ ಸಂಚಾಲಕರಾದ ಸುಬ್ರಮಣ್ಯ, ಗೌತಮ್, ವೆಂಕಟೇಶ್ ಬಡಿಗೇರ್, ಈಶ್ವರಮ್ಮ ಶಾಲೆಯ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್, ಉಪ ಪ್ರಾಂಶುಪಾಲರಾದ ಜಿ.ಎಸ್.ಶಶಿರೇಖಾ ಇದ್ದರು.  ಶಿಕ್ಷಕಿ ರಂಜನಿ ಸ್ವಾಗತಿಸಿದರು. ವಿ.ಸುನೀತಾ ನಿರೂಪಿಸಿದರು. ಕೆ.ಎಸ್.ಪ್ರಭುಕುಮಾರ್ ವಂದಿಸಿದರು.

error: Content is protected !!