ವಿದ್ಯಾಪೋಷಕ ಸಂಸ್ಥೆಯ ಪ್ರತಿಭಾ ಪುರಸ್ಕಾರದಲ್ಲಿ ನಿವೃತ್ತ ಪ್ರಾಚಾರ್ಯ ಕೆಂಚಪ್ಪ ವ್ಯಾಕುಲತೆ
ದಾವಣಗೆರೆ, ಅ.20- ಬಡತನವಿದ್ದಲ್ಲಿ ಪ್ರತಿಭೆಯ ಚಿಗುರುಗಳಿರುತ್ತವೆ. ಇಂತಹ ಬಡ ಹಾಗೂ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಬೆಳೆಸುವ ವಿದ್ಯಾಪೋಷಕ ಸಂಸ್ಥೆಯ ಕಾರ್ಯ ವನ್ನು ನಿವೃತ್ತ ಪ್ರಾಚಾರ್ಯ ಕೆಂಚಪ್ಪ ಶ್ಲ್ಯಾಘಿಸಿದರು.
ವಿದ್ಯಾಪೋಷಕ ಸಂಸ್ಥೆ ವತಿಯಿಂದ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣದ ವ್ಯಾಪಾರೀಕರಣದಿಂದಾಗಿ ಬಡ ವಿದ್ಯಾರ್ಥಿಗಳ ಪ್ರತಿಭೆ ಮರೆಯಾಗುತ್ತಿವೆ. ಹಾಗಾಗಿ ಮಕ್ಕಳು ಬದುಕಿನಲ್ಲಿ ದೊಡ್ಡ ಗುರಿ ಹೊಂದುವ ಜತೆಗೆ ಬಡತನದಲ್ಲೇ ಸಾಧಿಸುವ ಹಠ ಮಕ್ಕಳಲ್ಲಿ ಬರಬೇಕು ಎಂದರು.
ಬಡತನ ಶಾಪ ಹಾಗೂ ಶಾಶ್ವತವಲ್ಲ. ಶ್ರಮದಿಂದ ಗುರಿಗೆ ಬದ್ಧವಾಗಿ ಓದಿನಲ್ಲಿ ತೊಡಗಿದರೆ ಸಿರಿವಂತರಾಗುವಿರಿ ಎಂದು ಮಕ್ಕಳಿಗೆ ಹುರಿದುಂಬಿಸಿದರು.
ಸಂದೀಪ್ ನರ್ಸಿಂಗ್ ಹೋಮ್‌ನ ಡಾ.ಹೆಚ್.ಎನ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಸಮಾಜದಲ್ಲಿ ಹಣವಂತರು ಗುಣವಂತರಾದ ಸಂಖ್ಯೆ ವಿರಳ. ಕೆಲವೊಂದಿಷ್ಟು ಜನ ದುಡಿದ ದುಡ್ಡಲ್ಲೇ ಶೈಕ್ಷಣಿಕ ಸಹಾಯ ಹಾಗೂ ಸಮಾಜ ಸೇವೆಗಾಗಿ ಮುಡಿಪಾಗಿಡುತ್ತಾರೆ. ಇಂತಹ ದಾನಿಗಳ ಕಾರ್ಯ ಸಮಾಜದಲ್ಲಿ ಪ್ರಶಂಸನಿಯ ಎಂದರು.
ವಿದ್ಯಾಪೋಷಕ ಸಂಸ್ಥೆಯು ಏರುಮುಖ ಕಾಣಲು ಕೇವಲ ದಾನಿಗಳಿಂದಷ್ಟೇ ಅಲ್ಲ. ಸ್ವಯಂ ಸೇವಕರ ಶ್ರಮದಿಂದಲೂ ಬೆಳವಣಿಗೆ ಕಂಡಿದೆ ಎಂದರು.
ಪ್ರಾಚಾರ್ಯ ಡಾ. ಅರುಣ ಮಾತನಾಡಿ, ಶೈಕ್ಷಣಿಕ ಪ್ರಗತಿ ಹೊಂದಲು ವಿದ್ಯಾರ್ಥಿಗಳು ಪ್ರೋತ್ಸಾಹ ಧನ ಬಳಸಿಕೊಳ್ಳಬೇಕು. ದಾನದ ಹಣದ ಫಲಾನುಭವಿಗಳಾಗಿ ಉನ್ನತ ಮಟ್ಟದಲ್ಲಿ ಬೆಳೆಯುವ ಮೂಲಕ ಸಮಾಜದಲ್ಲಿ ದಾನಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾ ಪೋಷಕ ಸಂಸ್ಥೆಯ ಧೇಯೋದ್ದೇಶಗಳಿಗೆ ಬದ್ಧರಾಗಿ ಫಲಾನುಭವಿ ವಿದ್ಯಾರ್ಥಿಗಳು ಓದಿನಲ್ಲಿ ತೊಡಗಬೇಕು. ಮತ್ತು ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ನಾಗರತ್ನಮ್ಮ ಪ್ರಾಸ್ತಾವಿಕ ಮಾತನಾಡಿ, ಪ್ರತಿಭೆಯೇ ದೇಶದ ಆಸ್ತಿಯಾಗಿದೆ. ಶಿಕ್ಷಣಕ್ಕೆ ಬಡತನ ಅಡ್ಡಿಯಾಗಬಾರದು ಎಂಬ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ಸಂಸ್ಥೆಯು ಯುವಕರು ಕೆಲಸ ಪಡೆಯಲು ಬೇಕಾದ ಕೌಶಲ್ಯ ತರಬೇತಿಯನ್ನೂ ಸಹ ನೀಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಹಂತಗಳಲ್ಲಿ ವ್ಯಾಸಂಗ ಮಾಡುವ 138 ವಿದ್ಯಾರ್ಥಿಗಳಿಗೆ ಒಟ್ಟು 12.10 ಲಕ್ಷ ರೂ.ಗಳ ಸಹಾಯ ಧನ ನೀಡಲಾಯಿತು.
ಈ ವೇಳೆ ನಿವೃತ್ತ ಪ್ರಾಚಾರ್ಯ ಶಿವಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ರವಿ ನಾರಾಯಣ್, ಚನ್ನಪ್ಪ ಪಲ್ಲಾಗಟ್ಟೆ, ಸ್ವಯಂ ಸೇವಕ ಬಸವರಾಜ, ವೈ.ಬಿ. ಸುಹಾಸ್, ಮಧು ಮತ್ತಿತರರಿದ್ದರು. ಐ.ಕೆ. ಸಾಹಿತ್ಯ ಅನಿಸಿಕೆ ಹೇಳಿದರು.
ಬಿ.ಜಿ. ಕೀರ್ತನಾ ಪ್ರಾರ್ಥಿಸಿದರು. ನೀಲಾಂಬರಿ ವಂದಿಸಿದರು.