ದಾವಣಗೆರೆ, ಅ.16- ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಪ್ರಯುಕ್ತ ಜನಜಾಗೃತಿಗಾಗಿ ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದ ವತಿಯಿಂದ ಇಂದು ನಗರದಲ್ಲಿ ಬೈಕ್ ರ್ಯಾಲಿ ಜರುಗಿತು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಮತ್ತು ಸಮಾಜದ ಮುಖಂಡರು ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾರ್ಚನೆ ಸಲ್ಲಿಸಿ ಬೈಕ್ ರ್ಯಾಲಿ ಗೆ ವಿಧ್ಯುಕ್ತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪ್ರಸನ್ನಾನಂದ ಪುರಿ ಶ್ರೀಗಳು, ಮಹತ್ತರ ಸಾಧನೆಗೈದ ಆದಿಕವಿ ವಾಲ್ಮೀಕಿ ಮುನಿಗಳು ತಮ್ಮ ಆತ್ಮ ಕಲ್ಯಾಣ ಮಾಡಿಕೊಳ್ಳುವ ಜತೆಗೆ ಲೋಕ ಕಲ್ಯಾಣಾರ್ಥಕವಾಗಿ ರಾಮಾಯಣದಂತಹ ಮಹಾನ್ ಕಾವ್ಯ ರಚಿಸಿದ್ದಾರೆ ಎಂದು ಸ್ಮರಿಸಿದರು.
ರಾಜ್ಯದಲ್ಲಿ ನಾಯಕ ಮತ್ತು ತಳವಾರರಲ್ಲದ ಅನ್ಯ ಜನಾಂಗದವರು ನಮ್ಮ ಸಮುದಾಯದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳುತ್ತಿದ್ದು, ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರದಿಂದ 2024ನೇ ಶೈಕ್ಷಣಿಕ ಸಾಲಿನ ನಮ್ಮ ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರೈಜ್ ಮನಿ ಮತ್ತು ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಸಬ್ಸಿಡಿಗಳು ಲಭಿಸಿಲ್ಲ ಎಂದು ದೂರಿದರು.
ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ವಾಲ್ಮೀಕಿ ಸಮಾಜದ ಒಗ್ಗಟ್ಟು ಪ್ರದರ್ಶಿಸಲು ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಮಾಡುತ್ತಾ ಬಂದಿದ್ದೇವೆ ಎಂದರು.
ವಾಲ್ಮೀಕಿ ಮಹರ್ಷಿಗಳು ಕೇವಲ ನಾಯಕ ಸಮಾಜಕ್ಕೆ ಸೀಮಿತವಾಗದೇ ಪ್ರಪಂಚಕ್ಕೆ ಮಾರ್ಗದರ್ಶಿಗಳಾಗಿದ್ದಾರೆ ಎಂದು ಹೇಳಿದರು.
ವಿವಿಧ ಹಳ್ಳಿಗಳಿಂದ ಆಗಮಿಸಿದ ಯುವಕರು ರಾಲಿಯಲ್ಲಿ ಪಾಲ್ಗೊಂಡಿದ್ದರು. ಬೃಹತ್ ಕೇಸರಿ ಮತ್ತು ಬಿಳಿ ಬಾವುಟಗಳು ರಾಲಿಯಲ್ಲಿ ರಾರಾಜಿಸಿದವು.
ಸಮಾಜದ ಮುಖಂಡರುಗಳಾದ ಆರ್.ಎಸ್. ಶೇಖರಪ್ಪ, ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಮೇಯರ್ ವಿನಾಯಕ, ಜಿಲ್ಲಾಧ್ಯಕ್ಷ ವೀರಣ್ಣ, ಯುವ ಘಟಕದ ಅಧ್ಯಕ್ಷ ಬಸವರಾಜ್, ಹದಡಿ ಹಾಲಪ್ಪ, ಅಂಜಿನಪ್ಪ, ಫಣಿಯಾಪುರ ಲಿಂಗರಾಜ್, ಪ್ರವೀಣ್, ಗೋಶಾಲೆ ಸುರೇಶ್, ಪರಶುರಾಮ್ ಸೇರಿದಂತೆ ಸಮಾಜದ ಮುಖಂಡರು ರಾಲಿಯಲ್ಲಿ ಭಾಗವಹಿಸಿದ್ದರು.