ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಅತ್ಯಗತ್ಯ

ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಅತ್ಯಗತ್ಯ

ಶ್ರೀ ಬಸವ ಪ್ರಭು ಸ್ವಾಮೀಜಿ

ದಾವಣಗೆರೆ, ಅ. 21- ರಂಗಕಲೆ ಭಾರತೀಯ ಸಂಸ್ಕೃತಿಯ ಪ್ರತೀಕ. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇಂದಿನ ಯುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಿ ಮಂದಿರದಲ್ಲಿ ವೃತ್ತಿ ರಂಗಭೂಮಿ ರಂಗಾಯಣ  ಇವರ ವತಿಯಿಂದ ಇಂದು ಹಮ್ಮಿಕೊಂಡಿದ್ದ ರಂಗ ಸಂಗೀತ-ರಂಗಗೀತೆಗಳ ಕಲಿಕಾ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಎಲ್ಲರೂ ಟಿವಿ ಸಂಸ್ಕೃತಿಗೆ ಮಾರು ಹೋಗಿದ್ದು, ಕೆಲ ಪ್ರತಿಭೆಗಳಿಗೆ ಮಾತ್ರ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಆದರೆ ಎಲೆ ಮರೆಕಾಯಿಯಂತಿರುವ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಸಿಗದೇ ಕಲಾ ಪ್ರತಿಭೆ ಕಮರಿ ಹೋಗುತ್ತಿದೆ. ಇಂತಹ ಕಲಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ, ಕೊಡುವ ಮೂಲಕ ರಂಗ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.

ರಂಗಭೂಮಿ ಜಗತ್ತಿನ ಮೊದಲ ವಿಶ್ವವಿದ್ಯಾನಿಲಯ. ಇದು ಎಲ್ಲರಿಗೂ ಜ್ಞಾನದ ಬೆಳಕನ್ನು ನೀಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸೊರಗುತ್ತಿರುವ ರಂಗಭೂಮಿ ಮತ್ತು ರಂಗಕಲೆಯನ್ನು ಉಳಿಸಿ, ಬೆಳೆಸಬೇಕಾಗಿದೆ. ರಂಗಭೂಮಿ ಕೇವಲ ಮನರಂಜನೆಯನ್ನಷ್ಟೇ ಅಲ್ಲದೇ ಜೀವನ ಶಿಕ್ಷಣವನ್ನು ಕಲಿಸುತ್ತದೆ. ರಂಗಕಲೆ ಜ್ಞಾನದ ಬೆಳಕು. ಹಿಂದೆ ಶಿಕ್ಷಣ ಕೇವಲ ಒಂದು ವರ್ಗಕ್ಕೆ ಸೀಮಿತವಾಗಿತ್ತು. ಹನ್ನೆರಡನೇ ಶತಮಾನದಲ್ಲಿ ಮಹಿಳೆಯರನ್ನೊಳಗೊಂಡಂತೆ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ಎನ್ನುವಂತೆ ಎಲ್ಲರಿಗೂ ಶಿಕ್ಷಣ ನೀಡಲಾಯಿತು. ಅಕ್ಕಮಹಾದೇವಿ ಕೂಡ ಜಗತ್ತಿನ ಮೊದಲ ಕವಯತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಎಂದರು.

ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಆನಂದ ಆರ್.ಪಾಟೀಲ ಮಾತನಾಡಿ, ದಾವಣಗೆರೆ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಸಂಗೀತ ಕ್ಷೇತ್ರದಲ್ಲಿ ಪಂಡಿತ್ ಪುಟ್ಟರಾಜ ಕವಿ ಗವಾಯಿ ಹಾಗೂ ಪಂಚಾಕ್ಷರ ಗವಾಯಿಗಳು ಸಲ್ಲಿಸಿದ ಸೇವೆ ಅಮೋಘವಾದುದು. ಅರಮನೆ ವಿದ್ಯೆಯನ್ನು ಗುರು ಮನೆಗೆ ತಂದ ಕೀರ್ತಿ ಉಭಯ ಗುರುಗಳದ್ದು ಎಂದು ಹೇಳಿದರು.

ಹಿರಿಯ ಕಲಾವಿದ ಆರ್.ಟಿ. ಅರುಣ್ ಕುಮಾರ್ ಮಾತನಾಡಿ, ರಂಗಭೂಮಿಗೆ ತನ್ನದೇ ಆದ ಶಿಸ್ತಿದೆ. ಯಾವುದೇ ಕಲಾ ಪ್ರಕಾರವಿರಲಿ ಅದಕ್ಕೆ ಮೂಲ ರಂಗಭೂಮಿ. ರಂಗಭೂಮಿ ಧ್ಯೇಯ ಒಂದೇ ಆಗಿದ್ದರೂ ಸಹ ತಂತ್ರಜ್ಞಾನ ಬದಲಾದಂತೆ ಅದಕ್ಕೆ ಅನುಗುಣವಾಗಿ ಕಲೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಜನರನ್ನು ನೇರವಾಗಿ ತಲುಪುವ ಏಕೈಕ ಮಾಧ್ಯಮ ರಂಗಭೂಮಿ. ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಮಾತನಾಡಿ,  ರಾಜ್ಯದಲ್ಲಿ ಪ್ರತಿ ವರ್ಷ 18 ಸಾವಿರ ವೃತ್ತಿ ರಂಗಭೂಮಿ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಕೇವಲ ಸರಕಾರದ ಅನುದಾನವಲ್ಲದೇ ಜನರ ಸಹಕಾರದಿಂದ ರಂಗಭೂಮಿ ಉಳಿವು ಸಾಧ್ಯವಾಗಿದೆ ಎಂದರು.

ಕಾರ್ಯಾಗಾರದ ನಿರ್ದೇಶಕ ಧಾರವಾಡದ ರಾಘವ ಕಮ್ಮಾರ ಮಾತನಾಡಿದರು. ಹಿರಿಯ ರಂಗಕಲಾವಿದೆ, ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ನಾಗರತ್ನಮ್ಮ ಸೋಗಿ ಅವರು ರಂಗಾಭಿನಯ ಮತ್ತು ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಗೀತ ಶಿಕ್ಷಕ ಬಸವನಗೌಡ, ರಂಗಕರ್ಮಿ ಎಸ್.ಎಸ್.ಸಿದ್ಧರಾಜು, ಹಿರಿಯ ಪತ್ರಕರ್ತ ಬಸವರಾಜ ಐರಣಿ, ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮತ್ತಿತರರು ಭಾಗವಹಿಸಿದ್ದರು. 

error: Content is protected !!