ಕಳೆದ ವರ್ಷ ಮಳೆ ಇಲ್ಲದೆ ಇಳುವರಿ ಕುಂಠಿತ, ಈ ಬಾರಿ ಕೊಯ್ಲು ಸಮಯದಲ್ಲಿ ಮಳೆ
ದಾವಣಗೆರೆ, ಅ. 18 – ಕಳೆದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, ಈ ಬಾರಿ ಸಮಯಕ್ಕೆ ಸರಿಯಾಗಿ ಮಳೆ ಸುರಿದ ಕಾರಣ ಎಲ್ಲ ಕಡೆಗೂ ಬೆಳೆಯು ಚೆನ್ನಾಗಿ ಬಂದಿತ್ತು. ಆದರೆ ಕಳೆದೊಂದು ವಾರದಿಂದ ಸುರಿಯುತ್ತಿರುವ ಹಿಂಗಾರು ಮಳೆಯಿಂದಾಗಿ ಮೆಕ್ಕೆಜೋಳ ಬೆಳೆದ ರೈತರು ಆತಂಕಕ್ಕೀಡಾಗಿದ್ದಾರೆ.
ಹೌದು, ‘ಮೆಕ್ಕೆಜೋಳದ ಕಣಜ’ ಎಂದೇ ಹೆಸರಾಗಿರುವ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ ರೈತ ವರುಣನ ಅವಕೃಪೆಗೆ ಒಳಗಾಗಿದ್ದ. ಬರದಿಂದಾಗಿ ಇಳುವರಿ ಕುಸಿತ ಕಂಡು ನಷ್ಟಕ್ಕೊಳಗಾಗಿದ್ದ. ಜಿಲ್ಲೆಯಲ್ಲಿ 1.25 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿತ್ತಾದರೂ, ಈ ಪೈಕಿ ಸುಮಾರು ಶೇ.75ರಷ್ಟು ಬೆಳೆ ಹಾನಿಗೀಡಾಗಿತ್ತು.
ಈ ವರ್ಷ ಉತ್ತಮ ಮಳೆಯಿಂದಾಗಿ ಸಂತಸಗೊಂಡಿದ್ದ. ಆದರೆ ಜೂನ್-ಜುಲೈ ಅವಧಿಯಲ್ಲಿ 20 ದಿನಗಳ ಸತತವಾಗಿ ಸುರಿದ ಮಳೆ, ದಾವಣಗೆರೆ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಬಿತ್ತನೆಯಾಗಿದ್ದ ಮೆಕ್ಕೆಜೋಳಕ್ಕೆ ಕಂಟಕವಾಗಿತ್ತು.
ಕಂದಗಲ್ಲು, ಭೀಮನೆರೆ, ಈರನಹಳ್ಳಿ ಸೇರಿದಂತೆ ಕೆಲವು ಪ್ರದೇಶದಲ್ಲಿ ಬಿತ್ತನೆಯಾ ಗಿದ್ದ ಮೆಕ್ಕೆಜೋಳ ಮಳೆಯಿಂದಾಗಿ ಸಂಪೂರ್ಣ ಹಾನಿಗೊಂಡಿತ್ತು. ಇದೀಗ ಉಳಿದ ಪ್ರದೇಶಗಳಲ್ಲಿ ಬೆಳೆ ಕಟಾವಿಗೆ ಬಂದ ಬೆನ್ನಲ್ಲೇ ಮಳೆ ಸುರಿಯುತ್ತಿದ್ದು, ಮೆಕ್ಕೆಜೋಳ ಫಂಗಸ್ಗೆ ತುತ್ತಾಗುವ ಸಾಧ್ಯತೆಯೂ ಇದೆ ಎನ್ನುತ್ತಿದ್ದಾರೆ ರೈತರು ಹಾಗೂ ಮಾರಾಟಗಾರರು.
ಮಳೆಯ ಕಾರಣದಿಂದ ಮೆಕ್ಕೆಜೋಳ ಮಾರಾಟ ಸ್ಥಗಿತವಾಗಿದೆ. ಇನ್ನು ವಾರ ಮೆಕ್ಕೆಜೋಳ ಹೊಲದಲ್ಲಿ ಕಾಲಿಡಲೂ ಆಗುವುದಿಲ್ಲ. ಸತತ ಮಳೆಯಿಂದ ಮೆಕ್ಕೆಜೋಳವು ಫಂಗಸ್ಗೆ ತುತ್ತಾಗುವ ಸಾಧ್ಯತೆಯೂ ಇದೆ.
– ಬಸವರಾಜ್ ದೊಗ್ಗಳ್ಳಿ, ವ್ಯಾಪಾರಿ, ಎಪಿಎಂಸಿ
ಶೇ.70ರಷ್ಟು ಮೆಕ್ಕೆಜೋಳ ಬೆಳೆ ಕಟಾವಿಗೆ ಬಂದಿದೆ. ಆದರೆ ಮಳೆ ಇರುವುದರಿಂದ ರೈತರು ಕಟಾವು ಮಾಡಿಲ್ಲ. ರೈತರು ಮಳೆ ನೋಡಿ ಕಟಾವು ಮಾಡುತ್ತಾರಾದ್ದರಿಂದ ಮಳೆಯಿಂದಾಗಿ ಹಾನಿಯಾಗದು.
– ಶ್ರೀನಿವಾಸ್ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ
ಬಿತ್ತನೆಯಾದ ಬೆಳೆಯ ಪೈಕಿ ಶೇ.70ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆ ಕಟಾವಿನ ಹಂತದಲ್ಲಿದೆ. ಕೆಲವರು ಕಟಾವು ಮಾಡಿ ಮಾರುಕಟ್ಟೆಗೂ ತಂದಿದ್ದಾರೆ. ಆದರೆ ತೇವಾಂಶ ಕಡಿಮೆ ಇರುವುದರಿಂದ ಮೆಕ್ಕೆ ಜೋಳವನ್ನು ಒಣಗಿಸಲೂ ಸಾಧ್ಯವಾಗುತ್ತಿಲ್ಲ. ಕಾರಣ ಬಿಸಿಲು ಬೀಳುತ್ತಿಲ್ಲ.
ಶುಕ್ರವಾರ ಒಂದಿಷ್ಟು ಮಳೆ ಕಡಿಮೆಯಾಗಿ ಆಗಾಗ ಬಿಸಿಲು ಬೀಳುತ್ತಿ ದೆಯಾದರೂ, ಮಳೆ ಮುಂದುವರೆ ಯಲಿದೆ ಎಂಬ ಹವಾಮಾನ ಇಲಾಖೆಯ ಸೂಚನೆ ರೈತರ ನಿದ್ದೆಗೆಡಿಸಿದೆ.
ಎಥೆನಾಲ್ಗೆ ಮೆಕ್ಕೆಜೋಳ: ಕಬ್ಬು ಮತ್ತು ಅಕ್ಕಿಯಿಂದ ಉತ್ಪಾದನೆ ಮಾಡುತ್ತಿದ್ದ ಎಥೆನಾಲ್ ಅನ್ನು ಈಗ ಮೆಕ್ಕೆಜೋಳ ದಿಂದಲೂ ಉತ್ಪಾದನೆ ಮಾಡಲಾಗುತ್ತಿದೆ. ಕೋಳಿ ಆಹಾರ ಸೇರಿ ಕೆಲವೇ ಕೆಲವು ಉದ್ಯಮಗಳಿಗೆ ಸೀಮಿತ ವಾಗಿದ್ದ ಮೆಕ್ಕೆಜೋಳದಿಂದ ಈಗ ಎಥೆನಾಲ್ ಉತ್ಪಾದನೆ ಮಾಡಲಾಗು ತ್ತಿದ್ದು, ಹೀಗಾಗಿ ಭಾರಿ ಬೇಡಿಕೆಯೂ ಬಂದಿದೆ.
ಪ್ರಸ್ತುತ ಉತ್ತಮ ಗುಣಮಟ್ಟದ ಮೆಕ್ಕೆ ಜೋಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂ ಟಾಲ್ಗೆ 2450 ರೂ.ಗಳಿಗೆ ಮಾರಾಟ ವಾಗುತ್ತಿದೆ. ಈ ಬೆಲೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಿಂತ ಹೆಚ್ಚಾಗಿಯೇ ಇದೆ.
ಕುಕ್ಕುವಾಡ ಸಕ್ಕರೆ ಕಾರ್ಖಾನೆ, ಭದ್ರಾ ಶುಗರ್ ಸೇರಿದಂತೆ ಹಲವು ಸಕ್ಕರೆ ಕಾರ್ಖಾನೆಗಳಲ್ಲಿ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಈ ಕಾರ್ಖಾನೆಗಳಿಗೆ ಪ್ರತಿ ದಿನ ಸಾವಿರಾರು ಕ್ವಿಂಟಾಲ್ ಮೆಕ್ಕೆಜೋಳ ಬೇಕಾಗುತ್ತದೆ ಎನ್ನಲಾಗಿದ್ದು, ಇದು ಮೆಕ್ಕೆಜೋಳ ದರ ಹೆಚ್ಚಳಕ್ಕೆ ಕಾರಣವಾಗಿದೆ.
ಕುಕ್ಕಟೋದ್ಯಮಕ್ಕೆ ಸಂಕಷ್ಟ?: ಮೆಕ್ಕೆ ಜೋಳ ದರ ಏರಿಕೆಯಾಗುತ್ತಿರುವುದರಿಂದ ಕುಕ್ಕುಟೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಕೋಳಿ ಸಾಕಣೆಯಲ್ಲಿ ಮೆಕ್ಕೆಜೋಳವೇ ಪ್ರಮುಖ ಆಹಾರವಾಗಿದೆ. ಈಗ ಮೆಕ್ಕೆಜೋಳದ ದರ ಏರಿಕೆಯಾಗಿದ್ದು, ಕೋಳಿ ಸಾಕಣೆಗೆ ಭಾರೀ ಸಮಸ್ಯೆ ಎದುರಾಗಿದೆ. ಇದು ಮುಂದಿನ ದಿನಗಳಲ್ಲಿ ಮೊಟ್ಟೆ ದರ ಏರಿಕೆಗೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ