ಆಸ್ತಿ ನೋಂದಣಿಗೆ ಹಲವು ಕಂಟಕ… ಜನರಿಗೆ ಸಂಕಟ

ಆಸ್ತಿ ನೋಂದಣಿಗೆ ಹಲವು ಕಂಟಕ… ಜನರಿಗೆ ಸಂಕಟ

ಕಡ್ಡಾಯವಾಗಿ ನೋಂದಣಿ ಸ್ಥಗಿತವಾಗಿಲ್ಲ. ನೂತನ ಕಾಯ್ದೆ ಕುರಿತು ಕೇಂದ್ರ ಇಲಾಖೆಯಿಂದ ಸ್ಪಷ್ಟನೆ ಕೇಳುತ್ತಿದ್ದೇವಷ್ಟೇ.

– ವೀಣಾ ಆರ್.ಎಲ್., ಉಪ ನೋಂದಣಾಧಿಕಾರಿ

ಆಧಾರ್ ತಿದ್ದುಪಡಿ, ಇ-ಸ್ವತ್ತು ವಿಳಂಬ, ಇದೀಗ ನೋಂದಣಿ ಸ್ಥಗಿತ: ಜನತೆ ಹೈರಾಣ

ದಾವಣಗೆರೆ: ರಾಜ್ಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಸೇರಿದಂತೆ ಎಲ್ಲ ರೀತಿಯ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಸದಾ ಜನರಿಂದ ತುಂಬಿರುತ್ತಿದ್ದ ದಾವಣಗೆರೆ ಪಿ.ಬಿ. ರಸ್ತೆಯಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿಯೂ ಬಣಗುಡುತ್ತಿದೆ.

`ನೋಂದಣಿ  ಕಾಯ್ದೆ 1908ರಲ್ಲಿ 22ಬಿ ಹೊಸ ಸೆಕ್ಷನ್ ಪರಿಚಯಿಸುವುದರಿಂದ ಕೇಂದ್ರ ಕಚೇರಿಯಿಂದ ಸರಿಯಾದ ನಿರ್ದೇಶ ನಗಳು ಬರುವವರೆಗೂ ದಸ್ತಾವೇಜುಗಳ ಪರಿಶೀಲನೆಯನ್ನು ಅನಿರ್ದಿಷ್ಟಾವಧಿ ವರೆಗೆ ಮುಂದೂಡುತ್ತಿದ್ದೇವೆ’ ಎಂದು ನೋಂದಣಾಧಿಕಾರಿ ಕಚೇರಿಯಲ್ಲಿ ಚಿಕ್ಕದಾಗಿ ಬೋರ್ಡ್ ಹಾಕಲಾಗಿದೆ.

 ಕಳೆದ ಶುಕ್ರವಾರ ಹಾಗೂ ಶನಿವಾರ ಅರ್ಜಿ ಸಲ್ಲಿಸಿದ್ದ ಆಸ್ತಿಗಳು  ಮಾತ್ರ ಸೋಮವಾರ ನೋಂದಣಿಯಾಗಿದೆ. 

ಪ್ರತಿ ದಿನ 100 ರಿಂದ 130 ನೋಂದಣಿಗಳು ನಡೆಯುತ್ತಿದ್ದ ಈ ಕಚೇರಿಯು, ಬೆಳಿಗ್ಗೆಯಿಂದಲೇ ಆಸ್ತಿ ಕೊಳ್ಳುವವರು ಹಾಗೂ ಕೊಡುವವರಿಂದ ತುಂಬಿಕೊಂಡಿರುತ್ತಿತ್ತು. ಆದರೆ ನೋಂದಣಿ ಸ್ಥಗಿತ ವಿಷಯ ತಿಳಿದಿದ್ದರಿಂದ ಯಾರೂ ಇತ್ತ ಸುಳಿದಿಲ್ಲ.  ಸದಾ ಬ್ಯುಸಿಯಾಗಿರುತ್ತಿದ್ದ ಕಚೇರಿ ಸಿಬ್ಬದಿಗಳು, ಪತ್ರ ಬರಹಗಾರು ಇಂದು ಯಾವುದೇ ಒತ್ತಡವಿಲ್ಲದೆ ತಮ್ಮ ಅಳಿದುಳಿದ ಕಾರ್ಯಗಳಲ್ಲಿ ಮಗ್ನರಾಗಿದ್ದರು.

ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ಮೋಸ, ವಂಚನೆಯಾಗದಂತೆ ತಡೆಗಟ್ಟಲು ರಾಜ್ಯ ಸರ್ಕಾರ ಇ–ಖಾತೆ ಕಡ್ಡಾಯ ಮಾಡಿತ್ತಾದರೂ, ಸರ್ವರ್‌ ಸಮಸ್ಯೆ, ಸಮರ್ಪಕ ದಾಖಲೆ ನೀಡದೇ ಇರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಇ-ಖಾತೆ ಪಡೆಯಲು ಜನರು ಹರಸಾಹಸ ಪಡುತ್ತಿದ್ದರು. ಮಹಾನಗರ ಪಾಲಿಕೆಯಲ್ಲಿ ಸಾವಿರಾರು ರೂಪಾಯಿ ಹಣ ಕೊಟ್ಟು ಇ ಖಾತೆ ತರಬೇಕಿದೆ ಎಂಬ ಆರೋಪವೂ  ಕೇಳಿ ಬಂದಿತ್ತು.

ಇದಲ್ಲದೇ, ನೋದಣಿ ಮಾಡಿಸಿಕೊಳ್ಳು ವವರು 10 ವರ್ಷಗಳಿಂದ ಆಧಾರ್ ಕಾರ್ಡ್‌ ತಿದ್ದುಪಡಿ ಮಾಡದೇ ಇರುವುದೂ ಸಹ ನೋಂದಣಿ ವಿಳಂಬಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ಕಾರಣಕ್ಕಾಗಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವುದು ಆಸ್ತಿ ಖರೀದಿಸುವ ಹಾಗೂ ಮಾರಾಟ ಮಾಡುವವರಿಗೆ ತಲೆ ನೋವಾಗಿ ಪರಿಣಮಿಸಿದೆ.

ಏಕೆ ನೋಂದಣಿ ಸ್ಥಗಿತ?:  ರಾಜ್ಯದಲ್ಲಿ ಕೇಂದ್ರದ ನೋಂದಣಿ ಕಾಯಿದೆ-1908ಗೆ ತಿದ್ದುಪಡಿ ತರುವ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ -2023ಕ್ಕೆ ರಾಷ್ಟ್ರಪತಿಗಳು ಕಳೆದ ಅ.8ರಂದು ರಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಅ.19 ರಂದು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

ಈ ತಿದ್ದುಪಡಿಯಿಂದ, ನಕಲಿ ದಾಖಲೆ ಆಧರಿಸಿ ಆಸ್ತಿ ದಸ್ತಾವೇಜು ನೋಂದಣಿ ಅಥವಾ ನಕಲಿ ದಸ್ತಾವೇಜು ಸೃಷ್ಟಿ ಮಾಡಿದರೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ರದ್ದುಪಡಿಸಲು ಅಧಿಕಾರ ನೀಡಲಾಗಿದೆ. ಜತೆಗೆ ನಕಲಿ ದಾಖಲೆ ಆಧರಿಸಿ ನೋಂದಣಿ ಮಾಡಿದ ಉಪ ನೋಂದಣಾಧಿಕಾರಿಗಳಿಗೆ 3 ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದು ಎಂದು ಹೇಳಲಾಗಿದೆ. ಹೀಗಾಗಿ ಉಪ ನೋಂದಣಾಧಿಕಾರಿಗಳು ರಾಜ್ಯಾದ್ಯಂತ ಸೋಮವಾರ ಬೆಳಗ್ಗೆಯಿಂದ ದಸ್ತಾವೇಜುಗಳ ಪರಿಶೀಲನೆ ಹಾಗೂ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ.

– ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ, [email protected]

error: Content is protected !!